ಹಲ್ಲಿನ ಆರೋಗ್ಯದತ್ತ ಮುತುವರ್ಜಿ ವಹಿಸಿ

oi
Published on

ಕೈಲಾಂಚ : ಪ್ರತಿಯೊಬ್ಬರೂ ಬಾಯಿ ಹಾಗೂ ಹಲ್ಲಿನ ಆರೋಗ್ಯದತ್ತ ಹೆಚ್ಚಿನ ಗಮನ ನೀಡಿದರೆ ದೇಹವನ್ನು ಬಾಧಿಸುವ ಅನೇಕ ರೋಗಗಳಿಂದ ದೂರವಿರಬಹುದು ಎಂದು ವಿಭೂತಿಕೆರೆ ಗ್ರಾಪಂ ಅಧ್ಯಕ್ಷೆ ಸುನೀತಾ ನಾಗರಾಜ್‌ಸಿಂಗ್ ಬಾಬು ಅಭಿಪ್ರಾಯಪಟ್ಟರು.

ಕೈಲಾಂಚ ಹೋಬಳಿಯ ವಿಭೂತಿಕೆರೆ ಸರ್ಕಾರಿ ಶಾಲಾ ಆವರಣದಲ್ಲಿ ಎಡೆಯೂರು ಸಿದ್ದಲಿಂಗೇಶ್ವರ ಚಾರಿಟಬಲ್ ಹಲ್ಲಿನ ಆಸ್ಪತ್ರೆ, ವಿಭೂತಿಕೆರೆ ಗ್ರಾಪಂ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ದಂತ ಉಚಿತ ತಪಾಸಣೆ, ಚಿಕಿತ್ಸೆ ಮತ್ತು ಉಚಿತವಾಗಿ ಔಷಧ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹಲ್ಲಿನ ರೋಗ್ಯ ಉತ್ತಮವಾಗಿದ್ದರೆ ದೇಹ ಆರೋಗ್ಯವೂ ಸಮಸ್ಯೆಯಿಂದಮುಕ್ತವಾಗಿರುತ್ತದೆ. ಮನುಷ್ಯನ ಸೌಂದರ್ಯ ಹೆಚ್ಚಿಸುವುದೇ ಹಲ್ಲುಗಳು. ಆದ್ದರಿಂದ ಹಲ್ಲುಗಳ ಆರೋಗ್ಯ ಕಾಪಾಡಿಕೊಂಡಾಗ ಅನಾರೋಗ್ಯ ಸಮಸ್ಯೆಯಿಂದ ದೂರವಿರಬಹುದು ಎಂದರು.

ತಜ್ಞ ವೈದ್ಯ ಡಾ. ನಿರಂಜನ ಶೆಟ್ಟಿ ಮಾತನಾಡಿ, ಪ್ರಾರಂಭದಲ್ಲೇ ಹಲ್ಲಿನ ಸಮಸ್ಯೆ ಗುರುತಿಸಿ ಚಿಕಿತ್ಸೆ ಪಡೆದರೆ ಹಲ್ಲನ್ನು ಕೀಳದೆ ರಕ್ಷಿಸಬಹುದು. ಹಲ್ಲಿನ ಆರೋಗ್ಯದ ಬಗ್ಗೆ ಎಲ್ಲರೂ ತಪ್ಪದೆ ಕಾಳಜಿ ವಹಿಸಬೇಕು. ಇದರಿಂದ ಅನೇಕ ರೋಗ ತಡೆಗಟ್ಟಬಹುದು ಎಂದರು.

ಮನುಷ್ಯನಿಗೆ ಹಲ್ಲುಗಳು ಅತ್ಯವಶ್ಯಕವಾಗಿವೆ. ಬಾಯಿ ಹಾಗೂ ಹಲ್ಲಿನ ಬಗ್ಗೆ ಉದಾಸೀನತೆ ತೋರದೆ ಸೂಕ್ತ ಕಾಲದಲ್ಲಿ ಚಿಕಿತ್ಸೆ ಪಡೆದು ಹಲ್ಲುಗಳನ್ನು ರಕ್ಷಿಸಿಕೊಳ್ಳಬೇಕು. ಹಲ್ಲಿನ ಚಿಕಿತ್ಸೆ ಬಹಳ ಸರಳವಾಗಿದ್ದು, ಆಧುನಿಕ ತಂತ್ರಜ್ಞಾನದ ಮೂಲಕ ಚಿಕಿತ್ಸೆ ನೀಡಲಾಗುತ್ತದೆ ಎಂದರು.

ವೈದ್ಯೆ ಡಾ. ಭಾಗ್ಯಲಕ್ಷ್ಮೀ ಮಾತನಾಡಿ, ಚಿಕ್ಕ ವಯಸ್ಸಿನಿಂದಲೇ ಹಲ್ಲಿನ ಆರೋಗ್ಯದ ಬಗ್ಗೆ ಗಮನಹರಿಸಬೇಕು. ವಸಡು ರಕ್ತ, ಹಲ್ಲು ನೋವು, ವಕ್ರದಂತ, ಹುಳುಕು ಹಲ್ಲು ಮುಂತಾದ ಸಮಸ್ಯೆಗಳು ಕಂಡ ಕೂಡಲೇ ವೈದ್ಯರ ಬಳಿ ತೋರಿಸಿ ಪ್ರಾರಂಭದಲ್ಲೇ ಚಿಕಿತ್ಸೆ ಪಡೆದರೆ ಮುಂದೆ ಹಲ್ಲುಗಳ ಆರೋಗ್ಯ ಕಾಪಾಡಬಹುದು ಎಂದರು.

ಶಿಬಿರದಲ್ಲಿ 130ಕ್ಕೂ ಹೆಚ್ಚು ಜನರಿಗೆ ದಂತ ಪರೀಕ್ಷೆ ನಡೆಸಿ ಚಿಕಿತ್ಸೆ ನೀಡಲಾಯಿತು.

ಕೆಡಿಸಿ ದಂತ ಚಿಕಿತ್ಸಾ ಕೇಂದ್ರ ಒಕ್ಕೂಟದ ವೈ.ಆರ್. ಸುರೇಶ್, ಸಂಜೀವ್‌ಕುಮಾರ್, ಮಹೇಶ್, ಧರ್ಮೇಂದ್ರರಾವ್, ವೈದ್ಯರಾದ ಡಾ. ವಿನಯ್‌ಗುಗ್ಗರಿ, ಡಾ. ಶ್ವೇತಾ, ಡಾ. ಪಾರ್ಥಿಬನ್, ಡಾ. ಸಂಗೀತಾ, ಡಾ. ಶ್ರುತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net