ಬಿಜೆಪಿಯಲ್ಲಿ ಇರುವವರು ಕಾಳಸಂತೆಕೋರರು, ಬೆಟ್ಟಿಂಗ್​ ದಂಧೆಕೋರರು: ಎಚ್​.ಡಿ.ಕುಮಾರಸ್ವಾಮಿ ಆರೋಪ

HD Kumaraswamy
Published on

ಶಿರಸಿ: ರಾಜ್ಯ ಬಿಜೆಪಿಯಲ್ಲಿ ಕಾಳಸಂತೆಕೋರರು ಹಾಗೂ ಬೆಟ್ಟಿಂಗ್​ ದಂಧೆ ನಡೆಸುವವರು ಹೆಚ್ಚಾಗಿ ಇದ್ಧಾರೆ. ಅಂಥವರಿಗೆ ಹೆಚ್ಚಿನ ಟಿಕೆಟ್​ ನೀಡಲಾಗಿದೆ ಎಂದು ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.

ಬುಧವಾರ ಶಿರಸಿಯಲ್ಲಿ ಪಂಚರತ್ನ ರಥಯಾತ್ರಯನ್ನು ಉದ್ದೇಶಿಸಿ ಮಾತನಾಡಿದ ಎಚ್​.ಡಿ.ಕೆ ಬಿಜೆಪಿ ನಾಯಕರು ನೀಡುವ ಹೇಳಿಕೆಗೂ ಮಾಡುವ ಕೆಲಸಕ್ಕೂ ಅಜಗಜಾಂತರ ವ್ಯತ್ಯಾಸವಿದೆ ಎಂದು ಹೇಳಿದ್ದಾರೆ.

ಇರುವವರೆಲ್ಲ ಕಾಳಸಂತೆಕೋರರು

ಇನ್ನು ಮಂಗಳವಾರ ಬಿಡುಗಡೆಯಾಗಿರುವ ಬಿಜೆಪಿ ಪಟ್ಟಿ ಕುರಿತು ಪ್ರತಿಕ್ರಿಯಿಸಿ ಆ ಪಕ್ಷದಲ್ಲಿ ಇರುವವರು ರೌಡಿ ಶೀಟರ್​, ಕಾಳ ಸಂತೆಕೋರರು, ಬೆಟ್ಟಿಂಗ್​​​ ದಂಧೆಕೋರರು ಇಂತಹವರಿಗೆ ಟಿಕೆಟ್​ ನೀಡಿದ್ದಾರೆ ಎಂದು ಕಿಡಿಕಾರಿದ್ದಾರೆ.

ಮಾತೃಪಕ್ಷಕ್ಕೆ ಮರಳುತ್ತಿದ್ದಾರೆ

2004ರ ರಾಜ್ಯ ವಿಧಾನಸಭೆ ಚುನಾವಣೆ ವೇಳೆ ಅನೇಕರು ಜೆಡಿಎಸ್​ ತೊರೆದು ಕಾಂಗ್ರೆಸ್​-ಬಿಜೆಪಿ ಸೇರಿದ್ದರು. ಆದರೆ, ಅಲ್ಲಿ ಈಗ ಟಿಕೆಟ್​ ಸಿಗದ ಕಾರಣ ಮಾತೃಪಕ್ಷಕ್ಕೆ ವಾಪಸ್ ಆಗುತ್ತಿದ್ದಾರೆ. ಪಕ್ಷ ತೊರೆದವರಿಗೆ ಇನ್ನೆರಡು ವರ್ಷಗಳಲ್ಲಿ ಬುದ್ದಿ ಬರಲಿದೆ. ಇನ್ನೆರಡು ದಿನಗಳಲ್ಲಿ ಪಕ್ಷಕ್ಕೆ ವಾಪಸ್ಸಾಗುವವರ ಹೆಸರು ಅಂತಿಮ ಆಗಲಿದೆ ಎಂದು ತಿಳಿಸಿದ್ದಾರೆ.

ಪ್ರಾದೇಶಿಕ ಪಕ್ಷಕ್ಕೆ ಅವಕಾಶ ಕೊಡಿ

ಕಳೆದ ಬಾರಿ ಸಮ್ಮಿಶ್ರ ಸರ್ಕಾರ ರಚನೆಗೆ ಆದ್ಯತೆ ನೀಡಿದ್ದೀರಿ. ಆದರೆ, ಈ ಬಾರಿ ಹಾಗಾಗಲು ಬಿಡಬೇಡಿ ಎರಡು ರಾಷ್ಟ್ರೀಯ ಪಕ್ಷಗಳ ಆಳ್ವಿಕೆಯನ್ನು ನೀವು ನೋಡಿದ್ದು ಪ್ರಾದೇಶಿಕ ಪಕ್ಷವಾದ ಜೆಡಿಎಸ್​ಗೆ ಒಮ್ಮೆ ಅಧಿಕಾರ ಕೊಡಿ ಎಂದು ವಿನಂತಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್​ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net