

ಬೆಂಗಳೂರು: ಡೆಂಘೆ ಸೋಂಕಿಗೆ ಒಳಗಾದವರನ್ನು 14 ದಿನ ನಿಗಾ ವಹಿಸುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸಚಿವ ದಿನೇಶ್ ಗುಂಡೂರಾವ್ ಸೂಚನೆ ನೀಡಿದ್ದಾರೆ.
ಯಲಹಂಕದ ಶಿಂಗೇನಹಳ್ಳಿಯಲ್ಲಿ ಡೆಂಘೆ ನಿಯಂತ್ರಣ ಸಂಬಂಧ ಆರೋಗ್ಯ ಇಲಾಖೆ ಕೈಗೊಂಡಿರುವ ಈಡಿಸ್ ಸೊಳ್ಳೆಯ ಲಾರ್ವಾ ನಾಶಪಡಿಸುವ ಅಭಿಯಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಡೆಂಘೆ ನಿಯಂತ್ರಣ ಸಂಬಂಧ ಹೆಚ್ಚಿನ ಗಮನ ಹರಿಸಲಾಗುತ್ತಿದೆ ಎಂದು ಹೇಳಿದರು.
ಯಲಹಂಕದಲ್ಲಿ ಅತೀ ಹೆಚ್ಚು ಡೆಂಘೆ ಪ್ರಕರಣಗಳು ವರದಿಯಾಗಿರುವ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಸಚಿವರು, ಸ್ಥಳೀಯ ಶಾಲೆಗಳಿಗೆ ತೆರಳಿ ವಿದ್ಯಾರ್ಥಿಗಳಿಗೆ ಡೆಂಘೆ ಕುರಿತು ಜಾಗೃತಿ ಮೂಡಿಸಿದರು.
ಬೆಂಗಳೂರಿನಲ್ಲೇ ಹೆಚ್ಚು ಪ್ರಕರಣ: ರಾಜ್ಯದ ಒಟ್ಟು ಡೆಂಘೆ ಪ್ರಕರಣಗಳಲ್ಲಿ ಬೆಂಗಳೂರಿನಲ್ಲಿಯೇ ಶೇ. 50 ಪ್ರಕರಣಗಳು ವರದಿಯಾಗಿವೆ. ಹೀಗಾಗಿ ಹೆಚ್ಚಿನ ಗಮನ ಹರಿಸಲು ಬಿಬಿಎಂಪಿ ಹಾಗೂ ಆರೋಗ್ಯ ಇಲಾಖೆಗೆ ಸೂಚಿಸಲಾಗಿದೆ. ಅತೀ ಹೆಚ್ಚು ಪ್ರಕರಣಗಳು ವರದಿಯಾಗಿರುವ ಪ್ರದೇಶಗಳನ್ನು ಡೆಂಘೆ ಹಾಟ್‌ಸ್ಪಾಟ್ ಎಂದು ಗುರುತಿಸಲಾಗಿದ್ದು, ಆ ಸ್ಥಳಗಳಿಗೆ ಉಪನಿರ್ದೇಶಕರ ಮಟ್ಟದ ಅಧಿಕಾರಿಗಳನ್ನು ಕಳುಹಿಸಲಾಗುತ್ತದೆ ಎಂದರು.
ಸೋಮವಾರ ಮತ್ತು ಮಂಗಳವಾರ ಅಧಿಕಾರಿಗಳು ಹಾಟ್ ಸ್ಪಾಟ್ ಗಳಿಗೆ ಭೇಟಿ ನೀಡಿ ಡೆಂಘೆ ನಿಯಂತ್ರಣ ಕ್ರಮಗಳ ಅನುಷ್ಠಾನ ಕುರಿತು ಪರಿಶೀಲಿಸಲಿದ್ದಾರೆ. ಅತೀ ಹೆಚ್ಚು ಪ್ರಕರಣಗಳು ವರದಿಯಾದ ಪ್ರದೇಶಗಳಲ್ಲಿ ಫೀವರ್ ಕ್ಲಿನಿಕ್‌ಗಳನ್ನು ತೆರೆದು, ಜ್ವರ ಕಾಣಿಸಿಕೊಂಡ ಎಲ್ಲರನ್ನು ಡೆಂಘೆ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಹೇಳಿದರು.
ನಿಫಾ ಪ್ರಕರಣ ವರದಿಯಾಗಿಲ್ಲ: ಕೇರಳದಲ್ಲಿ ನಿಫಾ ವೈರಸ್‌ಗೆ 14 ವರ್ಷದ ಬಾಲಕ ಬಲಿಯಾಗಿದ್ದಾನೆ. ಈ ಹಿನ್ನೆಲೆಯಲ್ಲಿ ಗಡಿ ಭಾಗದಲ್ಲಿ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ಸದ್ಯ ರಾಜ್ಯದಲ್ಲಿ ನಿಫಾ ವೈರಸ್‌ನ ಯಾವುದೇ ಪ್ರಕರಣ ಪತ್ತೆಯಾಗಿಲ್ಲ. ಮುನ್ನೆಚ್ಚರಿಕೆ ಕ್ರಮವಾಗಿ ರಾಜ್ಯದಿಂದ ಕೇರಳಕ್ಕೆ ಪ್ರವಾಸ ಹೋಗುವವರು ಎಚ್ಚರಿಕೆ ವಹಿಸುವಂತೆ ಮಾರ್ಗಸೂಚಿ ಹೊರಡಿಸಲಾಗಿದೆ. ತೀರಾ ಅಗತ್ಯ ಇರುವವರು ಮಾತ್ರ ಕೇರಳ ಪ್ರವಾಸ ಕೈಗೊಳ್ಳಲಿ, ಅನಗತ್ಯವಾಗಿ ಹೋಗುವುದು ಬೇಡ ಎಂದು ದಿನೇಶ್ ಗುಂಡೂರಾವ್ ಸಲಹೆ ನೀಡಿದರು.