

ಬೆಂಗಳೂರು: ಆರೋಗ್ಯ ಇಲಾಖೆಯ ವರ್ಗಾವಣೆ ಪ್ರಕ್ರಿಯೆ ತ್ವರಿತ ಹಾಗೂ ಪಾರದರ್ಶಕವಾಗಿ ನಡೆಸಿದ್ದು, ತಾಲೂಕು ಆಸ್ಪತ್ರೆಗಳ ಬಲವರ್ಧನೆ ಆದಂತಾಗಿದೆ. ದೀರ್ಘಕಾಲದಿಂದ ಖಾಲಿಯಿದ್ದ ಹುದ್ದೆಗಳ ಭರ್ತಿಗೆ ಪ್ರಾತಿನಿಧ್ಯ ನೀಡಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾಹಿತಿ ನೀಡಿದರು.
ಆರೋಗ್ಯ ಸೌಧದಲ್ಲಿ ಗುರುವಾರ ಮಾತನಾಡಿದ ಅವರು, ವರ್ಗಾವಣೆ ಪ್ರಕ್ರಿಯೆಯಲ್ಲಿ ಪ್ರತಿ ತಾಲೂಕು ಆಸ್ಪತ್ರೆಯಲ್ಲಿ ತಲಾ ಒಬ್ಬರಂತೆ ಸಿರೋಗ ತಜ್ಞರು, ಅರವಳಿಕೆ ತಜ್ಞರು ಮತ್ತು ಮಕ್ಕಳ ತಜ್ಞರು ಇರುವಂತೆ ಕ್ರಮ ವಹಿಸಲಾಗಿದೆ. ಇದರಿಂದ ಹೆರಿಗೆ ಸಂದರ್ಭದಲ್ಲಿ ತಾಯಿ ಮತ್ತು ಮಕ್ಕಳ ಮರಣ ಪ್ರಮಾಣ ತಗ್ಗಿಸಲು ಸಹಕಾರಿಯಾಗಲಿದೆ. 24/7 ವೈದ್ಯರು ಲಭ್ಯತೆಯನ್ನು ಖಾತ್ರಿ ಪಡಿಸುವ ಉದ್ದೇಶದಿಂದ, ಪ್ರತಿ ತಾಲೂಕು ಆಸ್ಪತ್ರೆಯಲ್ಲಿ ತಲಾ ಇಬ್ಬರು ಸಿರೋಗ ತಜ್ಞರು, ಮಕ್ಕಳ ತಜ್ಞರು ಮತ್ತು ಅರವಳಿಕೆ ತಜ್ಞರ ನೇಮಕ ಸಂಬಂಧ ಮುಂದಿನ ವಾರದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆಯಲಾಗುವುದು ಎಂದು ತಿಳಿಸಿದರು.
ಗುತ್ತಿಗೆ ಆಧಾರದಲ್ಲಿ ನೇಮಕ: ವರ್ಗಾವಣೆಯಿಂದ ಹಲವು ವರ್ಷಗಳಿಂದ ವೈದ್ಯರನ್ನೇ ಕಾಣದಿದ್ದ ತಾಲೂಕು ಆಸ್ಪತ್ರೆಗಳಿಗೆ ವೈದ್ಯರ ನಿಯೋಜನೆ ಆಗಿದೆ. ಕೆಲ ಆಸ್ಪತ್ರೆಗಳಲ್ಲಿ ತೆರವಾಗಿರುವ ವೈದ್ಯರು ಹಾಗೂ ಶುಶ್ರೂಷಕರ ಹುದ್ದೆಗಳಿಗೆ ಮುಂದಿನ ವಾರ ಎರಡನೇ ಸುತ್ತಿನ ಕೌನ್ಸಲಿಂಗ್ ನಡೆಸಲಾಗುವುದು. ಆ ನಂತರವೂ ಕೊರತೆ ಕಂಡು ಬಂದ ಕಡೆಗಳಲ್ಲಿ ಗುತ್ತಿಗೆ ಆಧಾರದಲ್ಲಿ ನಿಯೋಜನೆ ಮಾಡಿಕೊಳ್ಳಲು ಸೂಚಿಸಲಾಗಿದೆ ಎಂದರು.
ಸರ್ಕಾರಿ ಸೀಟು ಪಡೆದವರಿಗೆ ಆದ್ಯತೆ
ಆರೋಗ್ಯ ಇಲಾಖೆಯಲ್ಲಿ ಎರಡು ಸಾವಿರ ಎಂಬಿಬಿಎಸ್ ವೈದ್ಯರು ಹಾಗೂ 185 ತಜ್ಞರ ಕೊರತೆ ಇದೆ. ಇದನ್ನು ನೀಗಿಸಲು ಸರಕಾರಿ ವೈದ್ಯಕೀಯ ಸೀಟು ಪಡೆದು ಸರ್ಕಾರಿ ಹಾಗೂ ಖಾಸಗಿಯಲ್ಲಿ ವೈದ್ಯಕೀಯ ಪದವಿ ಪಡೆದ ವಿದ್ಯಾರ್ಥಿಗಳನ್ನು ಆದ್ಯತೆ ಮೇರೆಗೆ ನೇಮಕ ಮಾಡಿಕೊಳ್ಳಲಾಗುವುದು. ಈ ಸಂಬಂಧ ಈಗಾಗಲೇ 6 ಸಾವಿರ ಎಂಬಿಬಿಎಸ್ ವೈದ್ಯರು ಹಾಗೂ 119 ತಜ್ಞರು ನೋಂದಾಯಿಸಿಕೊಂಡಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದರು.
ಕಳೆದ ಜೂ. 19 ರಿಂದ ಜು. 3ರವರೆಗೆ ಇಲಾಖೆಯಲ್ಲಿ ನಡೆದ ವರ್ಗಾವಣೆ ಪ್ರಕ್ರಿಯೆಯಲ್ಲಿ ಒಟ್ಟು 5,676 ಅಧಿಕಾರಿಗಳು ಹಾಗೂ ಸಿಬ್ಬಂದಿ ಹೊಸ ಕಾರ್ಯಕ್ಷೇತ್ರಗಳಿಗೆ ನಿಯೋಜನೆಗೊಂಡಿದ್ದಾರೆ ಎಂದರು.
ಆಶಾ ಕಾರ್ಯಕರ್ತೆಯರಿಗೆ 60:40 ಅನುಪಾತದಲ್ಲಿ ರಾಜ್ಯ ಮತ್ತು ಕೇಂದ್ರವು ಪ್ರೋತ್ಸಾಹದನ ನೀಡುತ್ತಿದ್ದು, 1,500 ರೂ. ಪ್ರೋತ್ಸಾಹ ಧನ ಹೆಚ್ಚಿಸಲು ಕೇಂದ್ರ ಒಪ್ಪಿದೆ. ಇದರಿಂದ ಅವರಿಗೆ 9,500 ರೂ. ವರೆಗೂ ವೇತನ ಸಿಗಲಿದೆ. ಹಾಗಾಗಿ ಅವರು ಪ್ರತಿಭಟನೆ ನಡೆಸುವ ಅಗತ್ಯವಿಲ್ಲ ಎಂದು ಹೇಳಿದರು.