

ಬೆಂಗಳೂರು: ಕಲುಷಿತ ನೀರು ಮತ್ತು ಆಹಾರ ಸೇವನೆಯಿಂದ ರಾಜ್ಯದಲ್ಲಿ ಅತಿಸಾರ (ಡಯೇರಿಯಾ) ಪ್ರಕರಣಗಳು ಏರಿಕೆಯಾಗಿದ್ದು, ಕಳೆದೊಂದು ವಾರದಲ್ಲಿ 4,748 ಪ್ರಕರಣಗಳು ದೃಢಪಟ್ಟಿವೆ.
ಆರೋಗ್ಯ ಇಲಾಖೆಯು ಬಿಡುಗಡೆ ಮಾಡಿರುವ ಸೋಂಕು ರೋಗಗಳ ವರದಿಯಲ್ಲಿ ಜನವರಿಯಿಂದ ಈವರೆಗೂ ಒಟ್ಟು 65,800 ಅತಿಸಾರ ಪ್ರಕರಣಗಳು ವರದಿಯಾಗಿವೆ. ಕಳೆದೊಂದು ತಿಂಗಳಿಂದ ಪ್ರಕರಣಗಳ ಸಂಖ್ಯೆ ಏರಿಕೆ ಕಂಡಿದ್ದು, ಮಾರ್ಚ್ ಅಂತ್ಯಕ್ಕೆ 36,814 ಅತಿಸಾರ ಪ್ರಕರಣಗಳು ವರದಿಯಾಗಿದ್ದವು. ಬಳಿಕ ಬದಲಾದ ವಾತಾವರಣದ ಪ್ರಕರಣಗಳು ಹೆಚ್ಚಳವಾಗಿವೆ.
ಕಳೆದೊಂದು ವಾರದಲ್ಲಿ 144 ಡೆಂ ಹಾಗೂ 11 ಚಿಕೂನ್‌ಗುನ್ಯ ಪ್ರಕರಣಗಳು ದೃಢಪಟ್ಟಿವೆ. ಈ ಪ್ರಕರಣಗಳ ಒಟ್ಟು ಸಂಖ್ಯೆ ಕ್ರಮವಾಗಿ 3,012 ಹಾಗೂ 620ಕ್ಕೆ ತಲುಪಿದೆ.
ಹೆಚ್ಚಿದ ನಾಯಿ ಕಡಿತ ಪ್ರಕರಣಗಳು:ರಾಜ್ಯದಲ್ಲಿ ನಾಯಿ ಕಡಿತ ಪ್ರಕರಣಗಳು ಹೆಚ್ಚಳವಾಗಿದ್ದು, ಕಳೆದೊಂದು ವಾರದಲ್ಲಿ 7,722 ಮಂದಿಯನ್ನು ಕಚ್ಚಿವೆ. ಜನವರಿಯಿಂದ ಈವರೆಗೂ 1,28,618 ಮಂದಿ ನಾಯಿ ಕಡಿತಕ್ಕೆ ಒಳಗಾಗಿದ್ದಾರೆ. ಅದೇ ರೀತಿ ಒಂದು ವಾರದಲ್ಲಿ 354 ಹಾವು ಕಡಿತ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 3,034ಕ್ಕೆ ಏರಿಕೆಯಾಗಿದ್ದು, 17 ಮಂದಿ ಮೃತಪಟ್ಟಿದ್ದಾರೆ.
ಉಳಿದಂತೆ ಪ್ರಾಣಿಗಳಿಂದ ಹರಡುವ ಬ್ಯಾಕ್ಟೀರಿಯಾ ಸೋಂಕು (ಲೆಪ್ಟೊಸ್ಪಿರೋಸಿಸ್) ವಾರದಲ್ಲಿ 25 ಮಂದಿಗೆ ದೃಢಪಟ್ಟಿದೆ. ಈವರೆಗೆ ಒಟ್ಟು 422 ಮಂದಿ ಸೋಂಕಿತರಾಗಿದ್ದಾರೆ. ಮಂಗನ ಕಾಯಿಲೆಯೂ (ಕೆಎಫ್‌ಡಿ) ವಾರದಲ್ಲಿ ಒಂಬತ್ತು ಮಂದಿಯಲ್ಲಿ ಖಚಿತಪಟ್ಟಿದೆ. ಒಟ್ಟು ಕೆಎಫ್‌ಡಿ ಪ್ರಕರಣಗಳ ಸಂಖ್ಯೆ 339ಕ್ಕೆ ಏರಿಕೆಯಾಗಿದೆ.