

ಹನೂರು: ಶಾಂತಿಯುತವಾಗಿ ಮತ ಚಲಾಯಿಸಿ ಸುರಕ್ಷಿತವಾಗಿ ಮನೆಗೆ ಆಗಮಿಸಬೇಕು ಎಂದು ಹೊರಟಿದ್ದ ತಾಲೂಕಿನ ಮೆಂದಾರೆ ಗ್ರಾಮದ ಗಿರಿಜನರು ಶುಕ್ರವಾರ ಇಂಡಿಗನತ್ತ ಮತಗಟ್ಟೆಯಲ್ಲಿ ನಡೆದ ಗಲಭೆಯಲ್ಲಿ ಹಲ್ಲೆಗೊಳಗಾಗಿ ಚಿಕಿತ್ಸೆ ಪಡೆಯುತ್ತಿರುವುದು ನಿಜಕ್ಕೂ ದುರದೃಷ್ಟಕರ.
ಶುಕ್ರವಾರ ಇಂಡಿಗನತ್ತ ಗ್ರಾಮದಲ್ಲಿ ಗ್ರಾಮಸ್ಥರು ಚುನಾವಣೆ ಬಹಿಷ್ಕಾರ ಹಾಕಿದ್ದ ಹಿನ್ನೆಲೆ ಜನರು ಮತಗಟ್ಟೆಯತ್ತ ಸುಳಿಯಲಿಲ್ಲ. ಇದರಿಂದ ಸ್ಥಳಕ್ಕೆ ತೆರಳಿದ ತಹಸೀಲ್ದಾರ್ ವೈ.ಕೆ.ಗುರುಪ್ರಸಾದ್, ತಾಪಂ ಇಒ ಉಮೇಶ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಮಂಜುಳಾ, ಇನ್ಸ್‌ಪೆಕ್ಟರ್ ಮಂಜುಳಾ ಹಾಗೂ ಇನ್ನಿತರ ಅಧಿಕಾರಿಗಳ ತಂಡ ಗ್ರಾಮಕ್ಕೆ ಭೇಟಿ ನೀಡಿತ್ತು. ಆದರೆ ಗ್ರಾಮಸ್ಥರನ್ನು ಮನವೊಲಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಇದರಿಂದ ಮೆಂದಾರೆ ಗ್ರಾಮದ ಸುಮಾರು 50ಕ್ಕೂ ಹೆಚ್ಚು ಗಿರಿಜನರನ್ನು ಮನವೊಲಿಸಿ ಮತ ಚಲಾಯಿಸಲು ಮತಗಟ್ಟೆಗೆ ಕರೆ ತಂದಿದ್ದರು. ಈ ವೇಳೆ ನಡೆದ ಗಲಭೆಯಲ್ಲಿ ಸುಮಾರು 15ಕ್ಕೂ ಹೆಚ್ಚು ಗಿರಿಜನ ಅಮಾಯಕರು ಹಲ್ಲೆಗೆ ಒಳಗಾಗಬೇಕಾಯಿತು. ಆದರೆ ಅಲ್ಲಿ ಆಸ್ಪತ್ರೆ ವ್ಯವಸ್ಥೆ ಇಲ್ಲದ ಪರಿಣಾಮ ಇಡೀ ದಿನ ನೋವು ಅನುಭವಿಸಿದರು. ಈ ದೆಸೆಯಲ್ಲಿ ಶನಿವಾರ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಮಂಜುಳಾ, ತಹಸೀಲ್ದಾರ್ ವೈ.ಕೆ.ಗುರುಪ್ರಸಾದ್, ತಾಪಂ ಇಒ ಉಮೇಶ್, ತಾಲೂಕು ವೈದ್ಯಾಧಿಕಾರಿ ಡಾ.ಪ್ರಕಾಶ್ ಹಾಗೂ ಇನ್ನಿತರ ಅಧಿಕಾರಿಗಳ ತಂಡ ಮೆಂದಾರೆ ಗ್ರಾಮಕ್ಕೆ ಭೇಟಿ ನೀಡಿ ಗಾಯಾಳುಗಳಿಗೆ ಅಗತ್ಯ ಚಿಕಿತ್ಸೆ ಕೊಡಿಸಿದ್ದಾರೆ. ಹಾಗಾಗಿ ಮತ ಚಲಾಯಿಸಿ ಮನೆಗೆ ಸೇರಬೇಕಾದ ಅಮಾಯಕರು ಹಲ್ಲೆಗೊಳಗಾಗಿ ಚಿಕಿತ್ಸೆ ಪಡೆಯುತ್ತಿದ್ದು, ಏನು ಅರಿಯದ ತಪ್ಪಿಗೆ ನೋವು ಅನುಭವಿಸುತ್ತಿರುವುದು ನಿಜಕ್ಕೂ ಶೋಚನೀಯ ಸಂಗತಿ.
ಮತ ಚಲಾಯಿಸಲು ತೆರಳಿದ್ದು ಮುಳುವಾಯಿತೇ?: ಇಂಡಿಗನತ್ತ ಹಾಗೂ ಮೆಂದಾರೆ ಗ್ರಾಮಸ್ಥರು ಈವರೆಗೂ ಉತ್ತಮ ಒಡನಾಟವನ್ನು ಹೊಂದಿದ್ದು, ಪರಸ್ಪರ ಶಾಂತಿ, ಸೌಹಾರ್ದತೆಯಿಂದ ಜೀವನ ನಡೆಸುತ್ತಿದ್ದರು. ಆದರೆ ನಡೆದ ಗಲಭೆಯಿಂದ ಗಿರಿಜನರು ಹಲ್ಲೆಗೊಳಗಾಗಿರುವುದಕ್ಕೆ ಮೆಂದಾರೆ ಗ್ರಾಮದ ಸೋಲಿಗ ಮುಖಂಡರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇತ್ತ ಸೋಲಿಗರ ಅಭಿವೃದ್ಧಿ ಸಂಘ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು, ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪ್ರತಿಭಟನೆ ನಡೆಸಿದೆ.
ಇದರಿಂದ ಎರಡೂ ಗ್ರಾಮದಲ್ಲೂ ಭಯದ ವಾತಾವರಣ ನಿರ್ಮಾಣವಾಗಿದೆ. ಗಿರಿಜನರು ಮತ ಚಲಾಯಿಸಲು ತೆರಳಿದ್ದು ಶಾಂತಿ, ಸೌಹಾರ್ದತೆಗೆ ಮುಳುವಾಯಿತೇ? ಎಂಬ ಪ್ರಶ್ನೆ ಮನೆ ಮಾಡಿದೆ. ಇದರಿಂದ ಗ್ರಾಮಗಳಲ್ಲಿ ಪರಿಸ್ಥಿತಿ ಬಿಗಡಾಯಿಸಿದ್ದು, ಮುಂಜಾಗ್ರತಾ ಕ್ರಮವಾಗಿ ಪೊಲೀಸರನ್ನು ನಿಯೋಜಿಸಲಾಗಿದೆ.
ಜಾತಿ ನಿಂದನೆ ದೂರು ದಾಖಲು: ಹಲ್ಲೆಗೊಳಗಾದ ಗಿರಿಜನರು ಜೀವ ರಕ್ಷಣೆಯ ದೃಷ್ಟಿಯಿಂದ ಭಯಭೀತರಾಗಿರುವ ಹಿನ್ನೆಲೆ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಜಿಲ್ಲಾಧಿಕಾರಿ ಅವರ ಅನುಮತಿ ಪಡೆದು ಅಗತ್ಯ ಕ್ರಮವಹಿಸಿದ್ದು, ಮ.ಬೆಟ್ಟದಲ್ಲಿ ಕೆಲವು ದಿನಗಳ ಕಾಲ ತಂಗಲು ವ್ಯವಸ್ಥೆ ಮಾಡಿದ್ದಾರೆ. ಜೀವ ಭಯವಿರುವುದರಿಂದ ಹಲ್ಲೆಗೊಳಗಾದ ಗಿರಿಜನರು ಮ.ಬೆಟ್ಟದ ಪೊಲೀಸ್ ಠಾಣೆಯಲ್ಲಿ ಜಾತಿ ನಿಂದನೆ ದೂರು ನೀಡಿದ್ದಾರೆ.
ಮತಗಟ್ಟೆಯ ಮಹಜರು: ಘಟನೆಯ ಹಿನ್ನೆಲೆ ಎಎಸ್ಪಿ ಉದೇಶ್, ತಹಸೀಲ್ದಾರ್ ವೈ.ಕೆ.ಗುರುಪ್ರಸಾದ್ ಹಾಗೂ ಇನ್ನಿತರ ಅಧಿಕಾರಿಗಳ ತಂಡ ಶನಿವಾರ ಇಂಡಿಗನತ್ತ ಮತಗಟ್ಟೆಗೆ ತೆರಳಿ ಮಹಜರು ನಡೆಸಿದ್ದು, ವರದಿ ಸಂಗ್ರಹಿಸಿದ್ದಾರೆ. ಹಲ್ಲೆಗೊಳಗಾದವರಿಂದ ಮಾಹಿತಿ ಸಂಗ್ರಹಿಸಲಾಗಿದ್ದು, ಈಗಾಗಲೇ ಘಟನೆಗೆ ಕಾರಣವಾದ ಬಹುತೇಕರನ್ನು ಬಂಧಿಸಲಾಗಿದೆ. ಈ ಮೂಲಕ ಪೊಲೀಸರು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ. ಜತೆಗೆ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಪಥ ಸಂಚಲನ ನಡೆಸಿದ್ದು, ಗ್ರಾಮದಲ್ಲೇ ಮೊಕ್ಕಾಂ ಹೂಡಿದ್ದಾರೆ.