

ಕೆ.ಆರ್.ಪೇಟೆ: ಎಲ್ಲ ದಾನಕ್ಕಿಂತ ರಕ್ತದಾನ ಶ್ರೇಷ್ಠವಾದುದಾಗಿದೆ. ರಕ್ತದಾನ ಮಾಡುವುದರಿಂದ ಆರೋಗ್ಯ ವೃದ್ಧಿಸುವುದರ ಜತೆಗೆ ರಕ್ತಹೀನತೆಯಿಂದ ಬಳಲುತ್ತಿರುವ ರೋಗಿಗಳಿಗೆ ಚಿಕಿತ್ಸೆ ನೀಡಲು ನೆರವಾಗುತ್ತದೆ ಎಂದು ಪ್ರಾಂಶುಪಾಲೆ ಎಚ್.ಎಂ.ಹೇಮಲತಾ ಅಭಿಪ್ರಾಯಪಟ್ಟರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಮಂಡ್ಯ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯ ಸಹಯೋಗದೊಂದಿಗೆ ರಕ್ತದಾನ ಶಿಬಿರದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕೋಟಿ ಕೋಟಿ ಹಣ್ಣವಿದ್ದರೂ ಆರೋಗ್ಯವಿಲ್ಲದಿದ್ದರೆ ಅದು ಶೂನ್ಯ. ಆದ್ದರಿಂದ ಆರೋಗ್ಯವಂತ ಯುವಕರು, ಯುವತಿಯರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡುವ ಮೂಲಕ ಆರೋಗ್ಯವಂತ ಸಮಾಜಕ್ಕೆ ಕೈಜೋಡಿಸಬೇಕು. ನಾವೆಲ್ಲರೂ ಸಹಕಾರ, ಸಹಬಾಳ್ವೆಯಿಂದ ಜೀವನ ನಡೆಸುತ್ತಿದ್ದೇವೆ. ಹಾಗೇ ಸಮಾಜದಲ್ಲಿ ಬದುಕುವ ಪ್ರತಿಯೊಬ್ಬರೂ ಆರೋಗ್ಯವನ್ನು ಹಾಳು ಮಾಡಿಕೊಳ್ಳದೇ ಆರೋಗ್ಯ ಕಾಪಾಡಿಕೊಳ್ಳಬೇಕು. ನಮ್ಮ ಪೂರ್ವಜರು ಹಿಂದಿನ ಕಾಲದಲ್ಲಿ ಬರಿಗಾಲಲ್ಲಿ ನಡೆಯುತ್ತಿದ್ದರು. ಹಾಗೂ ಜಮೀನಿನಲ್ಲಿ ದುಡಿಮೆ ಮಾಡುತ್ತಿದ್ದರು. ಆದರೆ ಈಗಿನ ಯುವಜನರು ಇದರ ಬಗ್ಗೆ ಆಸಕ್ತಿ ಕಡಿಮೆಯಾಗಿರುವುದರಿಂದ ಸಕ್ಕರೆ ಕಾಯಿಲೆ, ರಕ್ತದೊತ್ತಡ ಸೇರಿದಂತೆ ಹಲವಾರು ಕಾಯಿಲೆಗಳಿಗೆ ತುತ್ತಾಗಿ ಬಳಲುತ್ತಿರುವುದನ್ನು ನೋಡುತ್ತಿದ್ದೇವೆ. ಇಂದಿನ ಆಹಾರ ಪದ್ದತಿಯನ್ನು ಬದಲಾವಣೆ ಮಾಡಿಕೊಂಡು ಗುಣಮಟ್ಟದ ಆಹಾರವನ್ನು ಸೇವಿಸಿ ಆರೋಗ್ಯವನ್ನು ಕಾಪಾಡಿಕೊಳ್ಳುವಂತೆ ಸಲಹೆ ನೀಡಿದರು.
ಕಾಲೇಜಿನ ಪತ್ರಾಂಕಿತ ವ್ಯವಸ್ಥಾಪಕ ಬಿ.ಎ.ಮಂಜುನಾಥ್ ಮಾತನಾಡಿ, ಕೆಲವರು ರಕ್ತದಾನ ಮಾಡುವುದಕ್ಕೆ ಭಯಪಡುತ್ತಾರೆ. ಭಯಪಡುವ ಅವಶ್ಯಕತೆ ಇರುವುದಿಲ್ಲ. ಯಾಕೆಂದರೆ ರಕ್ತದಾನ ಮಾಡಿದ ದಿನದಿಂದ ಮೂರು ತಿಂಗಳ ಒಳಗೆ ರಕ್ತ ಕ್ರೋಡೀಕರಣವಾಗುತ್ತದೆ. 18 ವಯಸ್ಸಿನಿಂದ 65 ವಯಸ್ಸಿನವರೆಗೂ ಆರೋಗ್ಯವಂತ ವ್ಯಕ್ತಿಗಳು ರಕ್ತದಾನ ಮಾಡಬಹುದು. ಶುಗರ್, ಬಿ.ಪಿ ಇರುವ ವ್ಯಕ್ತಿಗಳು ಸಹ ರಕ್ತದಾನ ಮಾಡಬಹುದು. ಆದರೆ ಅವರಿಗೆ ಮಾತ್ರೆಗಳನ್ನು ಸೇವಿಸಿ ನಾರ್ಮಲ್ ಇದ್ದರೆ ಖಂಡಿತ ರಕ್ತದಾನ ಮಾಡಬಹುದು. ಆದ್ದರಿಂದ ರಕ್ತದಾನ ಮಾಡಿ ನೀವು ಆರೋಗ್ಯ ಕಾಪಾಡಿಕೊಳ್ಳಿ. ಇತರರನ್ನು ಉಳಿಸಿ ಎಂದು ಮನವಿ ಮಾಡಿದರು.
ಪತ್ರಾಂಕಿತ ವ್ಯವಸ್ಥಾಪಕ ಬಳ್ಳೇಕೆರೆ ಮಂಜುನಾಥ್, ಯುವ ರೆಡ್‌ಕ್ರಾಸ್ ಘಟಕದ ಸಂಚಾಲಕ ಗಿರೀಶ.ವಿ, ಸಮಿತಿಯ ಸದಸ್ಯರಾದ ಜಯಕೀರ್ತಿ, ಎಚ್.ಎನ್.ರಘು, ಎ.ವಿ.ಮೋಹನ್‌ಕುಮಾರ್, ವೈ.ಎನ್.ಪುಷ್ಪಲತಾ, ಎಂ.ಪಿ.ರಾಜೀವ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.