ಮಳೆಗಾಗಿ ಅರಿಶಿಣಶಾಸ್ತ್ರ, ಸುರಗಿಶಾಸ್ತ್ರ ಮಾಡಿ ಮದುವೆಯನ್ನೂ ಮಾಡಿದರು

kappe madve
Published on

ಕಲಘಟಗಿ: ಕೋತಿಗೂ ಕೋಳಿಗೂ ನಂಟತನ ಮಾಡಿದ್ರೆ ಭೂಮಿಗೆ ಮಳೆ ಆಗುತ್ತೆ ಎಂಬ ಹಿರಿಯರ ನಂಬಿಕೆಗೆ ಪೂರಕವಾದ ಮತ್ತೊಂದು ನಂಬಿಕೆಯ ವಿಶಿಷ್ಟ ಪದ್ಧಿಯನ್ನು ಆಚರಣೆ ಮಾಡುವಲ್ಲಿ ತಾಲೂಕಿನ ಸೂರಶೆಟ್ಟಿಕೊಪ್ಪ ಗ್ರಾಮದ ಜನರು ಸಾಕ್ಷಿಯಾಗಿದ್ದಾರೆ.


ಪ್ರತಿ ವರ್ಷ ಮೇ ತಿಂಗಳ ಕೊನೆಯ ವಾರಾಂತ್ಯ ರೋಹಿಣಿ ಮಳೆ ಆರಂಭವಾಗಿ ಜೂನ್ ಮೊದಲ ವಾರದ ಹೊಸ್ತಿಲಲ್ಲಿ ತಾಲೂಕಿನಾದ್ಯಂತ ಬಹುತೇಕ ಬಿತ್ತನೆ ಕಾರ್ಯ ಮುಗಿಯುತ್ತಿತ್ತು.

ಆದರೆ, ಈ ಭಾರಿ ರೋಹಿಣಿ ಮಳೆ ಮುಗಿದು ಮೃಗಶಿರ ಮಳೆಯ ಆಗಮನವಾದರೂ ಸಮರ್ಪಕವಾಗಿ ಮಳೆಯಾಗದೆ ಇರುವುದರಿಂದ ಕೇವಲ 7359 ಹೆಕ್ಟೇರ್ ಕೃಷಿ ಭೂಮಿ ಮಾತ್ರ ಬಿತ್ತನೆಯಾಗಿದೆ. ಇದರಿಂದ ಬೇಸತ್ತ ರೈತಾಪಿ ವರ್ಗದ ಜನರು ಹಿರಿಯರ ನಂಬಿಕೆಗೆ ಮೊರೆ ಹೋಗಿದ್ದಾರೆ.


ಕಲಘಟಗಿ ತಾಲೂಕಿನ ಸೂರಶೆಟ್ಟಿಕೊಪ್ಪ ಗ್ರಾಮದಲಿ ಮಹಿಳೆಯರು ಹಾಗೂ ರೈತರು ಒಗ್ಗೂಡಿಕೊಂಡು ಶುಕ್ರವಾರ ಕಪ್ಪೆಗಳಿಗೆ ಮದುವೆ ಮಾಡುವ ಮೂಲಕ ಮೋಡದತ್ತ ಮುಖಮಾಡಿ ಮಳೆಯ ಆಗಮನಕ್ಕೆ ಭಕ್ತಿ ಭಾವದಿಂದ ಬೇಡಿಕೊಂಡಿದ್ದಾರೆ.


ವಿಶಿಷ್ಟ ಆಚರಣೆ

ಮದುವೆ ಅಂದ್ರೆ ಹಂದರಶಾಸ್ತ್ರ, ಚಪ್ಪರ, ಅರಿಶಿಣಶಾಸ್ತ್ರ, ಸುರಗಿಶಾಸ್ತ್ರ, ದೇವತಾ ಕಾರ್ಯ, ಉಡಿತುಂಬುವ ಕಾರ್ಯ, ವಾದ್ಯಮೇಳ, ಮೆರವಣಿಗೆ, ಅನ್ನಪ್ರಸಾದ ಮಾಡಿ ಎರಡು ಕಪ್ಪೆಗಳಿಗೆ ವಿಶೇಷ ರೀತಿಯಲ್ಲಿ ಮದುವೆ ಮಾಡಿದರು.

ಗೋವಿನ ಜೋಳ ಬಿತ್ತನೆ ಮಾಡಿ ವಾರವಾಯಿತು. ಇನ್ನೂ ಮಳೆಯಾಗಿಲ್ಲ. ಹೀಗಾದರೆ ಭೂಮಿಯಲ್ಲಿ ಬಿತ್ತಿದ ಕಾಳು ಹಾಳಾಗಿ ಈ ವರ್ಷದ ಅರ್ಧ ಬದುಕನ್ನೇ ಕಿತ್ತುಕೊಂಡಂತಾಗುತ್ತದೆ. ಆದ್ದರಿಂದ ಕಪ್ಪೆಗಳಿಗೆ ಮದುವೆ ಮಾಡಿದರೆ ಮಳೆ ಆಗುತ್ತದೆ ಎಂಬ ನಮ್ಮ ಹಿರಿಯರ ನಂಬಿಕೆಯಂತೆ ಇಂದು ಕಪ್ಪೆಗಳ ಮದುವೆ ಮಾಡಿದ್ದೇವೆ. -- ಗಂಗನಗೌಡ ನಡುವಿನಮನಿ, ಗ್ರಾಪಂ ಸದಸ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net