ಆರೋಗ್ಯ ಹಕ್ಕು ಕಾಯ್ದೆ ಜಾರಿ ತನ್ನಿ

Health_Jatha
Published on

ತುಮಕೂರು: ರಾಜಸ್ಥಾನದಲ್ಲಿರುವ "ಆರೋಗ್ಯ ಹಕ್ಕು ಮಸೂದೆ" ಮಾದರಿ ಕರ್ನಾಟಕದಲ್ಲೂ ಜಾರಿಯಾಗಬೇಕು ಎಂದು ಡ್ರಗ್​ ಆ್ಯಕ್ಷನ್​ಫೋರಂ ಸಂಸ್ಥಾಪಕ ಸದಸ್ಯ ಡಾ.ಗೋಪಾಲ ದಾಬಡೆ ಆಗ್ರಹಿಸಿದರು.

ನಗರದ ವಿಜ್ಞಾನ ಕೇಂದ್ರದಲ್ಲಿ ಡ್ರಗ್​ ಆ್ಯಕ್ಷನ್​ಫೋರಂ ಕರ್ನಾಟಕ ಹಾಗೂ ಸಾರ್ವತ್ರಿಕ ಆರೋಗ್ಯ ಕರ್ನಾಟಕದ ವತಿಯಿಂದ ಮಂಗಳವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಾವುದೇ ವ್ಯಕ್ತಿಗೆ ವೈದ್ಯಕಿಯ ಸೌಲಭ್ಯ ಉಚಿತವಾಗಿ ನೀಡುವುದುಸರ್ಕಾರದ ಜವಾಬ್ದಾರಿ. ತಮಿಳುನಾಡು, ರಾಜಾಸ್ಥಾನ ಹಾಗೂ ಕೇರಳವನ್ನು ನೋಡಿ ಕರ್ನಾಟಕ ಕಲಿಯಬೇಕು ಎಂದು ಸಲಹೆ ನೀಡಿದರು.

ರಾಜ್ಯದ ಸರ್ಕಾರಿ ಆಸ್ಪತೆಗಳಲ್ಲಿ 400ಕ್ಕು ಹೆಚ್ಚು ಕಳಪೆ ಔಷಧಗಳು ಬಳಕೆಯಾಗುತ್ತಿವೆ. ತಮಿಳುನಾಡು ರಾಜ್ಯದಲ್ಲಿ ಪ್ಯಾರಾಸಿಟಮಲ್​ ಮಾತ್ರೆಯನ್ನು ಕೇವಲ 35 ಪೈಸೆಗೆ ನೀಡುತ್ತಿದ್ದರೆ, ನಮ್ಮ ಕರ್ನಾಟಕದಲ್ಲಿ 2.50 ರೂ.,ಗೆ ಮಾರಾಟ ಮಾಡಲಾಗುತ್ತಿದೆ. ಔಷಧಗಳು ಜನರಿಗೆ ಸರಿಯಾಗಿ ಲಭ್ಯವಾಗಬೇಕು. ಕಳಪೆ ಗುಣಮಟ್ಟದ ಔಷಧಗಳನ್ನು ಪೂರೈಕೆ ಮಾಡಲಾಗುತ್ತಿದ್ದರೂ ಕೆಎಸ್​ಎಂಎಸ್​ಸಿಎಲ್​ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ. ಸರಬರಾಜು ಕಂಪನಿಗಳ ವಿರುದ್ಧ ರಾಜ್ಯ ಸರ್ಕಾರ ಸರಿಯಾದ ಕಾನೂನು ಕ್ರಮ ತೆಗೆದುಕೊಳ್ಳದೆ ಔಷಧಗಳನ್ನು ಖರೀದಿಸುವ ಮೂಲಕ ಅನಾಹುತಗಳಿಗೆ ಎಡೆಮಾಡಿಕೊಟ್ಟಿದೆ ಎಂದರು.

ಕಳಪೆ ಗುಣಮಟ್ಟದ ಔಷಧಿಗಳ ಪೂರೈಕೆಯಿಂದ ಕರ್ನಾಟಕ ವಿವಿಧ ಜಿಲ್ಲಾಸ್ಪತ್ರಗಳಲ್ಲಿ ಬಾಣಂತಿಯರ ಸಾವುಗಳು ಸಂಭವಿಸುತ್ತಿವೆ. ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಬಾಣಂತಿಯರ ಸಾವು ಪ್ರಕರಣಗಳು ಘಟಿಸುತ್ತಿರುವುದು ಕರ್ನಾಟಕದಲ್ಲಿ. ಅದರಲ್ಲೂ ಕಲ್ಯಾಣ ಕರ್ನಾಟಕದಲ್ಲಿ ಹೆಚ್ಚು. ಈ ಬಗ್ಗೆ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಲು ಫೆ.3 ರಂದು ಬೀದರ್​ ನಿಂದ ಶುರುವಾದ 'ಆರೋಗ್ಯ ಹಕ್ಕಿನ ಜಾಥಾ' ಫೆ.14 ರಂದು ಬೆಂಗಳೂರು ತಲುಪಲಿದೆ ಎಂದು ಡಾ.ಗೋಪಾಲ ದಾಬಡೆ ತಿಳಿಸಿದರು.

ಪಶ್ಚಿಮ ಬಂಗಾಳ ಮೂಲದ ಸರಬರಾಜು ಕಂಪನಿ ಹಲವಾರು ಸಂದರ್ಭದಲ್ಲಿ ಕಳಪೆ ಗುಣಮಟ್ಟದ ಔಷಧ ಪೂರೈಸಿರುವುದು ಗೊತ್ತಿದ್ದರೂ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸುವ ಮುನ್ನ ನೋಟೀಸ್​ ನೀಡಬೇಕಿತ್ತು. ಇದನ್ನು ಅನುಸರಿಸದ ಕಾರಣ ತಡೆಯಾಜ್ಞೆ ಕೋರಿ ಕಂಪನಿಯು ಹೈಕೋರ್ಟ್​ ಮೊರೆ ಹೋಗಿದೆ. ಈ ಕಂಪನಿ ಪೂರೈಸಿರುವ ಐ.ವಿ.ದ್ರಾವಣ ದಿಂದಾಗಿ ಬಾಣಂತಿಯರಲ್ಲಿ ಸೋಂಕು ಕಾಣಿಸಿಕೊಂಡ ಪರಿಣಾಮ ಬಹು ಅಂಗಾಗ ವೈಫಲ್ಯ ಸಂಭವಿಸಿದೆ ಎಂದು ವೈದ್ಯಕಿಯ ತಜ್ಞರು ಅಂದಾಜು ಮಾಡಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿ ಸರ್ಕಾರ ತನಿಖೆ ನಡೆಸುವಂತೆ ಆಗ್ರಹಿಸಿದರು.

ಈ ವೇಳೆ ಪರಿಸರವಾದಿ ಸಿ.ಯತಿರಾಜು, ನಿವೃತ್ತ ಪ್ರಾಚಾರ್ಯ ವಿಶ್ವನಾಥ್​, ಔಷಧ ವ್ಯಾಪಾರಿಗಳ ಸಂದ ಪಂಡಿತ್​ ಜವಾಹರ್​, ಸುಬ್ರಹ್ಮಣ್ಯ ಅಡಿಗ, ಅಕ್ಕಮ್ಮ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net