ಚುನಾವಣೆಯೊಳಗೆ ಒಂದಾದರೂ ಸೈಟ್ ಕೊಡಲಿ! : ಕಾಂಗ್ರೆಸ್ ವಿರುದ್ಧ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ

hhhh
Published on

ಚನ್ನಪಟ್ಟಣ : ಯಾವುದೋ ಗೋಮಾಳದಲ್ಲಿ ಜೆಸಿಬಿ ತಂದು ಮಟ್ಟಮಾಡಿ ಸೈಟ್ ಕೊಡುತ್ತೇವೆ ಎನ್ನುವ ಕೈ ನಾಯಕರು, ಚುನಾವಣೆಯೊಳಗೆ ಒಂದೇ ಒಂದು ಸೈಟ್ ಕೊಡಲಿ ನೋಡೋಣ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸವಾಲು ಹಾಕಿದರು.

ನಗರದ ಕೊಲ್ಲಾಪುರದಮ್ಮ ದೇವಾಲಯದ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ನಗರ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ನಾನು ಅಧಿಕಾರದಲ್ಲಿದ್ದಾಗ ಕ್ಷೇತ್ರಕ್ಕೆ 1500 ಕೋಟಿ ರೂ. ಅನುದಾನ ತಂದಿದ್ದೇನೆ. ಒಂದು ಬೋರ್ಡ್ ಕೂಡ ಹಾಕಿಸಿಕೊಂಡಿರಲಿಲ್ಲ. ಆದರೆ, ಅವರು ಈಗ ಊರು ತುಂಬಾ ಫ್ಲೆಕ್ಸ್ ಹಾಕಿಸಿಕೊಂಡು ಓಡಾಡುತ್ತಿದ್ದಾರೆ. ನಾನು ರಾಜೀನಾಮೆ ಕೊಟ್ಟ ಬಳಿಕ ಕಾಂಗ್ರೆಸ್ ದಂಡು ಕ್ಷೇತ್ರಕ್ಕೆ ಬಂದು ನಿತ್ಯ ಸುಳ್ಳು ಹೇಳಿಕೊಂಡು ಓಡಾಡುತ್ತಿದೆ. 3 ತಿಂಗಳಲ್ಲಿ 20 ಬಾರಿ ಚನ್ನಪಟ್ಟಣಕ್ಕೆ ಬಂದಿದ್ದೀನಿ ಅಂತಾರಲ್ಲ, ಬಂದು ಏನು ಮಾಡಿದ್ದಾರೆ ಎಂದು ಡಿಸಿಎಂ ಡಿಕೆಶಿ ಹೆಸರು ಹೇಳದೆ ವಾಗ್ದಾಳಿ ನಡೆಸಿದರು.

ನಗರದ ಯುಜಿಡಿಗೆ 96ಕೋಟಿ ರೂ. ಅನುದಾನ ಕೊಟ್ಟಿದ್ದು ನಾನು. ಆದರೆ, ಅದು ನಮ್ಮದು ಎನ್ನುತ್ತಾರೆ. ತಾಲೂಕಿನ ಅಭಿವೃದ್ಧಿಗೆ ನನ್ನ ಕೊಡುಗೆ ಏನು ಎಂಬುದು ತಾಲೂಕಿನ ಜನತೆಗೆ ತಿಳಿದಿದೆ. ಚುನಾವಣೆಗೋಸ್ಕರ ನಿಮ್ಮ ತರಹದ ಹುಸಿ ಪ್ರೀತಿ ನನ್ನದಲ್ಲ, ನಾನು ಸತ್ತಾಗ ಪುಣ್ಯಾತ್ಮ ಇಷ್ಟು ಕೆಲಸ ಮಾಡಿಕೊಟ್ಟ ಎಂದು ಹನಿ ಕಣ್ಣೀರು ಹಾಕಿದರೆ ನನಗೆ ಅಷ್ಟೇ ಸಾಕು ಎಂದರು.

ಎಲ್ಲ ಕೆಲಸಗಳಿಗೂ ಅಧಿಕಾರಿಗಳು ಅಣ್ಣ-ತಮ್ಮನನ್ನು ಹೋಗಿ ನೋಡಿಬನ್ನಿ ಅಂತಾರಂತೆ. ಏಕೆ, ಕಮಿಷನ್‌ಗೆ ಅವರನ್ನು ಭೇಟಿ ಮಾಡಬೇಕಾ?, ತಾಲೂಕಿನ ಜನತೆ ಇಂತಹ ಹಗಲು ದರೋಡೆಕೋರರ ಬಗ್ಗೆ ಎಚ್ಚರದಿಂದ ಇರಬೇಕು ಎಂದ ಅವರು, ನಿಮ್ಮಲ್ಲಿ ಕೈಜೋಡಿಸಿ ಮನವಿ ಮಾಡುತ್ತೇನೆ, ಮುಂಬರುವ ಉಪಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಗೆಲ್ಲಿಸಿ ಎಂದರು.

ಜೆಡಿಎಸ್ ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮಾತನಾಡಿ, ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದು ಕುಮಾರಸ್ವಾಮಿ. ಆದರೆ, ಚುನಾವಣೆಗಾಗಿ ಮಾತ್ರ ಕಾಂಗ್ರೆಸ್ ಮಹಾನಾಯಕರು ಕ್ಷೇತ್ರಕ್ಕೆ ಬಂದು ದೊಡ್ಡ ಪ್ರಚಾರ ಮಾಡುತ್ತಿದ್ದಾರೆ. ಆದರೆ, ಕುಮಾರಣ್ಣ ಒಂದು ದಿನವೂ ಪ್ರಚಾರ ತೆಗೆದುಕೊಳ್ಳಲಿಲ್ಲ. ಚನ್ನಪಟ್ಟಣ ಉಪಚುನಾವಣೆಯನ್ನು ಇಡೀ ದೇಶ ನೋಡುತ್ತಿದೆ. ಈ ಹಿಂದೆ ನೀವೇ ಪ್ರಚಾರ ಮಾಡಿ ಕುಮಾರಸ್ವಾಮಿ ಅವರನ್ನು ಗೆಲ್ಲಿಸಿದ್ದೀರಿ. ಈಗಲೂ ಆ ಜವಾಬ್ದಾರಿ ನಿಮ್ಮ ಮೇಲಿದೆ ಎಂದರು.

ರಾಜ್ಯ ಸರ್ಕಾರ, ಸಚಿವರ ದಂಡು ಚನ್ನಪಟ್ಟಣಕ್ಕೆ ಬಂದು ದುಡ್ಡಿನ ಹೊಳೆ ಹರಿಸಲು ಮುಂದಾಗಿದ್ದಾರೆೆ. ಯಾರೇ ಅಭ್ಯರ್ಥಿ ಆದರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು. ಅಂತಿಮವಾಗಿ ಫಲಿತಾಂಶ ಎನ್‌ಡಿಎ ಅಭ್ಯರ್ಥಿ ಪರವಾಗಿರಬೇಕು ಎಂದು ಮನವಿ ಮಾಡಿದರು.

ದೇಶಕಂಡ ಶ್ರೇಷ್ಠ ಉದ್ಯಮಿ ರತನ್ ಟಾಟಾ ನಮ್ಮನ್ನೆಲ್ಲ ಅಗಲಿದ್ದಾರೆ. ದೇಶಕ್ಕೆ ಅವರ ಕೊಡುಗೆ ಅಪಾರ.

ಅವರ ಅಭಿವೃದ್ಧಿ ಕೆಲಸಗಳು ಯಾವಾಗಲೂ ಶಾಶ್ವತವಾಗಿರುತ್ತದೆ ಎಂದು ಸಭೆಯಲ್ಲಿ ರತನ್ ಟಾಟಾಗೆ ನಿಖಿಲ್ ಶ್ರದ್ಧಾಂಜಲಿ ಅರ್ಪಿಸಿದರು.

ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ಮಾತನಾಡಿ, ರಾಮನಗರ ಜಿಲ್ಲೆ ರಚನೆಯ ಜತೆಗೆ ಹೊಸರೂಪ ಕೊಟ್ಟ ಕೀರ್ತಿ ಕುಮಾರಸ್ವಾಮಿ ಅವರಿಗೆ ಸಲ್ಲುತ್ತದೆ. ಚುನಾವಣೆಗಾಗಿ ಕಾಂಗ್ರೆಸ್ ಕ್ಷೇತ್ರಕ್ಕೆ ಬಂದು ಇಲ್ಲಸಲ್ಲದ ಭರವಸೆ ನೀಡುತ್ತಿದೆೆ ಎಂದು ಆರೋಪಿಸಿದರು.

ಹೊಂಗನೂರು ಜಿಪಂ ವ್ಯಾಪ್ತಿಯ ಸಭೆ ತಗಚಗೆರೆ ಗ್ರಾಮದಲ್ಲಿ ನಡೆಯಿತು. ಮುಖಂಡರಾದ ಪ್ರಸನ್ನ ಪಿ. ಗೌಡ, ಹಾಪ್ ಕಾಮ್ಸ್ ದೇವರಾಜು, ಕುಕ್ಕುರುದೊಡ್ಡಿ ಜಯರಾಂ, ಗೋವಿಂದನಹಳ್ಳಿ ನಾಗರಾಜು, ನಾಗವಾರ ರಂಗಸ್ವಾಮಿ, ಗರಕಹಳ್ಳಿ ಕೃಷ್ಣೇಗೌಡ, ಮಂಗಳವಾರಪೇಟೆ ಶಶಿಕುಮಾರ್, ಬೈ ಶ್ರೀನಿವಾಸ್, ಎಲೆಕೇರಿ ನಂದೀಶ್, ನಿಸರ್ಗ ಲೋಕೇಶ್, ಮೊಳೆದೊಡ್ಡಿ ಬಿಳಿಯಪ್ಪ, ರೇಖಾ ಉಮಾಶಂಕರ್, ಆತ್ಮಾರಾಮ್, ಎಂ.ಎನ್. ಸತ್ಯನಾರಾಯಣ್ ಇದ್ದರು.

12 ವರ್ಷಗಳಿಂದ ತನಿಖೆ ಮಾಡಬೇಕಾ.?

ಕೋವಿಡ್ ಹಗರಣ ತನಿಖೆಗೆ ಎಸ್‌ಐಟಿ ರಚನೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಈ ಭಜನೆ ಒಂದೂವರೆ ವರ್ಷದಿಂದ ನಡೆಯುತ್ತಿದೆ. ಇವರು ವಿರೋಧ ಪಕ್ಷದಲ್ಲಿ ಕೆಲಸ ಮಾಡುವಾಗ ದೊಡ್ಡ ಮಟ್ಟದಲ್ಲಿ ಚರ್ಚೆ ಮಾಡಿದರು. ಇಲ್ಲಿಯವರೆಗೆ ಯಾವುದೇ ರೀತಿಯ ತನಿಖೆ ಮಾಡಿಲ್ಲ, ಈಗ ಏಕೆ ಕೊಟ್ಟಿದ್ದೀರಿ ಎಂದು ಪ್ರಶ್ನಿಸಿದರು.

ರಾಜ್ಯದ ತೆರಿಗೆ ಹಣ ಲೂಟಿ ಬಗ್ಗೆ ಮಾಹಿತಿ ಇದ್ದರೆ ಯಾವಾಗಲೋ ತನಿಖೆ ಆಗಬೇಕಿತ್ತು. ಈಗ ನಿಮ್ಮ ಪರಿಸ್ಥಿತಿಯ ರಕ್ಷಗೆ ಈ ರೀತಿಯ ಬೆಳವಣಿಗೆ ಪ್ರಾರಂಭ ಮಾಡಿದ್ದೀರಿ. ಇದು ಯಾವುದೇ ರೀತಿಯ ಫಲ ನೀಡಲ್ಲ ಎಂದರು.

ಕುಮಾರಸ್ವಾಮಿ ಮೇಲೆ ಎ್ಐಆರ್ ಇಲ್ವಾ ಅಂತಾರೆ. ಕುಮಾರಸ್ವಾಮಿ ಯಾಕೆ ರಾಜೀನಾಮೆ ಕೊಟ್ಟಿಲ್ಲ ಅಂತ ಕೇಳ್ತಾರೆ. ನನ್ನ ಮೇಲಿನ ಕೇಸ್‌ಗೆ ಬೇಲ್ ಪಡೆದಿದ್ದೇನೆ. ಕಾಂಗ್ರೆಸ್ ನಾಯಕರ ನಡವಳಿಕೆ, ಅಧಿಕಾರ ದುರ್ಬಳಕೆ ನೋಡಿ ವಕೀಲರ ಸಲಹೆ ಮೇರೆಗೆ ಬೇಲ್ ಪಡೆದಿದ್ದೇನೆ. ನಾನು ನನ್ನ ಮೇಲೆ ತನಿಖೆ ಮಾಡಬೇಡಿ ಅಂತ ಹೇಳಿದ್ದೀನಾ? ತನಿಖೆ ಮಾಡಲು ಎಷ್ಟು ವರ್ಷ ಬೇಕು? 12 ವರ್ಷಗಳಿಂದ ತನಿಖೆ ಮಾಡಬೇಕಾ ಎಂದು ಪ್ರಶ್ನಿಸಿದರು.

ನನಗೆ ಶಕ್ತಿ ಕೊಡಿ!

ನನ್ನನ್ನು ನಿಮ್ಮ ಕುಟುಂಬದ ಅಣ್ಣ, ತಮ್ಮ ಎಂದು ತಿಳಿದುಕೊಳ್ಳಿ. ದೆಹಲಿಮಟ್ಟದಲ್ಲಿ ನನ್ನನ್ನು ಗುರುತಿಸಿದ್ದಾರೆ ಎಂದರೆ ಅದು ನಿಮ್ಮಿಂದ. ಜನತಾದಳ ಮುಗಿದೇ ಹೊಯ್ತು ಎನ್ನುತ್ತಿದ್ದರು. ಅದಕ್ಕೆ, ಕಳೆದ ಲೋಕಸಭಾ ಚುನಾವಣೆಯಲ್ಲಿ ಜನತೆ ಉತ್ತರ ಕೊಟ್ಟಿದ್ದಾರೆ ಎಂದು ಕುಮಾರಸ್ವಾಮಿ ತಿಳಿಸಿದರು. ರಾಜ್ಯದಲ್ಲಿ ಬಡ ಕುಟುಂಬಗಳ ಅಭಿವೃದ್ಧಿಗೆ ನನ್ನದೇ ಆದ ಯೋಜನೆ ಇದೆ. ತಾಲೂಕಿನ ಜನತೆ ಕೈ ಸರ್ಕಾರವನ್ನು ನಂಬಬೇಡಿ. ಮುಂದಿನ ದಿನಗಳಲ್ಲಿ ತಾಲೂಕಿನ ಪ್ರತಿ ಮನೆ ಮನೆಗೂ ಬರಬೇಕೆಂದು ತೀರ್ಮಾನ ಮಾಡಿದ್ದೇನೆ. ಈ ಚುನಾವಣೆಯಲ್ಲಿ ನೀವು ಕೋಡೊ ಶಕ್ತಿಯಿಂದ ರಾಜ್ಯದಲ್ಲಿ ಹಾಗೂ ದೇಶದಲ್ಲಿ ನನಗೆ ಕೆಲಸ ಮಾಡಲು ಶಕ್ತಿ ಬರುತ್ತದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್‌ನವರನ್ನು ಮನೆಗೆ ಕಳುಹಿಸಿದರೆ ಪರ್ಮನೆಂಟ್ ಆಗಿ ಮನೆಗೆ ಹೋಗ್ತಾರೆ ಎಂದರು.

ಪೋಟೊ

ಚನ್ನಪಟ್ಟಣದ ಕೊಲ್ಲಾಪುರದಮ್ಮ ದೇವಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ ನಗರ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮಾತನಾಡಿದರು. ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ನಿಖಿಲ್ ಕುಮಾರಸ್ವಾಮಿ, ತಾಲೂಕು ಜೆಡಿಎಸ್ ಅಧ್ಯಕ್ಷ ಎಚ್.ಸಿ. ಜಯಮುತ್ತು, ನಗರಾಧ್ಯಕ್ಷ ಅಜಯ್, ಮುಖಂಡರು ಇದ್ದರು.

ಸಭೆಯಲ್ಲಿಒ ಭಾಗವಹಿಸಿದ್ದ ಕಾರ್ಯಕರ್ತರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net