ತಲೆನೋವಾದ ಬೈಕ್ ಸವಾರರು

FotoJet (1)
Published on

ಪ್ರವಾಸಿತಾಣಗಳ ವೀಕ್ಷಣೆ ನೆಪದಲ್ಲಿ ಸಾರ್ವಜನಿಕರಿಗೆ ಕಿರಿಕಿರಿ

ಅಪಘಾತ ತಡೆ ಮುನ್ನೆಚ್ಚರಿಕೆಗೆ ಪೊಲೀಸರ ಕಾರ್ಯಾಚರಣೆ

ಚಿಕ್ಕಬಳ್ಳಾಪುರ: ರಾಜಧಾನಿ ಬೆಂಗಳೂರಿಗೆ ಸಮೀಪದಲ್ಲಿರುವ ಜಿಲ್ಲೆಯಲ್ಲಿ ಪ್ರವಾಸಿತಾಣಗಳ ವೀಕ್ಷಣೆಯ ನೆಪದಲ್ಲಿ ಬೈಕ್ ವೀಲಿಂಗ್, ಅತಿ ವೇಗದ ವಾಹನ ಚಾಲನೆ, ಕರ್ಕಶ ಶಬ್ದ ಸೇರಿ ಕಿರಿಕಿರಿಯ ಚಟುವಟಿಕೆ ಹೆಚ್ಚಾಗುತ್ತಿದ್ದು, ಸ್ಥಳೀಯರ ಜತೆಗೆ ಪೊಲೀಸರಿಗೂ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ.

ಹೌದು! ಸಂಚಾರಿ ನಿಯಮ ಉಲ್ಲಂಘಿಸುತ್ತಿರುವ ಕೆಲ ಪುಂಡರು, ಪಡ್ಡೆ ಹುಡುಗರ ಜಾಲಿ ರೈಡ್ ನಾನಾ ಸಮಸ್ಯೆಗಳಿಗೆ ಕಾರಣವಾಗಿದೆ.

ಪ್ರತಿ ಶನಿವಾರ ಮತ್ತು ಭಾನುವಾರ, ರಜೆಯ ವಿಶೇಷ ದಿನಗಳಂದು ರಾಜಧಾನಿ ಬೆಂಗಳೂರು ಸುತ್ತಲಿನಿಂದ ವಿದ್ಯಾರ್ಥಿಗಳು, ಟೆಕ್ಕಿಗಳು ಸೇರಿ ಖಾಸಗಿ ಸಂಸ್ಥೆಯ ನೌಕರರು ದ್ವಿಚಕ್ರ ವಾಹನಗಳಲ್ಲಿ ಜಿಲ್ಲೆಯ ಪ್ರವಾಸಿ ತಾಣಗಳಿಗೆ ತಂಡೋಪ ತಂಡವಾಗಿ ಭೇಟಿ ನೀಡುತ್ತಿದ್ದು, ಇದೇ ವೇಳೆ ಅಡ್ಡಾದಿಡ್ಡಿಯಾಗಿ ಅತಿ ವೇಗದ ವಾಹನ ಚಾಲನೆ, ವೀಲಿಂಗ್ ಮತ್ತು ಚೇಸಿಂಗ್, ಜೋರಾಗಿ ಕೇಳಿ ಬರುವ ಕರ್ಕಶ ಶಬ್ದ, ಉತ್ಸಾಹದ ಪೈಪೋಟಿಯಲ್ಲಿ ಕಿರುಚಾಟ ಪ್ರಕರಣಗಳು ಹೆಚ್ಚಾಗಿವೆ. ಇವುಗಳ ಬಗ್ಗೆ ನಿರಂತರ ದೂರು ಸಲ್ಲಿಸಿ ಸ್ಥಳೀಯ ಜನರು, ದಂಡ ವಿಧಿಸಿ ವಾಹನಗಳನ್ನು ವಶಪಡಿಸಿಕೊಳ್ಳುತ್ತಿದ್ದರೂ ನಿಯಮ ಉಲ್ಲಂಘನೆ ನಿಲ್ಲದಿರುವುದರಿಂದ ಪೊಲೀಸರು ಹೈರಾಣರಾಗುವಂತಾಗಿದೆ. ಅಂತಾರಾಷ್ಟ್ರೀಯ ಆಧ್ಯಾತ್ಮಿಕ ತಾಣ ಈಶ ಆದಿಯೋಗಿ ಧ್ಯಾನ ಕೇಂದ್ರ, ಕರ್ನಾಟಕದ ಊಟಿ ಎಂದೇ ಹೆಸರು ಗಳಿಸಿರುವ ನಂದಿ ಗಿರಿಧಾಮ, ಮೋಡವನ್ನು ಅಪ್ಪಿಕೊಂಡ ಅನುಭವ ನೀಡುವ ಸ್ಕಂದಗಿರಿ, ಸೆಲ್ಫಿ ಬಂಡೆಯ ಆವಲಬೆಟ್ಟ, ಶ್ರೀನಿವಾಸ ಸಾಗರ, ಕೇತೇನಹಳ್ಳಿ ಫಾಲ್ಸ್ ಸೇರಿ ಜಿಲ್ಲೆಯ ಹಲವು ಆಕರ್ಷಕ ತಾಣಗಳು ಪ್ರವಾಸಿಗರನ್ನು ಇತ್ತ ಸೆಳೆಯುತ್ತಿವೆ. ಬೆಂಗಳೂರಿಗೆ ಸಮೀಪದಲ್ಲಿರುವುದರಿಂದ ವಾರಾಂತ್ಯದ ರಜೆ ಕಳೆಯಲು ಹಲವರು ಇಲ್ಲಿನ ಪ್ರವಾಸಿ ತಾಣಗಳತ್ತ ಲಗ್ಗೆ ಇಡುತ್ತಿದ್ದು, ಟ್ರಾಫಿಕ್ ಜಾಮ್ ಜತೆಗೆ ಪುಂಡರ ಅತಿರೇಕ ವರ್ತನೆ, ಕಿಡಿಗೇಡಿ ಕೃತ್ಯಗಳು ಜಾಸ್ತಿಯಾಗಿವೆ.

ಪೈಪೋಟಿಯ ವಾಹನ ಚಾಲನೆ

ಚಿಕ್ಕಬಳ್ಳಾಪುರ ನಡುವೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 44 (ಬೆಂಗಳೂರು-ಬಾಗೇಪಲ್ಲಿ)ರಲ್ಲಿ ಆವತಿಯಿಂದ ವಾಪಸಂದ್ರ ಬೈಪಾಸ್ ರಸ್ತೆ ಮೂಲಕ ಚೆಂಡೂರು ಕ್ರಾಸ್, ರಾಷ್ಟ್ರೀಯ ಹೆದ್ದಾರಿ 69 ರಲ್ಲಿ ಕಣಜೇನಹಳ್ಳಿಯಿಂದ ಮಂಚೇನಹಳ್ಳಿ ಸಮೀಪ, ದೇವನಹಳ್ಳಿಯಿಂದ ಕಾರಹಳ್ಳಿ ಕ್ರಾಸ್ ಮಾರ್ಗವಾಗಿ ನಂದಿಬೆಟ್ಟ ರಸ್ತೆ, ದೊಡ್ಡಬಳ್ಳಾಪುರದಿಂದ ಸುಲ್ತಾನಪೇಟೆ ಮಾರ್ಗವಾಗಿ ನಂದಿ ರಸ್ತೆ, ಚಿಕ್ಕಬಳ್ಳಾಪುರ ಮತ್ತು ಕೇತೇನಹಳ್ಳಿ, ಮುದ್ದೇನಹಳ್ಳಿ ಮತ್ತು ಕಳವಾರ ರಸ್ತೆಯಲ್ಲಿ ಬೈಕ್ ಸ್ಟಂಟ್‌ಗಳು ಹೆಚ್ಚಾಗಿವೆ. ಇತ್ತೀಚೆಗೆ ನಗರದ ಹೃದಯ ಭಾಗದ ರಸ್ತೆ, ಜನಸಂದಣಿಯಲ್ಲೂ ಪೈಪೋಟಿಯ ಅತಿ ವೇಗದ ವಾಹನ ಚಾಲನೆ, ಕರ್ಕಶ ಶಬ್ದವನ್ನುಂಟು ಮಾಡುವುದು ಕಂಡು ಬರುತ್ತಿದೆ. ಅಸಡ್ಡೆಯ ಧೋರಣೆಯಿಂದ ಅಪಘಾತಗಳು ಸಂಭವಿಸುತ್ತಿದ್ದು ಜೀವಗಳ ಬಲಿ, ಗಾಯಾಳುಗಳ ಸಂಖ್ಯೆ ಏರಿಕೆಗೆ ಕಾರಣವಾಗಿದೆ.

ಪೊಲೀಸ್ ಕಾರ್ಯಾಚರಣೆ

ಸಂಚಾರಿ ನಿಯಮಗಳ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಪೊಲೀಸರು ನಿರಂತರ ಕಾರ್ಯಾಚರಣೆ ಕೈಗೊಳ್ಳುತ್ತಿದ್ದಾರೆ.

ಕಳೆದ ಶನಿವಾರ ಮತ್ತು ಭಾನುವಾರ ಹಲವು ವಾಹನಗಳನ್ನು ವಶಪಡಿಸಿಕೊಂಡಿದ್ದು ನಿಯಮ ಉಲ್ಲಂಘನೆಯ ಸವಾರರಿಗೆ ದಂಡ ವಿಧಿಸುವುದರ ಜತೆಗೆ ಎಚ್ಚರಿಕೆಯನ್ನು ನೀಡಲಾಗಿದೆ. ಸುಗಮ ಸಂಚಾರ ಮತ್ತು ಅಪಘಾತಗಳ ತಡೆಗೆ ಬಿಗಿ ಕ್ರಮ ಕೈಗೊಳ್ಳಲು ಸಿಬ್ಬಂದಿಗೆ ಈಗಾಗಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ಸೂಚಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net