ರಕ್ತದಾನದಿಂದ ಆರೋಗ್ಯ ವೃದ್ಧಿ

ಫೋಟೋ ಶೀರ್ಷಿಕೆ 29 ಸಿಆರ್_ಪಿ-1ಎ.
ಚನ್ನರಾಯಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಸಭಾಂಗಣದಲ್ಲಿ ಆಯುಷ್ಮಾನ್ ಭವ ರಾಷ್ಟ್ರೀಯ ಕಾರ್ಯಕ್ರಮದಡಿ ಬೃಹತ್ ರಕ್ತದಾನ ಶಿಬಿರ ಹಾಗೂ ಮಾನವ ಅಂಗಾಂಗ ಮತ್ತು ದೇಹದಾನ ನೋಂದಣಿ ಕಾರ್ಯಕ್ರಮ ಶಾಸಕ ಸಿ.ಎನ್.ಬಾಲಕೃಷ್ಣ ಉದ್ಘಾಟಿಸಿದರು. ಕಿಶೋರ್‌ಕುಮಾರ್, ನಾಗರಾಜ್ ಇತರರಿದ್ದರು.
Published on

ಚನ್ನರಾಯಪಟ್ಟಣ: ರಕ್ತದಾನ ಶ್ರೇಷ್ಠದಾನವಾಗಿದ್ದು ರಕ್ತದಾನದಿಂದ ಆರೋಗ್ಯ ವೃದ್ಧಿಯಾಗುತ್ತದೆ. ತುರ್ತು ಸಂದರ್ಭ ಆಗತ್ಯ ಉಳ್ಳವರಿಗೆ ರಕ್ತ ದೊರೆಯಲಿದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಅಭಿಪ್ರಾಯಪಟ್ಟರು.

ಪಟ್ಟಣದ ಸರ್ಕಾರಿ ಆಸ್ಪತ್ರೆಯ ಸಭಾಂಗಣದಲ್ಲಿ ತಾಲೂಕು ಆರೋಗ್ಯ ಇಲಾಖೆ, ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಮತ್ತು ಲಯನ್ಸ್ ಸನ್‌ರೈಸ್ ಸೇವಾ ಸಂಸ್ಥೆ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಬುಧವಾರ ಆಯುಷ್ಮಾನ್ ಭವ ಕಾರ್ಯಕ್ರಮದಡಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ರಕ್ತದಾನ ಶಿಬಿರ ಹಾಗೂ ಮಾನವ ಅಂಗಾಂಗ ಹಾಗೂ ದೇಹದಾನ ನೋಂದಣಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಇಂದು ರಕ್ತದ ಅಗತ್ಯ ಹೆಚ್ಚಿದೆ. ಆದ್ದರಿಂದ ರಕ್ತದಾನಿಗಳ ಅಗತ್ಯ ಹೆಚ್ಚಿದೆ. ನಾವು ಪಡೆಯುವ ರಕ್ತ ಸುಲಭವಾಗಿ ಅಗತ್ಯವಾದವರಿಗೆ ಲಭಿಸಲಿದೆ. ರಕ್ತ ನೀಡುವುದರಿಂದ ಆತನಲ್ಲಿ ಹೊಸ ರಕ್ತ ಉತ್ಪತ್ತಿಯಾಗಿ ಆತ ಮತ್ತಷ್ಟು ಚೈತನ್ಯದಿಂದ ಇರಲು ಸಾಧ್ಯವಾಗುತ್ತದೆ. ಶರೀರದ ಅಂಗಗಳು ಕ್ರಿಯಾಶೀಲವಾಗಿ ಕೆಲಸ ಮಾಡಲು ಸಹಕಾರಿಯಾಗುತ್ತದೆ. ಆದ್ದರಿಂದ ರಕ್ತದಾನದಲ್ಲಿ ಯುವ ಜನತೆ ಮುಖ್ಯ ಪಾತ್ರ ವಹಿಸಬೇಕು ಎಂದು ಕಿವಿಮಾತು ಹೇಳಿದರು.
ಮತ್ತೊಬ್ಬರ ಬಾಳಿಗೆ ಬೆಳಕಾಗುವ ಪುಣ್ಯಕರ ಕಾರ್ಯವೇ ಅಂಗಾಂಗ ದಾನ. ಇನ್ನೊಬ್ಬರ ಜೀವ ಉಳಿಸುವ, ಸಾವಿನ ನಂತರವೂ ಮತ್ತೂಬ್ಬರಿಗೆ ಬದುಕು ನೀಡುವ ಈ ದಾನ, ಎಲ್ಲಕ್ಕಿಂತ ಶ್ರೇಷ್ಠದಾನ. ವೈದ್ಯಕೀಯ ಲೋಕದ ಆಧುನಿಕ ಆವಿಷ್ಕಾರ, ತಂತ್ರಜ್ಞಾನಗಳ ಸದ್ಬಳಕೆ ಯಿಂದ ಅಂಗಾಂಗ ದಾನ ಮತ್ತು ಕಸಿ ಅದ್ಭುತ ಅಚ್ಚರಿಯಂತೆ ನಡೆಯುತ್ತಿದೆ. ಇನ್ನೂ ಅಚ್ಚರಿ ಎಂದರೆ, ಈ ತಂತ್ರಜ್ಞಾನಗಳ ಬಳಕೆಯಿಂದ ಒಬ್ಬ ವ್ಯಕ್ತಿ 8 ಜನರಿಗೆ ಮರು ಜೀವ ನೀಡಬಹುದು. ಹೃದಯ, ಮೂತ್ರಪಿಂಡ, ಯಕೃತ್ತು ಸೇರಿದಂತೆ ಹಲವು ಅಂಗಾಂಗಗಳನ್ನು ದಾನ ಮಾಡಬಹುದು ಎಂದು ತಿಳಿಸಿದರು.

ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ವಿ.ಮಹೇಶ್ ಮಾತನಾಡಿ, ರಕ್ತಕ್ಕೆ ’ರಕ್ತ’ವೇ ಪರ್ಯಾಯ. ವೈದ್ಯಲೋಕ ಸಾಕಷ್ಟು ಮುಂದುವರಿದಿದ್ದು, ಕೃತಕ ಅಂಗಾಂಗಗಳನ್ನು ಕಸಿ ಮಾಡಿಯೂ ಆಗಿದೆ. ಆದರೆ ಕೃತಕ ರಕ್ತ ಸೃಷ್ಟಿ ಸಾಧ್ಯವಾಗಿಲ್ಲ. ಹೀಗಾಗಿ ರಕ್ತದಾನದ ಮೂಲಕ ಮಾತ್ರ ಬೇಡಿಕೆಯನ್ನು ಪೂರೈಸಬಹುದು. ಈ ನಿಟ್ಟಿನಲ್ಲಿ ಜನರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರೆ ಮಾನವೀಯ ಸಮಾಜ ಕಾಣಲು ಸಾಧ್ಯ ಎಂದರು.

ಶಿಬಿರದಲ್ಲಿ ಸುಮಾರು 30ಕ್ಕೂ ಹೆಚ್ಚು ದಾನಿಗಳು ರಕ್ತದಾನ ಮಾಡಿದರು. 50ಕ್ಕೂ ಹೆಚ್ಚು ಅಂಗಾಂಗ ದಾನಿಗಳು ಹೆಸರು ನೋಂದಣಿ ಮಾಡಿಸಿದರು. ಶಿಬಿರದಲ್ಲಿ ತಾಲೂಕು ಆರೋಗ್ಯ ಅಧಿಕಾರಿ ಕಿಶೋರ್‌ಕುಮಾರ್, ಎ.ಎನ್.ಲಯನ್ ಸೇವಾ ಸಂಸ್ಥೆಯ ಅಧ್ಯಕ್ಷ ನಾಗರಾಜ್, ತಾಲೂಕು ಆಸ್ಪತ್ರೆಯ ವೈದ್ಯ ವೃಂದ, ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ನಸಿರ್ಂಗ್ ವಿದ್ಯಾರ್ಥಿಗಳು ಇತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net