ಹಣಕ್ಕಿಂತ ಆರೋಗ್ಯ ಮುಖ್ಯ

IMG-20241121-WA0294
ಪಟ್ಟಣದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಯುವ ರೆಡ್‌ಕ್ರಾಸ್ ಘಟಕದ ವತಿಯಿಂದ ಕಾಲೇಜಿನ ವಿದ್ಯಾರ್ಥಿಗಳಿಗೆ ವೈದ್ಯಕೀಯ ತಪಾಸಣಾ ಕಾರ್ಯಕ್ರಮವನ್ನು ಆರೋಗ್ಯಾಧಿಕಾರಿ ಡಾ.ಅಜಿತ್ ಉದ್ಘಾಟಿಸಿದರು.
Published on

ಕೆ.ಆರ್.ಪೇಟೆ: ಆರೋಗ್ಯವಂತ ಜೀವನ ಎಲ್ಲರಿಗೂ ಅವಶ್ಯಕವಾಗಿದ್ದು, ಹಣಕ್ಕಿಂತ ಆರೋಗ್ಯ ಮುಖ್ಯವಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಅಜಿತ್ ಅಭಿಪ್ರಾಯಪಟ್ಟರು.

ಪಟ್ಟಣದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಯುವ ರೆಡ್‌ಕ್ರಾಸ್ ಘಟಕದ ವತಿಯಿಂದ ಕಾಲೇಜಿನ ವಿದ್ಯಾರ್ಥಿಗಳಿಗೆ ವೈದ್ಯಕೀಯ ತಪಾಸಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಹೆಣ್ಣುಮಕ್ಕಳು ಆರೋಗ್ಯದಲ್ಲಿ ಏನೇ ವ್ಯತ್ಯಾಸ ಉಂಟಾದರೂ ಉದಾಸೀನ ಮಾಡದೇ ಕೂಡಲೇ ವೈದ್ಯರನ್ನು ಸಂಪರ್ಕಿಸುವ ಮೂಲಕ ತಪಾಸಣೆಗೆ ಒಳಪಟ್ಟು ಚಿಕಿತ್ಸೆ ಪಡೆಯಬೇಕು. ನೋಡೋಣ ಎಂದು ಉದಾಸೀನ ಮಾಡಿದರೆ ಕಾಯಿಲೆಯು ಉಲ್ಬಣಗೊಂಡು ತೀವ್ರ ಸ್ವರೂಪ ಪಡೆಯುವ ಲಕ್ಷಣಗಳು ಇರುತ್ತವೆ. ರಸ್ತೆ ಅಪಘಾತ, ರಕ್ತದ ಒತ್ತಡ, ಮಧುಮೇಹ, ವೈಯಕ್ತಿಕ ಸ್ವಚ್ಛತೆ, ಪರಿಸರ ಸ್ವಚ್ಛತೆ, ಆಹಾರ ಪದ್ಧತಿಗಳು, ಪೌಷ್ಟಿಕತೆ, ಮುಂತಾದ ವಿಷಯಗಳು ವಿದ್ಯಾರ್ಥಿಗಳು ಅವಶ್ಯಕವಾಗಿ ಅನುಸರಿಸಬೇಕಾಗಿದ್ದು, ನೀವು ಕಲಿತ ಈ ಅಂಶಗಳನ್ನು ಸಮಯೋಚಿತವಾಗಿ ಬಳಸುವಂತಾಗಬೇಕು ಎಂದರು.

ಕಾಲೇಜಿನ ಪ್ರಾಂಶುಪಾಲೆ ಡಾ.ಪ್ರತಿಮಾ ಮಾತನಾಡಿ, ರೆಡ್‌ಕ್ರಾಸ್ ಏರ್ಪಡಿಸಿರುವ ಇಂತಹ ಆರೋಗ್ಯ ಶಿಬಿರಗಳು ವಿದ್ಯಾರ್ಥಿಗಳಿಗೆ ಉಪಯುಕ್ತವಾಗಿದ್ದು, ವಿಶ್ವಯುದ್ದದ ಸಮಯದಲ್ಲಿ ಆರಂಭವಾದ ಈ ರೆಡ್‌ಕ್ರಾಸ್ ಸಂಸ್ಥೆಯು ಅನೇಕ ದೇಶಗಳಲ್ಲಿ ತನ್ನ ಸೇವೆಯನ್ನು ನೀಡುತ್ತಾ ಬಂದಿದೆ. ವೈಯಕ್ತಿಕ ಸ್ವಚ್ಛತೆಗೆ ನೀವು ಮೊದಲ ಆದ್ಯತೆ ನೀಡಬೇಕಿದ್ದು, ಅಪೌಷ್ಟಿಕತೆ ಹೆಚ್ಚಾಗಿರುವುದು ಕಂಡುಬರುತ್ತಿದೆ. ಸಮತೋಲನ ಆಹಾರವನ್ನು ಸೇವಿಸದೇ ಜಂಕ್‌ಫುಡ್‌ಗಳ ಮೊರೆ ಹೋಗಿರುವ ಇಂದಿನ ಯುವಜನತೆ ತಮ್ಮ ಆರೋಗ್ಯವನ್ನು ನಾವೇ ಹಾಳುಮಾಡಿಕೊಳ್ಳುತ್ತಿರುವುದು ವಿಷಾದನೀಯ ಎಂದರು.

ಮನೆಯಲ್ಲಿ ತಯಾರಿಸಿದ ಎಲ್ಲಾ ಪೌಷ್ಟಿಕಾಂಶಗಳನ್ನು ಒಳಗೊಂಡ ಸಮತೋಲನ ಆಹಾರವನ್ನು ಸೇವಿಸುವ ಮೂಲಕ ದೇಹದ ಬೆಳವಣಿಗೆಗೆ ಹಾಗೂ ಆರೋಗ್ಯವಂತರಾಗಲು ನೀವು ಪ್ರಯತ್ನಿಸಬೇಕು. ಕಾಲೇಜು ವಿದ್ಯಾರ್ಥಿನಿಯರಿಗೆ ಇಂತಹ ಆರೋಗ್ಯವಂತ ಶಿಬಿರಗಳು ಅವಶ್ಯಕವಾಗಿದ್ದು, ಮುಂದಿನ ದಿನಗಳಲ್ಲಿ ಕಾಲೇಜಿಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸುವ ಉದ್ದೇಶವಿದೆ. ನಮ್ಮ ಕಾಲೇಜಿನ ಎಲ್ಲ ಕಾರ್ಯಕ್ರಮಗಳನ್ನು ಪತ್ರಿಕೆಗಳಲ್ಲಿ ಪ್ರಕಟಿಸುವ ಮಾಧ್ಯಮದ ಸಹಕಾರ ನಮಗೆ ಬೇಕಾಗಿದೆ. ನಮ್ಮ ಕಾಲೇಜಿನಲ್ಲಿ ಪ್ರಥಮ ಚಿಕಿತ್ಸೆ ಪೆಟ್ಟಿಗೆ ಇಲ್ಲ. ದಯವಿಟ್ಟು ಆರೋಗ್ಯಾಧಿಕಾರಿಗಳು ನಮ್ಮ ಕಾಲೇಜಿಗೆ ಒಂದು ಪ್ರಥಮ ಚಿಕಿತ್ಸೆ ಪೆಟ್ಟಿಗೆಯನ್ನು ಒದಗಿಸಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಡಾ. ಹೇಮಲತಾ, ಡಾ.ನಾಗರತ್ನ, ಡಾ.ಸುಮನ್, ಪ್ರಾಧ್ಯಾಪಕರಾದ ಡಾ.ಕೃಷ್ಣಮೂರ್ತಿ, ಡಾ.ಮಹದೇವ, ಗಿರೀಶ್, ಸಿ.ಬಿ.ಚೇತನ್‌ಕುಮಾರ್, ಪತ್ರಕರ್ತ ಮೊಸಳೆಕೊಪ್ಪಲು ದಿನೇಶ್, ವಿಶ್ವಾರಾಧ್ಯ, ಶ್ರೀಕಾಂತ್, ವಿನಯ್, ಚಂದ್ರು, ಪುರುಷೋತ್ತಮ, ಆರೋಗ್ಯ ಇಲಾಖೆಯ ಸಿಬ್ಬಂದಿ ಮತ್ತು ನೂರಾರು ವಿದ್ಯಾರ್ಥಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net