

ಚನ್ನಪಟ್ಟಣ: ಕ್ಷೇತ್ರದಲ್ಲಿ ಮೈತ್ರಿ ಪಕ್ಷದಿಂದ ಯಾರು ಕಣಕ್ಕೆ ಇಳಿಯಬೇಕು ಎಂಬುದನ್ನು ದೆಹಲಿಯ ಬಿಜೆಪಿ ನಾಯಕರು ಮತ್ತು ನಾವು ಕೂತು ಮಾತನಾಡುತ್ತೇವೆ. ಎನ್‌ಡಿಎ ಅಭ್ಯರ್ಥಿ ಯಾರಾಗಬೇಕು ಎಂಬುದು ಆ ಸಭೆಯಲ್ಲಿ ತೀರ್ಮಾನವಾಗುತ್ತದೆ ಎಂದು ಕೇಂದ್ರ ಸಚಿವ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದರು.
ನಗರದ ಕೊಲ್ಲಾಪುರದಮ್ಮ ದೇವಾಲಯದ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕ್ಷೇತ್ರದಲ್ಲಿ ನಮ್ಮ ಪಕ್ಷದಿಂದ ಪ್ರಾಥಮಿಕ ಹಂತವಾಗಿ ಕಾರ್ಯಕರ್ತರ ಸಭೆ ಮಾಡುತ್ತಿದ್ದೇವೆ. ಬಹುಶಃ ಇನ್ನೊಂದು ವಾರದಲ್ಲಿ ಚುನಾವಣೆ ದಿನಾಂಕ ಘೋಷಣೆ ಆಗುತ್ತದೆ. ಆ ಹಿನ್ನೆಲೆಯಲ್ಲಿ ಕಾರ್ಯಕರ್ತರು, ಮತದಾರರ ನಾಡಿಮಿಡಿತ ಅರ್ಥ ಮಾಡಿಕೊಳ್ಳಬೇಕು. ಅದಕ್ಕಾಗಿ ನಮ್ಮ ಪಕ್ಷದ ಕಾರ್ಯಕರ್ತರ ಅಭಿಪ್ರಾಯ ಕ್ರೋಡೀಕರಿಸುತ್ತಿದ್ದೇವೆ ಎಂದರು.
ಇದು ಜನತಾದಳದ ಭದ್ರಕೋಟೆ!
ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರು, ಮುಖಂಡರ ಸಭೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ನಾನು ಅದರ ಬಗ್ಗೆ ಚರ್ಚೆ ಮಾಡಲು ಹೋಗಲ್ಲ. ನಾವು ಕಳೆದ ಎರಡು ಚುನಾವಣೆಯನ್ನು ಈ ಕ್ಷೇತ್ರದಲ್ಲಿ ಗೆದ್ದಿದ್ದೀವಿ. ಈ ಕ್ಷೇತ್ರದ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ನಾನು ಯಾವುದೇ ನಿರ್ಣಯ ಮಾಡಲ್ಲ. ಮೊದಲಿನಿಂದಲೂ ಇದು ಜನತಾದಳದ ಭದ್ರಕೋಟೆ. ನಮ್ಮಲ್ಲಿನ ಕೆಲವೊಂದಷ್ಟು ತಿಕ್ಕಾಟಕ್ಕೆ ಸ್ವಲ್ಪ ವೀಕ್ ಆಗಿದೆ. ಈಗ ಕಾರ್ಯಕರ್ತರು ಬಲಾಢ್ಯವಾಗಿ ಸಂಘಟನೆ ಮಾಡುತ್ತಿದ್ದಾರೆ. ಆದ್ದರಿಂದ ಅವರ ವಿಶ್ವಾಸ ಇಲ್ಲದೇ ಏನೂ ತೀರ್ಮಾನ ಮಾಡಲ್ಲ. ಅವರ ಪಕ್ಷದಲ್ಲಿ ಅವರು ಏನೇ ಚರ್ಚೆ ಮಾಡಿಕೊಂಡರೂ ಅದು ಅವರ ಸಂಘಟನೆ ವಿಚಾರ. ಅದನ್ನು ತಪ್ಪು ಎಂದು ನಾವು ಹೇಳಲ್ಲ ಎಂದರು.
ಯಾವುದೇ ಒಪ್ಪಂದ ಆಗಿರಲಿಲ್ಲ!
ಕಳೆದ ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದ ಉಪಚುನಾವಣೆ ಸಂಬಂಧ ಯಾವುದೇ ರೀತಿಯ ಒಪ್ಪಂದ ಆಗಿರಲಿಲ್ಲ. ಈ ಹಿಂದೆ ಲೋಕಸಭಾ ಚುನಾವಣೆಗೆ ನಾನು ಮೊದಲು ಸೂಚಿಸಿದ್ದೇ ಯೋಗೇಶ್ವರ್ ಹೆಸರು. ಗ್ರಾಮಾಂತರದಿಂದ ಅವರನ್ನೇ ಸ್ಪರ್ಧೆ ಮಾಡುವಂತೆ ಹೇಳಿದ್ದೆ. ಆದರೆ, ದೆಹಲಿಯಲ್ಲಿ ಗೃಹ ಮಂತ್ರಿಗಳು ಡಾ. ಮಂಜುನಾಥ್ ಅವರನ್ನು ಒಪ್ಪಿಸುವಂತೆ ಹೇಳಿದ್ದರು. ಅಮಿತ್ ಷಾ ಅವರ ಮಾತಿಗೆ ನಾನು ತಲೆ ಬಾಗಿದೆ. ಆದರೆ, ಅದಕ್ಕೂ ಮೊದಲು ನಾನು ಪ್ರಾಥಮಿಕವಾಗಿ ಯೋಗೇಶ್ವರ್‌ಗೆ ತಿಳಿಸಿದ್ದೆ. ಎರಡು ಪಕ್ಷಗಳು ಒಟ್ಟಾಗಿದ್ದರೆ ಗೆಲುವು ಸುಲಭ ಎಂಬುದನ್ನು ಮನವರಿಕೆ ಮಾಡಿಕೊಟ್ಟಿದ್ದೆೆ. ಆದರೆ, ಈ ಉಪಚುನಾವಣೆ ಬಗ್ಗೆ ಯಾವುದೇ ರೀತಿಯ ಚರ್ಚೆ ಅಥವಾ ಒಪ್ಪಂದ ಆಗಿರಲಿಲ್ಲ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು.
ಮಾತನಾಡಿಲ್ಲ
ಮೈತ್ರಿಗೆ ಮೂಲ ನಾನೇ ಎಂಬ ಸಿಪಿವೈ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಸಿ.ಪಿ. ಯೋಗೇಶ್ವರ್ ಯಾರ ಜತೆ ಮೈತ್ರಿಗೆ ಮೂಲ ನಾನೇ ಅಂತಾ ಹೇಳಿದ್ದಾರೋ ಗೊತ್ತಿಲ್ಲ. ಆದರೆ, ಸಿಪಿವೈ ಉಪಚುನಾವಣೆ ಸಂಬಂಧ ಒಂದು ಸಾರಿ ನನ್ನನ್ನು ಭೇಟಿ ಮಾಡಿದ್ದರು. ಕ್ಷೇತ್ರಕ್ಕೆ ಹೋಗಿ ನಮ್ಮ ಪಕ್ಷದ ಕಾರ್ಯಕರ್ತರನ್ನು ಭೇಟಿ ಮಾಡಿ ವಿಶ್ವಾಸಕ್ಕೆ ತೆಗೆದುಕೊಳ್ಳಿ ಅಂಥ ನಾನೇ ಹೇಳಿದ್ದೆ. ಅವರು ಯಾವ ರೀತಿ ನಡೆದುಕೊಂಡಿದ್ದಾರೆ ನನಗೆ ಗೊತ್ತಿಲ್ಲ. ಮತ್ತೆ ಅವರು ನನ್ನ ಹತ್ತಿರ ಮಾತನಾಡಿಲ್ಲ ಎಂದರು.
ಕ್ಷೇತ್ರದಲ್ಲಿ ನಿಖಿಲ್ ಸ್ಪರ್ಧೆ ಬಗ್ಗೆ ಮಾತನಾಡಿದ ಅವರು, ನಿಖಿಲ್ ಅವರ ಸ್ಪರ್ಧೆ ಬಗ್ಗೆ ಈವರೆಗೂ ನಾನು ತೀರ್ಮಾನ ಮಾಡಿಲ್ಲ. ಎನ್‌ಡಿಎ ಅಭ್ಯರ್ಥಿ ಗೆಲ್ಲಬೇಕು ಅನ್ನೋದು ಅಷ್ಟೇ ನನ್ನ ಆಲೋಚನೆ. ಆ ಹಿನ್ನೆಲೆಯಲ್ಲಿ ಸೂಕ್ತ ಅಭ್ಯರ್ಥಿ ಯಾರು ಅನ್ನೋದನ್ನು ಬಿಜೆಪಿ, ಜೆಡಿಎಸ್ ನಾಯಕರು, ಕಾರ್ಯಕರ್ತರ ಅಭಿಪ್ರಾಯ ಪಡೆದು ತೀರ್ಮಾನಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.