

ಮದ್ದೂರು: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ಭರ್ಜರಿಯಾಗಿ ಜಯಗಳಿಸುವ ಮೂಲಕ ಇತಿಹಾಸ ಸೃಷ್ಟಿ ಮಾಡಿದ್ದಾರೆ ಎಂದು ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಹೇಳಿದರು.
ಜೆಡಿಎಸ್ ಅಭ್ಯರ್ಥಿ ಎಚ್.ಡಿ. ಕುಮಾರಸ್ವಾಮಿ ಅವರು ಜಯಭೇರಿ ಬಾರಿಸಿದ ಹಿನ್ನೆಲೆಯಲ್ಲಿ ಪಟ್ಟಣದ ತಮ್ಮ ನಿವಾಸದಲ್ಲಿ ಮಂಗಳವಾರ ಸಂಭ್ರಮಾಚರಣೆ ಮಾಡಿ, ಕಾರ್ಯಕರ್ತರಿಗೆ ಸಿಹಿ ತಿನಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಮಂಡ್ಯ ಲೋಕಸಭಾ ಕ್ಷೇತ್ರದ ಜನ ಪ್ರಜ್ಞಾವಂತರಿದ್ದು, ಎರಡು ಬಾರಿ ಮುಖ್ಯಮಂತ್ರಿಯಾಗಿ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಗುರುತಿಸಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಸಂಸದರನ್ನಾಗಿ ಆಯ್ಕೆ ಮಾಡಿದ್ದಾರೆ. 2.50 ಲಕ್ಷಕ್ಕೂ ಅಧಿಕ ಅಂತರ ಮತಗಳನ್ನು ನೀಡುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಮದ್ದೂರು ವಿಧಾನಸಭಾ ಕ್ಷೇತ್ರದಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ 57 ಸಾವಿರಕ್ಕೂ ಅಧಿಕ ಅಂತರದ ಮತಗಳು ಬಂದಿರುವುದು, ನಾನು ಸೋಲನ್ನು ಮರೆತು ಆನಂದ ಪಡುವ ಹಾಗೆ ಆಗಿದೆ. ಮದ್ದೂರು ವಿಧಾನಸಭಾ ಕ್ಷೇತ್ರದ ಮತದಾರರಿಗೆ ವಿಶೇಷವಾಗಿ ಅಭಿನಂದನೆ ಸಲ್ಲಿಸುತ್ತೇನೆ. ಅಭಿವೃದ್ಧಿ ವಿಚಾರದಲ್ಲಿ ಹೆಚ್ಚು ಪಾಂಡಿತ್ಯ ಇರುವ ಎಚ್.ಡಿ. ಕುಮಾರಸ್ವಾಮಿ ಅವರು ಮಂಡ್ಯ ಜಿಲ್ಲೆಯನ್ನು ಸಮಗ್ರ ಅಭಿವೃದ್ಧಿ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜೆಡಿಎಸ್ ತಾಲೂಕು ಕಾರ್ಯಾಧ್ಯಕ್ಷ ಮಾದನಾಯಕನಹಳ್ಳಿ ರಾಜಣ್ಣ, ಗ್ರಾ.ಪಂ ಅಧ್ಯಕ್ಷ ಸಿದ್ದರಾಜು, ಮುಖಂಡರಾದ ಬ್ಯಾಡರಹಳ್ಳಿ ರಾಮಕೃಷ್ಣ, ಆಲೂರು ಉದಯ್, ಮಾರಸಿಂಗನಹಳ್ಳಿ ಮಲ್ಲರಾಜು, ರಮೇಶ್, ಶಶಿಧರ, ಸತೀಶ್, ಅಪ್ಪಾಜಿ, ಉಮೇಶ್, ಮಲ್ಲರಾಜು ಸೇರಿದಂತೆ ಇತರರು ಇದ್ದರು.