ದಟ್ಟ ದರಿದ್ರ ಕಾಂಗ್ರೆಸ್ ಸರ್ಕಾರ

HDK_BYV
Published on

ತುರುವೇಕೆರೆ: ರಾಜ್ಯದ ಕಾಂಗ್ರೆಸ್ ಸರ್ಕಾರ ದಟ್ಟ ದರಿದ್ರ ಸರ್ಕಾರವಾಗಿದೆ. ಬರಗಾಲ ಆವರಿಸಿ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ರೈತರ ಬಗ್ಗೆ ಗೌರವ ಇಲ್ಲ, ಸರಿಯಾದ ಬೆಳೆ ಪರಿಹಾರ ನೀಡುವಲ್ಲಿ ಈ ಸರ್ಕಾರ ವಿಫಲವಾಗಿದೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ವಾಗ್ಧಾಳಿ ನಡೆಸಿದರು.

ಎನ್‌ಡಿಎ ಮೈತ್ರಿ ಅಭ್ಯರ್ಥಿ ವಿ.ಸೋಮಣ್ಣ ಪರ ಶನಿವಾರ ರೋಡ್ ಶೋನಲ್ಲಿ ಚುನಾವಣಾ ಪ್ರಚಾರ ನೆಡೆಸಿ ನಂತರ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಜೊತೆ ಮೈತ್ರಿ ನಮ್ಮ ವೈಯಕ್ತಿಕ ಸ್ಥಾನಮಾನಗಳಿಗಾಗಿ ಅಲ್ಲ. ರೈತರಿಗೆ ಶಾಶ್ವತ ಪರಿಹಾರ ಹುಡುಕಲು ಮೈತ್ರಿ ಮಾಡಿಕೊಳ್ಳಲಾಗಿದೆ. ಸುಮಾರು 15 ವರ್ಷ ಜೆಡಿಎಸ್ ಪಕ್ಷ ಹೋರಾಟ ನೆಡೆಸಿದರು ಜೆಡಿಎಸ್ ಪಕ್ಷಕ್ಕೆ ಸ್ವಾತಂತ್ರವಾಗಿ ಆಡಳಿತವನ್ನು ನೆಡೆಸಲು ಸಂಪೂರ್ಣ ಬಹುಮತ ಸಿಗದೆ ಬೇರೆಯವರ ಜೊತೆ ಸೇರಿ ಸರ್ಕಾರ ಮಾಡಬೇಕಾದ ಪರಿಸ್ಥಿತಿ ಉಂಟಾಗಿದ್ದು ಇದನ್ನು ಅರಿತು ಮಾಜಿ ಪ್ರದಾನಿ ಹೆಚ್.ಡಿ.ದೇವೇಗೌಡರು ದೇಶದ ಅಭಿವೃದ್ದಿ ಬಗ್ಗೆ ಪ್ರದಾನಿ ಮೋದಿಜಿಯವರ ಆಡಳಿತ ಕಂಡು ರಾಜ್ಯದ ಅಬಿವೃದ್ದಿಗಾಗಿ ಮೈತ್ರಿ ಮಾಡಿಕೊಳ್ಳಲಾಗಿದೆ ಎಂದರು.

ಭಿಕ್ಷುಕರಿಗೆ ನೀಡುವಂತೆ ಹೆಕ್ಟೇರ್‌ಗೆ 2000 ರೈತರಿಗೆ ಪರಿಹಾರವನ್ನು ಸಿದ್ದರಾಮಯ್ಯ ಸರ್ಕಾರ ನೀಡಿದೆ. ಕೇವಲ ಗ್ಯಾರಂಟಿಯಲ್ಲಿ ಮುಳುಗಿರುವ ರಾಜ್ಯ ಸರ್ಕಾರ ಅದರ ಜಾಹಿರಾತು ನೀಡಲು 300 ಕೋಟಿ ಖರ್ಚು ಮಾಡಿದೆ. ಕೇಂದ್ರ ಸರ್ಕಾರ ರಾಜ್ಯಕ್ಕೆ ಹಣ ನೀಡಲಿಲ್ಲವೆಂದು ಅತ್ತ ಕಡೆ ರಾಜ್ಯದ ಸಿಎಂ, ಡಿಸಿಎಂ ಬೊಟ್ಟು ಮಾಡುತ್ತಾರೆ. ನಾನು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದ ರೈತರ 25ಸಾವಿರ ಕೋಟಿ ಸಾಲ ಮನ್ನಾ ಮಾಡಿದರು ನರೇಂದ್ರ ಮೋದಿ ಅವರನ್ನು ನಯಾಪೈಸೆ ಕೇಳಲಿಲ್ಲ . ರಾಜ್ಯದ ಜನರು ನೀಡುವ ತೆರಿಗೆ ಹಣದಲ್ಲಿ ಸಾಲ ಮನ್ನಾ ಮಾಡಿದ್ದೇನೆ. ಈ ರೈತ ವಿರೋಧಿ ಕಾಂಗ್ರೆಸ್ ಸರ್ಕಾರವನ್ನು ಪತನ ಗೊಳಿಸಬೇಕು ಎಂದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಾಗಲೆಲ್ಲ ಬರಗಾಲ ಬಂದಿದೆ. ದೇಶದಲ್ಲಿ ಕಡಿಮೆ ಅವಧಿಯಲ್ಲಿ ಜನಪ್ರಿಯತೆಯನ್ನು ಕಳೆದುಕೊಂಡ ಏಕೈಕ ಸರ್ಕಾರ ಇದು. ಈ ಸರ್ಕಾರ ಯಾವುದೇ ಯೋಜನೆ, ಅಭಿವೃದ್ಧಿ ಮಾಡಿಲ್ಲ. ಜನರು ನೆಮ್ಮದಿಯಾಗಿ ಜೀವನ ನೆಡೆಸಲು ಸಾಧ್ಯವಾಗದಂತಾಗಿದೆ. ರೈತರ ಹಾಲಿನ ಪ್ರೋತ್ಸಾಹ ಹಣ ಹಾಕಿಲ್ಲ. ಯಡಿಯೂರಪ್ಪ ರೈತರಿಗೆ ನೀಡುತ್ತಿದ್ದ 4 ಸಾವಿರ ನಿಲ್ಲಿಸಿದ್ದಾರೆ. ಪ್ರಧಾನ ಮಂತ್ರಿಗಳು ನೀಡುವ 5 ಕೆ.ಜಿ. ಅಕ್ಕಿಗೆ ರಾಜ್ಯದ ಮುಖ್ಯಮಂತ್ರಿ ಪೋಟೋ ಹಾಕಿಕೊಂಡು ಪ್ರಚಾರ ಪಡೆಯುತ್ತಿದ್ದಾರೆ. ಈ ಲೋಕಸಭಾ ಚುನಾವಣೆ ನಂತರ ಕಾಂಗ್ರೆಸ್ ಪಕ್ಷ ಗಂಟು ಮೂಟೆ ಕಟ್ಟಿಕೊಂಡು ಹೊರಡುವ ಕಾಲ ಬರುತ್ತಿದೆ ಎಂದರು.

ಎನ್‌ಡಿಎ ಅಭ್ಯರ್ಥಿ ವಿ.ಸೋಮಣ್ಣ, ಶಾಸಕ ಎಂ.ಟಿ.ಕೃಷ್ಣಪ್ಪ, ಕೆ.ಗೋಪಾಲಯ್ಯ, ಸಿ.ಬಿ.ಸುರೇಶ್‌ಬಾಬು, ರಾಜ್ಯ ಸಭಾ ಸದಸ್ಯ ಜಗ್ಗೇಶ್, ಮಾಜಿ ಶಾಸಕರಾದ ಮಸಾಲಜಯರಾಮ್, ಎಂ.ಡಿ.ಲಕ್ಷ್ಮೀನಾರಾಯಣ್, ಹೆಚ್.ಬಿ.ನಂಜೇಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಎಚ್.ಎಸ್. ರವಿಶಂಕರ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net