

ನಾಪೋಕ್ಲು: ಸಮುದಾಯದಲ್ಲಿ ತಾಯಿ ಮರಣ, ಶಿಶು ಮರಣ ಹಾಗೂ ಪ್ರಜೆಗಳ ಜೀವಿತಾವಧಿಯ ಮೇಲೆ ದೇಶ ಅಥವಾ ರಾಜ್ಯದ ಪ್ರಗತಿ ಅವಲಂಬಿತವಾಗಿದೆ ಎಂದು ಮಡಿಕೇರಿ ಜಿಲ್ಲಾಸ್ಪತ್ರೆಯ ಶಸ್ತ್ರಚಿಕಿತ್ಸಕ ಡಾ.ನಂಜುಂಡಯ್ಯ ಹೇಳಿದರು.
ಆಯುಷ್ಮಾನ್‌ಭವ ಕಾರ್ಯಕ್ರಮದ ಪ್ರಯುಕ್ತ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಆರೋಗ್ಯ ಮೇಳ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ದೇಶದಲ್ಲಿ ಸಂಪತ್ತು ಅಥವಾ ಹಣ ಇದ್ದ ಮಾತ್ರಕ್ಕೆ ಅದು ಮುಂದುವರಿದ ದೇಶ ಎಂದು ಹೇಳಲು ಸಾಧ್ಯವಿಲ್ಲ. ದೇಶದಲ್ಲಿ ತಾಯಿ ಮತ್ತು ಮಕ್ಕಳ ಆರೋಗ್ಯ ಬಹಳ ಮುಖ್ಯವಾಗಿದೆ ಎಂದರು.
ಮುಂದಿನ ಡಿಸೆಂಬರ್‌ವರೆಗೆ ಪ್ರತಿ ಮಂಗಳವಾರ ಆರೋಗ್ಯ ತಪಾಸಣೆ ನಡೆಯಲಿದ್ದು, ಜನರಿಗೆ ದೈನಂದಿನ ಜೀವನದಲ್ಲಿ ಎದುರಾಗುವ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸಬೇಕು ಎಂದರು.
ಸಮುದಾಯ ಆರೋಗ್ಯ ಕೇಂದ್ರದ ಆಡಳಿತಾಧಿಕಾರಿ ಡಾ.ಪೂವಯ್ಯ ಮಾತನಾಡಿ, ಸರ್ಕಾರ ನೀಡುವ ಸೌಲಭ್ಯಗಳನ್ನು ಸಾಮಾನ್ಯ ಜನರಿಗೆ ತಲುಪಿಸುವ ವ್ಯವಸ್ಥೆ ಆಗಬೇಕಿದೆ. ಬಿಪಿಎಲ್ ಕಾರ್ಡ್, ಆಯುಷ್ಮಾನ್ ಆರೋಗ್ಯ ಕಾರ್ಡ್ ಮುಂತಾದ ದಾಖಲೆಗಳನ್ನು ರೋಗಿಗಳು ಸರಿಯಾಗಿ ನೀಡಿದರೆ ಮಾತ್ರ ಸರ್ಕಾರದ ಸೌಲಭ್ಯಗಳು ಸಕಾಲಿಕವಾಗಿ ಒದಗಿಸಲು ಅನುಕೂಲವಾಗಲಿದೆ. ಎಲ್ಲರೂ ದಾಖಲೆಗಳನ್ನು ಸರಿಯಾಗಿ ನೀಡಿದರೆ ಮಾತ್ರ ಸೂಕ್ತ ಚಿಕಿತ್ಸೆ ನೀಡಲು ಸಾಧ್ಯವಾಗಲಿದೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಜಾಕ್ಷಿ ರೇಣುಕೇಶ್, ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಸಿಬ್ಬಂದಿ ಕೊರತೆ ನಿವಾರಿಸಲು ಸಂಬಂಧಪಟ್ಟವರು ಅಗತ್ಯ ಕ್ರಮ ವಹಿಸಬೇಕು. ಚಿಕಿತ್ಸೆಗೆ ಬರುವವರು ಸೂಕ್ತ ದಾಖಲಾತಿಗಳನ್ನು ನೀಡಿ ಸಹಕರಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು.
ಗ್ರಾಪಂ ಉಪಾಧ್ಯಕ್ಷೆ ಹೇಮಾ ಅರುಣ್, ದಂತ ವೈದ್ಯೆ ನೂರ್ ಫಾತಿಮಾ, ವೈದ್ಯಾಧಿಕಾರಿ ಡಾ.ಜೀವನ್ ಉಪಸ್ಥಿತರಿದ್ದರು.
191 ಜನರಿಗೆ ತಪಾಸಣೆ: ಬಳಿಕ ನಡೆದ ಆರೋಗ್ಯ ಮೇಳದಲ್ಲಿ ತಜ್ಞ ವೈದ್ಯರಿಂದ ಆರೋಗ್ಯ ತಪಾಸಣೆ ನಡೆಯಿತು. ಸಾಮಾನ್ಯ ಚಿಕಿತ್ಸೆ-80 ಜನರು, ಕೀಲು ಮತ್ತು ಮೂಳೆ ಚಿಕಿತ್ಸೆ-23, ದಂತ ಚಿಕಿತ್ಸೆ-13, ಶಸ್ತ್ರಚಿಕಿತ್ಸೆ- 11, ನೇತ್ರ ಪರೀಕ್ಷೆ-11, ಚರ್ಮ ಸಮಸ್ಯೆಗೆ ಚಿಕಿತ್ಸೆ-11, ಕಿವಿ ಚಿಕಿತ್ಸೆ-10, ಪ್ರಸೂತಿ ಹಾಗೂ ಸ್ತ್ರೀರೋಗ-4, ಮಾನಸಿಕ ಆರೋಗ್ಯ- 2 ಜನರು ಸೇರಿದಂತೆ ಒಟ್ಟು 191 ರೋಗಿಗಳ ಆರೋಗ್ಯ ತಪಾಸಣೆ ನಡೆಯಿತು.