

ಬೆಂಗಳೂರು: ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯಲ್ಲಿ ವೃಂದ ಮತ್ತು ನೇಮಕಾತಿ ನಿಯಮದನ್ವಯ ಆಹಾರ ಸುರಕ್ಷತಾಧಿಕಾರಿಗಳಿಗೆ ನಿಗದಿಪಡಿಸಿದ ವಿದ್ಯಾರ್ಹತೆ ಹೊಂದಿಲ್ಲದ ಆಹಾರ ಸುರಕ್ಷತಾಧಿಕಾರಿಗಳು ಮಾತೃ ಇಲಾಖೆಗೆ ವಾಪಸಾಗುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆದೇಶ ಹೊರಡಿಸಿದೆ. ಅಸುರಕ್ಷಿತ ಅಥವಾ ಕಳಪೆ ಆಹಾರ ಮಾದರಿಯೆಂದು ಕಂಡು ಬಂದ ಪ್ರಕರಣಗಳಲ್ಲಿ ನ್ಯಾಯಾಲಯದಲ್ಲಿ ಕಾನೂನಾತ್ಮಕ ಪ್ರಕರಣ ದಾಖಲಿಸಬೇಕಾಗುತ್ತದೆ. ಆಹಾರ ಸುರಕ್ಷತಾಧಿಕಾರಿಗಳು ಅಗತ್ಯ ವಿದ್ಯಾರ್ಹತೆ ಹೊಂದಿಲ್ಲದಿದ್ದರೆ ಪ್ರಕರಣ ದಾಖಲಿಸಲು ತಾಂತ್ರಿಕವಾಗಿ ಸಮಸ್ಯೆಯಾಗುತ್ತದೆ. ಆದ್ದರಿಂದ, ಹುದ್ದೆಗೆ ನಿಗದಿಪಡಿಸಿದ ವಿದ್ಯಾರ್ಹತೆ ಇಲ್ಲದೇ ಇರುವ ಸಿಬ್ಬಂದಿಯನ್ನು ಕರ್ತವ್ಯದಿಂದ ತಕ್ಷಣವೇ ಬಿಡುಗಡೆಗೊಳಿಸಬೇಕೆಂದು ಆದೇಶದಲ್ಲಿ ತಿಳಿಸಲಾಗಿದೆ. ಬಿಡುಗಡೆ ಗೊಳಿಸಿದ ಸಿಬ್ಬಂದಿ, ಮುಂದಿನ ಸ್ಥಳ ನಿಯುಕ್ತಿಗಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತರಲ್ಲಿ ವರದಿ ಮಾಡಿಕೊಳ್ಳಬೇಕು. ಈ ಸಿಬ್ಬಂದಿಯಿಂದ ತೆರೆವಾದ ಹಾಗೂ ಪ್ರಸ್ತುತ ಖಾಲಿಯಿರುವ ಸ್ಥಳಕ್ಕೆ ತಾಲೂಕು ಆರೋಗ್ಯಾಧಿಕಾರಿಗಳು ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೆ ಕರ್ತವ್ಯ ನಿರ್ವಹಿಸಲು ಸೂಚಿಸಲಾಗಿದೆ. ತಾಲೂಕು ಆರೋಗ್ಯಾಧಿಕಾರಿಗಳು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ನಿಯಮದ ಪ್ರಕಾರ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದಿಂದ ನಡೆಸಲಾಗುವ ತರಬೇತಿಯನ್ನು 6 ತಿಂಗಳೊಳಗೆ ಪೂರ್ಣಗೊಳಿಸಬೇಕೆಂದು ತಿಳಿಸಲಾಗಿದೆ.