

ಹಾವೇರಿ: ಅವರಿಬ್ಬರೂ ಒಂಬತ್ತು ವರ್ಷಗಳ ಹಿಂದೆಯೇ ಪ್ರೀತಿಸಿ ಮದುವೆಯಾಗಿದ್ದರು. ಆದರೆ ಅಷ್ಟು ಪ್ರೀತಿಸಿದ್ದ ಪತ್ನಿಯ ವಿರುದ್ಧ 9 ವರ್ಷಗಳ ಬಳಿಕ ಆತ ಅದೆಷ್ಟು ರೊಚ್ಚಿಗೆದ್ದಿದ್ದ ಎಂದರೆ ಪತ್ನಿಯನ್ನು ಕುಡುಗೋಲಿಂದ ಕಡಿದು ಕೊಲೆ ಮಾಡಿದ್ದಾನೆ. ಕೊಲೆಯ ಭೀಕರತೆಗೆ ನಗರವೇ ಬೆಚ್ಚಿಬಿದ್ದಿದೆ.
ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ಮಾರುತಿ ನಗರದಲ್ಲಿ ಈ ಕೊಲೆ ನಡೆದಿದ್ದು, ಕೌಟುಂಬಿಕ ಕಲಹವೇ ಕೊಲೆಗೆ ಕಾರಣ ಎನ್ನಲಾಗಿದೆ. ನೇತ್ರಾವತಿ ಹುಲಗಮ್ಮನವರ (30) ಮೃತಪಟ್ಟಿದ್ದು, ಪತಿ ನವೀನ್ ಆರೋಪಿ. ಕೌಟುಂಬಿಕ ವಿಚಾರವಾಗಿ ತುಂಬ ದಿನಗಳಿಂದ ಇವರಿಬ್ಬರ ಮಧ್ಯೆ ಜಗಳ ನಡೆಯುತ್ತಿದ್ದು, ಇಂದು ಕೊಲೆಯಲ್ಲಿ ಅಂತ್ಯಗೊಂಡಿದೆ.
ನವೀನ್ ಬಾರ್ವೊಂದರ ಕಟ್ಟಡದ ಮಾಲೀಕನಾಗಿದ್ದು, ಇಂದು ಮಧ್ಯಾಹ್ನ ಪತ್ನಿ ಜತೆ ಜಗಳವಾಗಿದೆ. ಕುಡುಗೋಲಿನಿಂದ ಪತ್ನಿಯ ತಲೆ ಹಾಗೂ ಕುತ್ತಿಗೆಗೆ ಬಲವಾಗಿ ಹೊಡೆದ ಪರಿಣಾಮ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಕೊಲೆ ಬಳಿಕ ನವೀನ್ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.