ಮದುವೆಯಾಗುವುದಾಗಿ ನಂಬಿಸಿ ಬಲೆಗೆ ಬೀಳಿಸಿಕೊಂಡಿದ್ದ; 3 ವರ್ಷ ಸುತ್ತಾಡಿ ಮಾಡಿದ್ದೇನು ಗೊತ್ತಾ?

insta-love-couple
Published on

ಬೆಂಗಳೂರು: ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ಯುವತಿಗೆ ಪರಿಚಯವಾಗಿದ್ದ ಪಾಂಡಿಚೇರಿ ಮೂಲದ ಯುವಕ, ಪ್ರೀತಿಸುವ ಸೋಗಿನಲ್ಲಿ ಮದುವೆಯಾಗುವುದಾಗಿ ನಂಬಿಸಿ 2 ಲಕ್ಷ ರೂ. ಪಡೆದು ವಂಚಿಸಿದ್ದಾನೆ. ವಂಚನೆಗೊಳಗಾದ ಎ.ನಾರಾಯಣಪುರ ನಿವಾಸಿ ಯುವತಿ ನೀಡಿದ ದೂರಿನ ಮೇರೆಗೆ ಪಾಂಡಿಚೇರಿ ಮೂಲದ ಕಾರ್ತಿಕ್ ಎಂಬಾತನ ವಿರುದ್ಧ ಮಹದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಗಿದ್ದೇನು?: ಸಂತ್ರಸ್ತ ಯುವತಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಇನ್‌ಸ್ಟಾಗ್ರಾಮ್ ಬಳಕೆ ಮಾಡುತ್ತಿದ್ದಾರೆ. 2017ರಲ್ಲಿ ಕಾರ್ತಿಕ್ ಎಂಬಾತ ಸ್ನೇಹ ಬೆಳೆಸಿದ್ದ. ಇಬ್ಬರು ಪರಸ್ಪರ ನ್ ನಂಬರ್ ವಿನೀಮಯ ಮಾಡಿಕೊಂಡಿದ್ದರು. ಪ್ರತಿದಿನ ವ್ಯಾಟ್ಸ್‌ಆ್ಯಪ್ ಚಾಟಿಂಗ್‌ನಲ್ಲಿ ಹಾಗೂ ಕರೆ ಮಾಡಿ ಕುಶಲೋಪರಿ ವಿಚಾರಿಸುತ್ತಿದ್ದ. 2018ರಲ್ಲಿ ಶಾಪಿಂಗ್ ಮಾಲ್‌ವೊಂದರಲ್ಲಿ ಇಬ್ಬರು ಮುಖತಃ ಭೇಟಿಯಾಗಿದ್ದರು. ತಾನು ಯೂನಿಟ್ ಇನ್ ಎಂಬ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಬಾಣಸವಾಡಿಯಲ್ಲಿ ಕಚೇರಿ ಇದೆ ಎಂದು ಆತ ಹೇಳಿದ್ದ. ಇದೇ ವೇಳೆ,  ಪ್ರೇಮ ನಿವೇದನೆ ಮಾಡಿದ್ದು, ಮದುವೆಯಾಗುವುದಾಗಿ ಹೇಳಿದ್ದ. ಅದಕ್ಕೆ ಒಪ್ಪಿಗೆ ಸೂಚಿಸಿದ್ದೆ.  ಇದಾದ ಬಳಿಕ ಪ್ರತಿ ಮೂರು ತಿಂಗಳಿಗೊಮ್ಮೆ ಕಾರ್ತಿಕ್ ಬೆಂಗಳೂರಿಗೆ ಬಂದು ಭೇಟಿಯಾಗಿ ಹೋಗುತ್ತಿದ್ದ. ಮೈಸೂರು ಪ್ರವಾಸಕ್ಕೆ ಕರೆದೊಯ್ದಿದ್ದ. ಈ ಅವಧಿಯಲ್ಲಿಯೇ ಹಂತಹಂತವಾಗಿ 2 ಲಕ್ಷ ರೂ. ನಗದು ಹಾಗೂ 6 ಗ್ರಾಂ. ಚಿನ್ನದ ಉಂಗುರು ಪಡೆದುಕೊಂಡಿದ್ದ. ಪಾಂಡಿಚೇರಿಗೂ ಕರೆಸಿಕೊಂಡಿದ್ದ.

ನಿನ್ನ ಜೊತೆಗೆ ಮದುವೆಯಾಗಲು ಪೋಷಕರು ಒಪ್ಪಿಗೆ ನೀಡುತ್ತಿಲ್ಲ. ಹೀಗಾಗಿ, ನಿನ್ನನ್ನು ಮದುವೆಯಾಗುವುದಿಲ್ಲ ಎಂದು ಸಬೂಬು ಹೇಳಿದ್ದ. ಅಲ್ಲದೇ, ಪ್ರೀತಿಸಿರುವ ವಿಚಾರವನ್ನೇ ಇಟ್ಟುಕೊಂಡು ಎಲ್ಲಿಗಾದರೂ ಹೋದರೆ, ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದ. ಖಾಸಗಿ ಫೋಟೋಗಳನ್ನು ಜಾಲತಾಣದಲ್ಲಿ ಅಪ್‌ಲೋಡ್ ಮಾಡುವುದಾಗಿ ಬ್ಲ್ಯಾಕ್‌ಮೇಲ್ ಮಾಡಿದ್ದಾನೆ. ಇತ್ತೀಚೆಗೆ ಫೋನ್ ಸಂಪರ್ಕಕ್ಕೂ ಸಿಗದೇ ನಾಪತ್ತೆಯಾಗಿದ್ದಾನೆ. ಆತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಆರೋಪಿಸಿ ಸಂತ್ರಸ್ತ ಯುವತಿ ದೂರಿನಲ್ಲಿ ವಿವರಿಸಿದ್ದಾಳೆ. ಪ್ರಕರಣ ದಾಖಲಿಸಿಕೊಂಡು ಆರೋಪಿ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net