

ಚನ್ನಪಟ್ಟಣ: ಕಾಂಗ್ರೆಸ್ ಸರ್ಕಾರ ಜನರ ರಕ್ತ ಹೀರುತ್ತಿದೆ. ಇಂತಹ ಭ್ರಷ್ಟ ಸರ್ಕಾರ ಕಿತ್ತೊಗೆಯಬೇಕು ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನ ರಾಂಪುರ ಗ್ರಾಮದಲ್ಲಿ ಎನ್‌ಡಿಎ ಅಭ್ಯರ್ಥಿ ನಿಖಿಲ್ ಪರ ಹಮ್ಮಿಕೊಂಡಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕನಕಪುರವನ್ನು ಲೂಟಿ ಮಾಡುವ ಕೆಲಸ ನಡೆಯುತ್ತಿದೆ. ಜನರ ರಕ್ತ ಹಿರಲಾಗುತ್ತಿದೆ. ಕನಕಪುರಕ್ಕೆ ಹೋಗಿ ನೋಡಿಕೊಂಡು ಬನ್ನಿ. ಬೇರೆಯವರ ಜಮೀನನ್ನು ಹೇಗೆ ಲೂಟಿ ಮಾಡಿದ್ದಾರೆ ಅಂತ ನೋಡಿಕೊಂಡು ಬನ್ನಿ ಎಂದು ಪರೋಕ್ಷವಾಗಿ ಡಿ.ಕೆ.ಸಹೋದರರ ವಿರುದ್ಧ ಆರೋಪ ಮಾಡಿದ ದೇವೇಗೌಡ, ನಾನು ಇನ್ನೊಂದು ಚುನಾವಣೆಗೆ ಬರುತ್ತೇನೆ. ಇಂತಹ ಕೆಟ್ಟ ಸರ್ಕಾರವನ್ನು ಕಿತ್ತು ಎಸೆಯಲು ಹೋರಾಟ ನಡೆಸುತ್ತೇನೆ ಎಂದು ಗುಡುಗಿದರು.
ನಾನು ಒರ್ವ ಸಾಮಾನ್ಯ ರೈತನ ಮಗ. ರೈತರ ಕಷ್ಟ ಏನು ಎಂಬುದು ನನಗೆ ಗೊತ್ತು. ಈ ಕಾಂಗ್ರೆಸ್‌ನವರು
ನಾನು ನನ್ನ ಮೊಮ್ಮಗನ ಗೆಲ್ಲಿಸಲು ಬಂದಿದ್ದೇನೆ ಎನ್ನುತ್ತಾರೆ. ನನ್ನ ಮೊಮ್ಮಗನ ಚಿಂತೆಗಿಂತ ಈ ಸರ್ಕಾರದ ವಿರುದ್ಧ ಹೋರಾಟಕ್ಕೆ ನಾನು ಬಂದಿದ್ದೇನೆ. ನಿಮ್ಮ ಆಶೀರ್ವಾದದ ಬಲದಿಂದ ಇನ್ನೂ ನಾಲ್ಕಾರು ವರ್ಷ ಬದುಕಿರುತ್ತೇನೆ. ಹೋರಾಟ ಮಾಡೇ ಮಾಡುತ್ತೇನೆ. ಇಂತಹ ಸರ್ಕಾರವನ್ನು ತೆಗೆಯುವ ತನಕ ಈ ರಾಜ್ಯಕ್ಕೆ ನೆಮ್ಮದಿ ಇಲ್ಲ. ಬಡವರು ಬದುಕಲ್ಲ, ರೈತರಿಗೆ ನೆಮ್ಮದಿ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೈ ಚಾಚಲು ಬಂದಿರುವೆ! : ನಾನು ಚನ್ನಪಟ್ಟಣ ಕ್ಷೇತ್ರಕ್ಕೆ ಏನು ಮಾಡಿದೆ ಅಂತ ಹೇಳಲ್ಲ. ಆದರೆ, ನನ್ನ ಕೆಲಸದ ಪಟ್ಟಿ ಕ್ಷೇತ್ರದ ಜನತೆಗೆ ಗೊತ್ತಿದೆ. ನಿಖಿಲ್ ಕುಮಾರಸ್ವಾಮಿ ಪರವಾಗಿ ಕೈಚಾಚಲು ನಿಮ್ಮ ಬಳಿಗೆ ಬಂದಿದ್ದೇನೆ. ಇಗ್ಗಲೂರು ಡ್ಯಾಂ ನಾನು ಕಟ್ಟಿದೆ. ಆದರೆ, ಅವರಾರೋ ಭಗಿರಥ, ನಾನು ನೀರು ತಂದೆ ಎನ್ನುತ್ತಾರೆ. ಇದು ಈ ರೈತನ ಮಗನ ಕೆಲಸ. ನಿಮ್ಮ ಮಣ್ಣಿನ ಮಗ ಮಾಡಿದ ಕೆಲಸ. ಕ್ಷೇತ್ರ ಹಾಗೂ ರಾಜ್ಯದ ಭವಿಷ್ಯಕ್ಕಾಗಿ ನಿಖಿಲ್ ಗೆಲ್ಲಿಸುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದು ಎಚ್.ಡಿ. ದೇವೇಗೌಡ ಹೇಳಿದರು.
ಮೂರನೇ ದಿನವೂ ಪ್ರಚಾರ! : ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ, ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಪರ ಮಾಜಿ ಪ್ರಧಾನಿ ಮೂರನೇ ದಿನವೂ ಬಿರುಸಿನ ಪ್ರಚಾರ ನಡೆಸಿದರು. ತಾಲೂಕಿನ ರಾಂಪುರ, ಮುನಿಯಪ್ಪನದೊಡ್ಡಿ, ಮೋಳೆದೊಡ್ಡಿ ಹಾಗೂ ಹೊಡಿಕೆ ಹೊಸಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಹಾಗೂ ಡಿಕೆಶಿ ಸಹೋದರರ ವಿರುದ್ಧ ಟೀಕಾ ಪ್ರಹಾರ ನಡೆಸಿದರು. ಎಲ್ಲೆಡೆ ದೇವೇಗೌಡರಿಗೆ ಅಭೂತಪೂರ್ವ ಸ್ವಾಗತ ದೊರಕಿತು.
ಹೈನುಗಾರಿಕೆಗೆ ಶಕ್ತಿ ಕೊಟ್ಟವನು ನಾನು. ನಾನು ಈ ಹಿಂದೆ ಅಮುಲ್ ಸಂಸ್ಥೆ ಕಾರ್ಯಕ್ರಮದಲ್ಲಿ ಕುರಿಯನ್ ಅವರಿಗೆ ರಾಜ್ಯದಲ್ಲಿ ಒಂದು ಮಿಲ್ಕ್ ಫೆಡರೇಷನ್ ಸ್ಥಾಪನೆ ಮಾಡಿ ಅಂತ ಕೇಳಿದೆ. ಆದರೆ, ಅವರು ಆಗಲ್ಲ ಎಂದರು. ದೇಶಕ್ಕೊಂದೇ ತಾಜ್ ಮಹಲ್ ಇದೆ. ಹಾಗೆಯೇ ಒಂದು ಸಂಸ್ಥೆ ಮಾತ್ರ ಕಟ್ಟಲು ಸಾಧ್ಯ ಎಂದಿದ್ದರು. ಆದರೆ, ಅದಕ್ಕೆ ಸವಾಲೆಂಬಂತೆ ರಾಜ್ಯದಲ್ಲಿ ಮಿಲ್ಕ್ ಫೆಡರೇಷನ್ ಆಗಿದೆ. ಇದರ ಹಿಂದೆ ನನ್ನ ಪರಿಶ್ರಮ ಎಷ್ಟಿದೆ ಎಂಬುದು ನನಗೆ ಗೊತ್ತು. ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ