

ಮೈಸೂರು: ಚನ್ನಪಟ್ಟಣ ವಿಧಾನಸಭೆ ಉಪಚುನಾವಣೆ ಪ್ರಚಾರದ ವೇಳೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ (HDK) ಅವರನ್ನು ಕರಿಯ ಎಂದು ಕರೆಯುವ ಮೂಲಕ ವಿವಾದದ ಕಿಡಿ ಹೊತ್ತಿಸಿದ್ದ ಸಚಿವ ಜಮೀರ್ ಅಹ್ಮದ್ (Zameer Ahmad) ಹೇಳಿಕೆಗೆ ಎಚ್ಡಿಕೆ ಪ್ರತಿಕ್ರಿಯಿಸಿದ್ದು, ಕರಿಯ, ಕುಳ್ಳ ಎಂದು ಮಾತಾಡಿಸಿಕೊಳ್ಳುವ ಸಂಸ್ಕೃತಿಯಿಂದ ಬಂದವ ನಾನಲ್ಲ. ಅವರ ಮಾತುಗಳು ಅವರ ಸಂಸ್ಕೃತಿಯನ್ನು ತೋರಿಸುತ್ತದೆ ಎಂದು ತಿರುಗೇಟು ನೀಡಿದ್ದಾರೆ.
ನಾಡಅಧಿದೇವತೆ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದ ಎಚ್.ಡಿ. ಕುಮಾರಸ್ವಾಮಿ (HDK), ಚಾಮುಂಡಿ ತಾಯಿ ಮುಂದೆ ನಿಂತು ಹೇಳುತ್ತಿದ್ದೇನೆ. ಬಸವರಾಜ ಹೊರಟ್ಟಿ ಅವತ್ತು ಒಮ್ಮೆ ನನ್ನನ್ನು ಕುಮಾರ ಎಂದಾಗ ಅವರನ್ನು ಹೊಡೆಯಲು ಹೋಗಿದ್ದ ಗಿರಾಕಿ ಇವರು. ಹೊರಟ್ಟಿ ಅವರನ್ನೇ ಕೇಳಿ. ಕರಿಯ, ಕುಳ್ಳ ಎಂದು ಕರೆಸಿಕೊಳ್ಳುವ ಸಂಸ್ಕೃತಿಯಿಂದ ಬಂದವ ನಾನಲ್ಲ. ಅವರ ಮಾತುಗಳು ಅವರ ಸಂಸ್ಕೃತಿಯನ್ನು ತೋರಿಸುತ್ತದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ (DCM DK Shivakumar) ಅವರು ಜಮೀರ್ ಮಾತುಗಳನ್ನು ಸಮರ್ಥಿಸಿಕೊಂಡಿದ್ದಾರೆ. ಇದು ನಾಗರಿಕ ಸರ್ಕಾರನಾ ಇಂಥ ಮಾತು ಹೇಳಿದವರ ಮೇಲೆ ಎಷ್ಟು ಕೇಸ್ ಹಾಕಿ ಜೈಲಿಗೆ ಹಾಕಿಲ್ಲ ಈ ಸರ್ಕಾರ ಈಗೇಕೆ ಸುಮ್ಮನೆ ಇದೆ. ಮುಖ್ಯಮಂತ್ರಿಗೆ ದೇವೇಗೌಡರು ಗರ್ವಭಂಗ ಮಾಡುತ್ತೇನೆ, ಸೊಕ್ಕು ಮುರಿಯುತ್ತೇನೆ ಎನ್ನುವುದು ಮಾನನಷ್ಟ ಹೇಳಿಕೆನಾ. ನಾನು ಯಾವತ್ತೂ ಜಮೀರ್ ಅವರನ್ನು ಕುಳ್ಳ ಎಂದು ಕರೆದಿಲ್ಲ. ನಮ್ಮ ಸ್ನೇಹ ಇದ್ದದ್ದು ರಾಜಕೀಯವಾಗಿ ಅಷ್ಟೇ. ಈಗ ದುಡ್ಡಿನ ಮದದಿಂದ ಈ ರೀತಿ ಮಾತಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಶಾಸಕರಿಗೆ ಬಿಜೆಪಿಯಿಂದ 50 ಕೋಟಿ ಆಫರ್ ಆರೋಪಕ್ಕೆ ಪ್ರತಿಕ್ರಿಯಿಸಿ, ಮುಖ್ಯಮಂತ್ರಿ ಹೇಳಿಕೆ ಬಫೂನ್ ರೀತಿ ಇದೆ. 50 ಜನರಿಗೆ ₹ 50 ಕೋಟಿ ಆಫರ್ ಮಾಡಿದ್ದಾರೆಂದು ನಿಖರವಾಗಿ ಹೇಳುತ್ತಿದ್ದಾರೆ. ಈ ಸರ್ಕಾರ ಪ್ರತಿಯೊಂದಕ್ಕು ಎಸ್ಐಟಿ ತನಿಖೆ ಮಾಡಿಸುತ್ತಿದೆ. ಇದನ್ನೂ ಎಸ್ಐಟಿಗೆ ಕೊಟ್ಟು ತನಿಖೆ ಮಾಡಿಸಲಿ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ (HDK) ಸಿಎಂ ಆರೋಪಕ್ಕೆ ತಿರುಗೇಟು ನೀಢಿದ್ದಾರೆ.