

ಬೆಂಗಳೂರು: ಪ್ರಸ್ತುತ ಅಸ್ತಿತ್ವದಲ್ಲಿರುವ ನಿಯಮಗಳನ್ನು ತಿದ್ದುಪಡಿ ಮಾಡಿ, ರಾಜ್ಯ ಆರೋಗ್ಯ ಇಲಾಖೆಯು ಕೌನ್ಸೆಲಿಂಗ್ ಮೂಲಕ ವರ್ಗಾವಣೆಗಳಲ್ಲಿ ಪಾರದರ್ಶಕತೆ ತರಲು ಮತ್ತು ಆದ್ಯತೆ ಮೇರೆಗೆ ನಿರ್ಣಾಯಕ ಹುದ್ದೆಗಳನ್ನು ಭರ್ತಿ ಮಾಡಲು ಕರಡು ನಿಯಮಗಳನ್ನು ಪ್ರಕಟಿಸಿದೆ.
ಮೇ 14 ರಂದು ಅಧಿಸೂಚನೆ ಮಾಡಲಾದ ಕರ್ನಾಟಕ ರಾಜ್ಯ ನಾಗರಿಕ ಸೇವೆಗಳು (ವೈದ್ಯಕೀಯ ಅಧಿಕಾರಿಗಳು ಮತ್ತು ಇತರ ಸಿಬ್ಬಂದಿ ವರ್ಗಾವಣೆ ನಿಯಂತ್ರಣ) ನಿಯಮಗಳು, 2025 ಎಂಬ ಕರಡು ನಿಯಮಗಳು ಈ ನಿರ್ಣಾಯಕ ಹುದ್ದೆಗಳನ್ನು ಆದ್ಯತೆ ಮೇರೆಗೆ ಭರ್ತಿ ಮಾಡುವ ಗುರಿ ಹೊಂದಿರುವುದಾಗಿ ಇಲಾಖೆ ತಿಳಿಸಿದೆ.
ಪ್ರಾಥಮಿಕ ಆರೋಗ್ಯ ಕೇಂದ್ರ (ಏಇ) ಅಥವಾ ಉಪಕೇಂದ್ರವನ್ನು ಹೊರತುಪಡಿಸಿ ಯಾವುದೇ ಸರ್ಕಾರಿ ಆಸ್ಪತ್ರೆಯಲ್ಲಿ ಮಂಜೂರಾದ ಹುದ್ದೆಗಳಲ್ಲಿ ಶೇ.50ಕ್ಕಿಂತ ಹೆಚ್ಚು ಖಾಲಿ ಇರುವ ಕೇಡರ್‌ನ ಖಾಲಿ ಹುದ್ದೆಗಳು, ನಿರ್ಣಾಯಕ ಹುದ್ದೆಗಳಾಗಿವೆ. ಸರ್ಕಾರಿ ಆಸ್ಪತ್ರೆಯಲ್ಲಿ ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ಸರಿಯಾದ ಆರೈಕೆ ಒದಗಿಸಲು ಅತ್ಯಗತ್ಯವಾಗಿರುವ ಮೂವರು ತಜ್ಞರ ತಂಡದಲ್ಲಿ-ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ (ಆಎ), ಮಕ್ಕಳ ತಜ್ಞರು ಮತ್ತು ಅರಿವಳಿಕೆ ತಜ್ಞರು ಯಾವುದೇ ಒಬ್ಬ ತಜ್ಞರ ಅನುಪಸ್ಥಿತಿಯನ್ನು ಕರಡು ನಿಯಮಗಳ ಪ್ರಕಾರ ನಿರ್ಣಾಯಕ ಖಾಲಿ ಹುದ್ದೆಗಳೆಂದು ವರ್ಗೀಕರಿಸಲಾಗಿದೆ.
ಗ್ರಾಮೀಣ ಸೇವೆ ಕಡ್ಡಾಯ
ಎಲ್ಲ ವೈದ್ಯಾಧಿಕಾರಿಗಳು ಮತ್ತು ಇತರ ಸಿಬ್ಬಂದಿ ಸಂಬಂಧಿತ ನೇಮಕಾತಿ ನಿಯಮಗಳಲ್ಲಿ ನಿರ್ದಿಷ್ಟಪಡಿಸಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸುವುದು ಕಡ್ಡಾಯವಾಗಿರುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಸಂಬಂಧಿತ ನೇಮಕಾತಿ ನಿಯಮಗಳ ಅಡಿಯಲ್ಲಿ ಕನಿಷ್ಠ ಅವಧಿಗೆ ಸೇವೆ ಸಲ್ಲಿಸದ ಮತ್ತು 50 ವರ್ಷ ತಲುಪದ ಅಧಿಕಾರಿ ಅಥವಾ ಇತರ ಸಿಬ್ಬಂದಿಯನ್ನು ವರ್ಗಾವಣೆ ಮಾಡಿ ಗ್ರಾಮೀಣ ಪ್ರದೇಶಕ್ಕೆ ನಿಯೋಜಿಸಬೇಕು. ಅಲ್ಲದೆ, ವಿಶೇಷ ತಜ್ಞರು ಮತ್ತು ಹಿರಿಯ ವಿಶೇಷ ತಜ್ಞರು ಅವರ ವಿಶೇಷ ವಿದ್ಯಾರ್ಹತೆಗೆ ಗೊತ್ತುಪಡಿಸದ ಹುದ್ದೆಗಳಲ್ಲಿ ಕಾರ್ಯನಿರ್ವಸುತ್ತಿದ್ದಲ್ಲಿ, ಅವರ ಸೇವೆಯನ್ನು ಕೂಡಲೇ ಹಿಂಪಡೆದು. ವಿಶೇಷ ವಿದ್ಯಾರ್ಹತೆಗೆ ಗೊತ್ತುಪಡಿಸಿದ ಹುದ್ದೆಗಳಿಗೆ ವರ್ಗಾವಣೆ ಮಾಡಬೇಕು ಎಂದು ತಿಳಿಸಲಾಗಿದೆ.
ವರ್ಗಾವಣೆ ಮೂಲಕ ಭರ್ತಿ:
ಕನಿಷ್ಠ ಮೂರು ವರ್ಷ ಗ್ರೂಪ್ ಎ ಹುದ್ದೆಯಲ್ಲಿ, ಕನಿಷ್ಠ ನಾಲ್ಕು ವರ್ಷ ಗ್ರೂಪ್ ಬಿ, ಗ್ರೂಪ್ ಸಿ ಹುದ್ದೆಯಲ್ಲಿ ಕನಿಷ್ಠ ಐದು ವರ್ಷ ಹಾಗೂ ಗ್ರೂಪ್ ಡಿ ಹುದ್ದೆಯಲ್ಲಿ ಕನಿಷ್ಠ 7 ವರ್ಷ ನಿರಂತರ ಸೇವೆಯನ್ನು ಸರ್ಕಾರಿ ಆಸ್ಪತ್ರೆ ಮತ್ತು ಸರ್ಕಾರಿ ಸಂಸ್ಥೆಯಲ್ಲಿ ಸಲ್ಲಿಸಿದ ವೈದ್ಯಾಧಿಕಾರಿ ಅಥವಾ ಇತರ ಸಿಬ್ಬಂದಿಯನ್ನು ಅದೇ ಪ್ರದೇಶ ಅಥವಾ ವಲಯದ ಅಥವಾ ಇತರ ವಲಯ ಅಥವಾ ಪ್ರದೇಶದ ಸರ್ಕಾರಿ ಆಸ್ಪತ್ರೆ ಅಥವಾ ಸಂಸ್ಥೆಗೆ ವರ್ಗಾವಣೆ ಮಾಡಬಹುದು ಎಂದು ಹೇಳಿದೆ.
ವರ್ಗಾವಣೆ ಮೂಲಕ ಭರ್ತಿ ಮಾಡಬೇಕಾದ ಹುದ್ದೆಗಳ ಪಟ್ಟಿಯನ್ನು ಇಲಾಖಾ ವೈಬ್‌ಸೈಟ್‌ನಲ್ಲಿ ಪ್ರಕಟಿಸಬೇಕು. ಕೌನ್ಸೆಲಿಂಗ್ ಮೂಲಕ ಆದ್ಯತೆ ಮೇಲೆ ಭರ್ತಿ ಮಾಡುವಂತೆ ಸುಚಿಸಲಾಗಿದೆ.
ವಿನಾಯಿತಿ: ಗಂಭೀರ ಕಾಯಿಲೆ ಹೊಂದಿರುವ ಸಿಬ್ಬಂದಿ, 1 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಗು ಇರುವ ಗರ್ಭಿಣಿ ಅಥವಾ ಮಹಿಳಾ ವೈದ್ಯಾಧಿಕಾರಿ ಅಥವಾ ಸಿಬ್ಬಂದಿ, 2 ವರ್ಷಗಳ ಒಳಗೆ ವಯೋನಿವೃತ್ತಿ ಆಗಲಿರುವ ಆಡಳಿತ ವೈದ್ಯಾಧಿಕಾರಿ ಮತ್ತು ಸಿಬ್ಬಂದಿ, ಶೇ.40 ಅಥವಾ ಅದಕ್ಕಿಂತ ಹೆಚ್ಚಿನ ಅಂಗವೈಕಲ್ಯ ಹೊಂದಿರುವವರು, ಅವಲಂಬಿತ ಮಕ್ಕಳಿರುವ ವಿಧವೆ ಅಥವಾ ವಿಧುರ, ಕೇಂದ್ರ ಸರ್ಕಾರಿ ನೌಕರ ಅಥವಾ ರಾಜ್ಯ ಸರ್ಕಾರಿ ನೌಕರ ಅಥವಾ ಅನುದಾನಿತ ಸಂಸ್ಥೆಯ ನೌಕರರನ್ನು ವಿವಾಹವಾದ ವೈದ್ಯಕೀಯ ಅಧಿಕಾರಿ ಅಥವಾ ಸಿಬ್ಬಂದಿಗೆ ವಿನಾಯಿತಿ ನೀಡಲಾಗಿದೆ.
ಆಕ್ಷೇಪಣೆಗೆ ಅವಕಾಶ: ಕರಡು ನಿಯಮಗಳಿಗೆ ಆಕ್ಷೇಪಣೆಗಳಿದ್ದರೆ, ಪ್ರಕಟಿಸಿದ ಏಳು ದಿನಗಳಲ್ಲಿ ಸಲ್ಲಿಸಬಹುದು. ಆಕ್ಷೇಪಣೆಗಳು ಮತ್ತು ಸಲಹೆಗಳನ್ನು ಸರ್ಕಾರದ ಪ್ರಧಾನ ಕಾರ್ಯದರ್ಶಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕೊಠಡಿ ಸಂಖ್ಯೆ 105, ವಿಕಾಸ ಸೌಧ, ಡಾ. ಅಂಬೇಡ್ಕರ್ ವೀಧಿ, ಬೆಂಗಳೂರು -560001 ಗೆ ತಿಳಿಸಬಹುದು.