ತಲೆನೋವಾದ ಹೊಸ ತಂತ್ರಜ್ಞಾನ- ಕ್ಯೂ ಆರ್ ಕೋಡ್‌ನಿಂದ ರೈತರಿಗೆ ಸಮಸ್ಯೆ ಸೃಷ್ಟಿ

Yalaburga Farmers Center
ಯಲಬುರ್ಗಾ ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ಬಿತ್ತನೆ ಬೀಜಗಳ ಪ್ಯಾಕೆಟ್ ಮೇಲೆ ಕ್ಯೂ ಆರ್ ಕೋಡ್ ಸ್ಕಾೃನ್ ಮಾಡಿ ವಿತರಿಸುತ್ತಿರುವ ಸಿಬ್ಬಂದಿ.
Published on

ಯಲಬುರ್ಗಾ: ಬಿತ್ತನೆ ಬೀಜಗಳಲ್ಲಿ ನಕಲಿ ಮತ್ತು ಮಧ್ಯವರ್ತಿಗಳ ಹಾವಳಿ ತಡೆಯಲು ಕೃಷಿ ಇಲಾಖೆ ವಿನೂತನ ಪ್ರಯೋಗಕ್ಕೆ ಮುಂದಾಗಿದೆ. ವಿತರಣೆ ವೇಳೆ ಪ್ಯಾಕೆಟ್ ಮೇಲೆ ಕ್ಯೂ ಆರ್ ಕೋಡ್ ಅನ್ನು ಕಡ್ಡಾಯಗೊಳಿಸಿದೆ. ಆದರೆ, ಬಿತ್ತನೆ ಬೀಜ ಹಂಚಿಕೆಯಲ್ಲಿ ವಿಳಂಬವಾಗುತ್ತಿದ್ದು, ರೈತರಿಗೆ ತಲೆನೋವಾಗಿ ಪರಿಣಮಿಸಿದೆ.

ಮುಂಗಾರು ಹಂಗಾಮಿನ ಬೀಜಗಳನ್ನು ರೈತರಿಗೆ ಪಾರದರ್ಶಕವಾಗಿ ಹಂಚಲು ಪ್ಯಾಕೆಟ್‌ನ್ನು ಸ್ಕಾೃನ್ ಮಾಡಿ ಮಾಡಿ ಸೀಡ್ ಎಂಐಎಸ್ ತಂತ್ರಾಂಶದಲ್ಲಿ ಕ್ಯೂ ಆರ್ ಕೋಡ್ ಮತ್ತು ಇತರ ವಿವರಗಳನ್ನು ಇಲಾಖೆ ಸಿಬ್ಬಂದಿ ದಾಖಲಿಸುತ್ತಿದ್ದಾರೆ.

ಈ ವ್ಯವಸ್ಥೆ ಇರುವುದರಿಂದ ಕಳೆದ ಬಾರಿಗಿಂತ ಈ ಸಲ ಬೀಜ ವಿತರಣೆಯಲ್ಲಿ ಸ್ವಲ್ಪ ವಿಳಂಬವಾಗಿದೆ. ಈ ವ್ಯವಸ್ಥೆ ರೈತರ ಒಳಿತಿಗಾಗಿ ಜಾರಿಗೊಳಿಸಲಾಗಿದೆ ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿಗಳು. ದಿನಕ್ಕೆ ಅಂದಾಜು 100 ರೈತರಿಗೆ ವಿತರಣೆಯಾಗುತ್ತಿದ್ದು, ಬೆಳ್ಳಂ ಬೆಳಗ್ಗೆ ಸರದಿ ಸಾಲಿನಲ್ಲಿ ನಿಲ್ಲುವುದರಿಂದ ರೈತರು ಸಮಸ್ಯೆ ಎದುರಿಸುವಂತಾಗಿದೆ.

ತೇವಾಂಶ ಕೊರತೆ ಆತಂಕ

ಯಲಬುರ್ಗಾ ಹೋಬಳಿ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗಿದ್ದು, ಕೃಷಿ ಚಟುವಟಿಕೆ ಬಿರುಸುಗೊಂಡಿದೆ. ಬೀಜ ವಿತರಣೆಯಲ್ಲಿ ಕ್ಯೂ ಆರ್ ಕೋಡ್ ವ್ಯವಸ್ಥೆಯಿಂದಾಗಿ ರೈತರು ಬಿತ್ತನೆಗೆ ತೇವಾಂಶ ಕೊರತೆಯಾಗುವ ಸಂಭವವಿದೆ. ಇನ್ನೂ ಕುಕನೂರು, ಹಿರೇವಂಕಲಕುಂಟಾ, ಮಂಗಳೂರು ಹೋಬಳಿ ವ್ಯಾಪ್ತಿಯಲ್ಲಿ ಮಳೆಯ ಕಡಿಮೆಯಾಗಿದ್ದು, ಬಿತ್ತನೆ ಪ್ರಮಾಣ ಕಡಿಮೆಯಾಗಿದೆ.

ದಾಸ್ತಾನು ಕೊರತೆ ಇಲ್ಲ

ಯಲಬುರ್ಗಾ ಹಾಗೂ ಕುಕನೂರು ತಾಲೂಕಿನ ರೈತ ಸಂಪರ್ಕ ಕೇಂದ್ರಗಳಲ್ಲಿ ಮುಂಗಾರು ಬಿತ್ತನೆಗೆ ಅಗತ್ಯ ಬೀಜಗಳನ್ನು ದಾಸ್ತಾನು ಮಾಡಲಾಗಿದೆ. ಸಜ್ಜೆ, ಹೆಸರು, ಸೂರ್ಯಕಾಂತಿ, ತೊಗರಿ, ಮೆಕ್ಕೆಜೋಳ ಬೀಜಗಳನ್ನು 783 ಕ್ವಿಂಟಾಲ್ ದಾಸ್ತಾನು ಇದೆ. ಈ ಪೈಕಿ 239 ಕ್ವಿಂಟಾಲ್ ಈಗಾಗಲೇ ಮಾರಾಟವಾಗಿದೆ. ಇನ್ನೂ 543 ಕ್ವಿಂಟಾಲ್ ಬೀಜಗಳ ಸಂಗ್ರಹ ಇದೆ. ಬಿತ್ತನೆ ಬೀಜಗಳಿಗೆ ಯಾವುದೇ ಕೊರತೆ ಇಲ್ಲ.

ಮುಂಗಾರು ಬಿತ್ತನೆಗೆ ಅವಶ್ಯ ಬೀಜಗಳ ದಾಸ್ತಾನು ಮಾಡಲಾಗಿದೆ. ರೈತರಿಗೆ ಬೀಜ ವಿತರಣೆಯಲ್ಲಿ ಯಾವುದೇ ರೀತಿ ಮೋಸ ಆಗದಂತೆ ಪಾರದರ್ಶಕವಾಗಿ ಹಂಚಿಕೆ ಮಾಡಲಾಗುತ್ತಿದೆ. ಹಾಗಾಗಿ ಕೃಷಿ ಇಲಾಖೆ ಕ್ಯೂ ಆರ್ ಕೋಡ್ ವ್ಯವಸ್ಥೆ ಜಾರಿಗೆ ತಂದಿದೆ. ರೈತರಿಗೆ ಯಾವುದೇ ತೊಂದರೆಯಾಗದಂತೆ ಬೀಜಗಳನ್ನು ವಿತರಣೆ ಮಾಡಲಾಲಾಗುವುದು.| ಪ್ರಾಣೇಶ ಹಾದಿಮನಿ, ಸಹಾಯಕ ಕೃಷಿ ನಿರ್ದೇಶಕ, ಯಲಬುರ್ಗಾ ಮುಂಗಾರು ಬಿತ್ತನೆ ಬೀಜಗಳನ್ನು ಪಡೆಯಲು ಪ್ರತಿ ಪ್ಯಾಕೆಟ್ ಅನ್ನು ಕ್ಯೂ ಆರ್ ಕೋಡ್ ಸ್ಕಾೃನ್ ಮಾಡಿ ವಿತರಿಸುತ್ತಿದ್ದಾರೆ. ಬೆಳಗ್ಗೆಯಿಂದ ಸಾಲಿನಲ್ಲಿ ನಿಂತರೂ ಬೀಜ ಪಡೆಯಲು ಆಗುತ್ತಿಲ್ಲ. ಇದರಿಂದ ಬಿತ್ತನೆಗೆ ಹಿನ್ನಡೆಯಾಗಿ ಭೂಮಿ ತೇವಾಂಶದ ಪ್ರಯೋಜವನ್ನು ಪಡೆಯಲಾಗುತ್ತಿಲ್ಲ. ಸುಲಭವಾಗಿ ಸಕಾಲಕ್ಕೆ ಬೀಜ ವಿತರಣೆ ಮಾಡಲು ಇಲಾಖೆ ಅಧಿಕಾರಗಳು ಕ್ರಮ ಕೈಗೊಳ್ಳಬೇಕು.| ಅಶೋಕ, ಗೆದಗೇರಿ ರೈತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net