

ಕಿಕ್ಕೇರಿ: ಗುರುವಿಗಿಂತ ದೊಡ್ಡ ವ್ಯಕ್ತಿ, ಶಕ್ತಿ ಮತ್ತೊಂದಿಲ್ಲವಾಗಿದ್ದು ನಮ್ರತೆ, ವಿನಯವನ್ನು ವಿದ್ಯಾರ್ಥಿಗಳು ಪಾಲಿಸಬೇಕು ಎಂದು ಸಮಾಜ ಸೇವಕ ಜಿ. ಮಂಜು ಸಲಹೆ ನೀಡಿದರು.
ಹೋಬಳಿಯ ಗಂಗೇನಹಳ್ಳಿ ಗ್ರಾಮದಲ್ಲಿ ಗುರುವಾರ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತ, ಉತ್ತಮ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ದೊಡ್ಡದಿದೆ. ಅಕ್ಷರ ಕಲಿಸುವ ಮೂಲಕ ತಿದ್ದಿ ತೀಡಿ ಸಂಸ್ಕಾರಯುತ ಶಿಷ್ಯರನ್ನು ನಿರ್ಮಿಸುವ ಮಹಾ ಶಿಲ್ಪಿ ಗುರುಗಳು ಎಂಬುದನ್ನು ಮರೆಯಬಾರದು ಎಂದರು.
ಶಿಕ್ಷಣ ಎನ್ನುವುದು ವ್ಯಾಪಾರದ ಸರಕಾಗಿದೆ. ಖಾಸಗಿ ಶಾಲೆಯ ವ್ಯಾಮೋಹದಿಂದ ಬಡವರ ಮಕ್ಕಳ ಶಿಕ್ಷಣಕ್ಕೆ ಕುತ್ತಾಗಿದೆ. ಸರ್ಕಾರಿ ಶಾಲೆಯಲ್ಲಿರುವ ಶಿಕ್ಷಕರು ಸ್ಪರ್ಧಾತ್ಮಕ ಪರೀಕ್ಷೆ ಬರೆದು ಬಂದಿರುವ ಶಿಕ್ಷಕರಾಗಿದ್ದು, ತಮ್ಮ ವೃತ್ತಿಗೆ ಅಪಚಾರವೆಸಗದೆ ಮಕ್ಕಳಿಗೆ ಮೌಲ್ಯಯುತ ಶಿಕ್ಷಣದ ಜತೆಗೆ ನೈತಿಕ ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದರು.
ಮುಖ್ಯಶಿಕ್ಷಕ ಹನುಮಂತ ಭಜಂತ್ರಿ ಮಾತನಾಡಿ, ಶಿಕ್ಷಕ, ತತ್ವಜ್ಞಾನಿ, ರಾಜತಾಂತ್ರಿಕನಾಗಿ, ದೇಶದ ರಾಷ್ಟ್ರಪತಿಯಾಗಿ ಗುರು ಶಿಷ್ಯ ಪರಂಪರೆಗೆ ಭದ್ರ ಭುನಾದಿ ಹಾಕಿದ ಡಾ. ಎಸ್.ರಾಧಾಕೃಷ್ಣನ್ ಅವರ ಜನ್ಮದಿನ ಶಿಕ್ಷಕರ ದಿನವಾಗಿರುವುದು ಶಿಕ್ಷಕ ಕ್ಷೇತ್ರಕ್ಕೆ ಮಹಾನ್ ಕೊಡುಗೆಯಾಗಿದೆ ಎಂದು ಸ್ಮರಿಸಿದರು.
ಮಕ್ಕಳು ಗುರುಗಳಿಗೆ ಉಡುಗೊರೆ ನೀಡಿ ಖುಷಿಪಟ್ಟರು. ಎಸ್.ರಾಧಾಕೃಷ್ಣನ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಶಿಕ್ಷಕ ನಟೇಶ್ ಮತ್ತಿತರರು ಹಾಜರಿದ್ದರು.