

ತುಮಕೂರು: ಕೊತ್ವಾಲ್ ರಾಮಚಂದ್ರ ಗರಡಿಯಿಂದ ಬಂದವರು ದೇಶ ಉಳಿಸುತ್ತಾರಾ? ರಾಜ್ಯ ಉಳಿಸುತ್ತಾರಾ? ಹೀಗೆಂದು ಡಿಕೆ ಬ್ರದರ್ಸ್ ವಿರುದ್ಧ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹರಿಹಾಯ್ದರು.
ಗುಬ್ಬಿ ಪಟ್ಟಣದಲ್ಲಿ ಎನ್‌ಡಿಎ ಅಭ್ಯರ್ಥಿ ವಿ.ಸೋಮಣ್ಣ ಪರ ಪ್ರಚಾರದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ.ಸುರೇಶ್ ಸಂತತಿ ಯಾವುದು? ಅವರ ಕುಟುಂಬದಲ್ಲಿ ಎಷ್ಟು ಜನ ಇದ್ದಾರೆ. ನಮ್ಮ ಕುಟುಂಬ ರಾಜ್ಯದ ಜನತೆಯ ಗೌರವ ಉಳಿಸಿದೆ. ಆ ಕುಟುಂಬ ಏನು ಮಾಡಿದೆ ಜನಕ್ಕೆ ಎಲ್ಲವೂ ಗೊತ್ತಿದೆ. ರಾಜ್ಯದ ಸಂಪತ್ತನ್ನ ಲೂಟಿ ಮಾಡಿ ವಿದೇಶಕ್ಕೆ ಕಳುಹಿಸುತ್ತಾರೆ. ಅಂತಹ ವ್ಯಕ್ತಿಯ ಮಾತಿಗೆ ನಾವು ಉತ್ತರ ಕೊಡಬೇಕಾ? ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.
ಡಿಕೆ ಬ್ರದರ್ಸ್ ಎಲ್ಲಿಂದ ಬಂದವರು ಎಂಬುದು ರಾಜ್ಯಕ್ಕೆ ಗೊತ್ತಿದೆ. ಹಣದ ದಾಹಕ್ಕೆ ಎಲ್ಲಿ ಏನು ಬೇಕಾದರೂ ಮಾಡುತ್ತಾರೆ. ಸೋಲಿನ ಭಯಕ್ಕೆ ಈ ರೀತಿ ಹೇಳಿಕೆಗಳನ್ನು ಕೊಡುತ್ತಿದ್ದಾರೆ ಎಂದು ತಿರುಗೇಟು ಕೊಟ್ಟರು.