ಕೌಟುಂಬಿಕ ಕಲಹ; ವಿಷಸೇವಿಸಿ ಪ್ರಾಣಬಿಟ್ಟ ಹೆಡ್​ಕಾನ್ಸ್​ಟೇಬಲ್​

Death Note
Published on

ಬೆಂಗಳೂರು: ಕೌಟುಂಬಿಕ ಕಲಹದಿಂದ ಬೇಸತ್ತಿದ್ದ ಹೆಡ್​ ಕಾನ್ಸ್​ಟೇಬಲ್​ ಒಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ನಗರದ ಚಂದ್ರಾ ಲೇಔಟ್​ ಪೊಲೀಸ್​ ಠಾಣೆ ವ್ಯಾಪ್ತಿಯ ಅತ್ತಿಗುಪ್ಪೆಯಲ್ಲಿ ನಡೆದಿದೆ.

ಮೃತರನ್ನು ಹಾಸನ ಮೂಲದ ನವೀನ್​ ಎಂದು ಗುರುತಿಸಲಾಗಿದ್ದು, ಇವರು ವಿಜಯನಗರ ಸಂಚಾರಿ ಪೊಲೀಸ್​ ಠಾಣೆಯಲ್ಲಿ ಹೆಡ್​ ಕಾನ್ಸ್​ಟೇಬಲ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಮೊದಲಿಗೆ ಇವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿತ್ತು.

Head Constable Naveen

ಕೌಟುಂಬಿಕ ಕಲಹದಿಂದ ಬೇಸತ್ತಿದ್ದ ನವೀನ್ ಶುಕ್ರವಾರ ಕರ್ತವ್ಯ ಮುಗಿಸಿಕೊಂಡು ಬಂದ ನಂತರ​ ಮನೆಯಲ್ಲಿ ಯಾರು ಇಲ್ಲದ ವೇಳೆ ವಿಷ ಬೆರೆಸಿದ ಮದ್ಯ ಹಾಗೂ ಕೂಲ್​ಡ್ರಿಂಕ್ಸ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಯುವ ಕೆಲ ಹೊತ್ತಿಗೂ ಮುಂಚೆ ವಾಟ್ಸ್​ಆ್ಯಪ್​ ಸ್ಟೇಟಸ್​ನಲ್ಲಿ ನೋವಿನ ನುಡಿಗಳನ್ನು ಸಹ ಹಂಚಿಕೊಂಡಿದ್ದರು.

ಶನಿವಾರ ಬೆಳಗ್ಗೆ ಕುಟುಂಬಸ್ಥರು ಹಾಗೂ ಸಹೋದ್ಯೋಗಿಗಳ ಕರೆ ಸ್ವೀಕರಿಸದೆ ಇದ್ದಾಗ ಅನುಮಾನಗೊಂಡು ಮನೆಯ ಬಾಗಿಲು ಮುರಿದು ಪರಿಶೀಲಿಸಿದಾಗ ನವೀನ್​ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.

ಮೊದಲಿಗೆ ಹೃದಯಾಘಾತದಿಂದ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿತ್ತು. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ. ಚಂದ್ರಾಲೇಔಟ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net