ರಾಮನಗರ ಜಿಲ್ಲೆಯಲ್ಲಿ ಮಾಜಿ, ಹಾಲಿ ಪ್ರಧಾನಿಗಳ ಅಬ್ಬರ ಅಭ್ಯರ್ಥಿಗಳ ಪರ ಮೋದಿ, ದೇವೇಗೌಡ ಪ್ರಚಾರ

Modi devegowda
Published on

ಗಂಗಾಧರ್​ ಬೈರಾಪಟ್ಟಣ ರಾಮನಗರ

ಜಿಲ್ಲೆಯಲ್ಲಿ ಇಂದಿನಿಂದ ಹಾಲಿ ಮತ್ತು ಮಾಜಿ ಪ್ರಧಾನಿಗಳು ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಕೈಗೊಳ್ಳುವ ಮೂಲಕ ನಾನಾ ನೀನಾ ಎನ್ನುವ ಅಖಾಡಕ್ಕೆ ಇಬ್ಬರೂ ಧುಮುಕಲಿದ್ದಾರೆ.

ಇಳಿ ವಯಸ್ಸಿನಲ್ಲಿಯೂ ಬತ್ತದ ಉತ್ಸಾಹದೊಂದಿಗೆ ಚುನಾವಣೆ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡ ಅವರು ಶನಿವಾರ (ಏ.29) ಮಾಗಡಿಯಲ್ಲಿ ಪ್ರಚಾರ ಕೈಗೊಂಡರೆ, ಏ.30ರಂದು ಚನ್ನಪಟ್ಟಣದ ಇಗ್ಗಲೂರು ಭಾಗದಲ್ಲಿ ಸಭೆ ನಡೆಸುವ ಮೂಲಕ ತಮ್ಮ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ.

ಅತ್ತ ದಣಿವರಿಯದ ನಾಯಕ ಎಂದೇ ಖ್ಯಾತಿ ಪಡೆದಿರುವ ಪ್ರಧಾನಿ ನರೇಂದ್ರ ಮೋದಿ ಅವರು ಏ.30 (ಭಾನುವಾರ) ಚನ್ನಪಟ್ಟಣಕ್ಕೆ ಬರುವ ಮೂಲಕ ಹಳೇ ಮೈಸೂರು ಭಾಗದಲ್ಲಿ ಸಂಚಲನ ಮೂಡಿಸಲಿದ್ದಾರೆ.

ರಾಮನಗರಕ್ಕೆ ಗೌಡರೇ ಶಕ್ತಿ: ಜಿಲ್ಲೆಯಲ್ಲಿ ಎಚ್​.ಡಿ.ಕುಮಾರಸ್ವಾಮಿ ಅವರು ಎಷ್ಟೇ ಪ್ರಬಲ ನಾಯಕ ಎನಿಸಿಕೊಂಡಿದ್ದರೂ, ದೇವೇಗೌಡರೇ ಈಗಲೂ ಸರ್ವಶಕ್ತ ನಾಯಕ. ಜೆಡಿಎಸ್​ ಪಾಲಿಗೆ ಅವರೇ ಸ್ಟಾರ್​ ಪ್ರಚಾರಕ. ಮಾಗಡಿಯಲ್ಲಿ ಕಳೆದ ಬಾರಿಗೆ ಹೋಲಿಕೆ ಮಾಡಿದರೆ ಈ ಬಾರಿ ಜೆಡಿಎಸ್​ಗೆ ಕೊಂಚ ಹಿನ್ನಡೆಯಾಗಿದೆ ಎನ್ನುವುದನ್ನು ಅರಿತಿರುವ ಅವರು ಖುದ್ದು ಪ್ರಚಾರಕ್ಕೆ ಬರುವ ಮೂಲಕ ರಾಜಕೀಯ ಎದುರಾಳಿಗಳಿಗೆ ಎದಿರೇಟು ನೀಡಿದ್ದಾರೆ. ದೇವೇಗೌಡರು ರಾಮನಗರಕ್ಕೆ ಬರುವುದರಿಂದ ಜಿಲ್ಲೆಯ ಕಾರ್ಯಕರ್ತರಿಗೆ ಬಲ ಬಂದಂತೆ ಆಗಲಿದ್ದು, ರಾಜಕೀಯ ಚಿತ್ರಣವಂತೂ ಒಂದಿಷ್ಟು ಬದಲಾವಣೆ ಆಗುವುದು ನಿಶ್ಚಿತ.

30ಕ್ಕೆ ಪ್ರಧಾನಿ

ಜಿಲ್ಲೆಗೆ ದೇವೇಗೌಡರು ಬಂದು ಹೋದ ಮರುದಿನವೇ ನರೇಂದ್ರ ಮೋದಿ ಅವರು ಚನ್ನಪಟ್ಟಣಕ್ಕೆ ಬರುವ ಮೂಲಕ ಶಕ್ತಿಯೇ ಇಲ್ಲದ ಬಿಜೆಪಿಗೆ ಹೊಸ ಚೈತನ್ಯ ತುಂಬಲಿದ್ದಾರೆ. ಹಳೇ ಮೈಸೂರು ಭಾಗದ ಮಂಡ್ಯ, ರಾಮನಗರ, ಮೈಸೂರು ಭಾಗದ ಸಾವಿರಾರು ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು, ಇದಕ್ಕಾಗಿ ಬಿಜೆಪಿಯಿಂದ ಭರ್ಜರಿ ಸಿದ್ಧತೆ ನಡೆಯುತ್ತಿದೆ.

ನಾನಾ ನೀನಾ?

ಒಬ್ಬರು ಮಾಜಿ ಪ್ರಧಾನಿ ಮತ್ತೊಬ್ಬರು ಹಾಲಿ ಪ್ರಧಾನಿ ಇಬ್ಬರೂ ಜಿಲ್ಲೆಗೆ ಮತ ಬೇಟೆಗೆ ಆಗಮಿಸುತ್ತಿರುವುದು ರಾಜಕೀಯ ಕಣ ಬದಲಾದಂತೆ ಆಗಿದೆ. ನರೇಂದ್ರ ಮೋದಿ ಅವರು ಪ್ರಚಾರ ಮಾಡಿದ ಬಹುತೇಕ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ ಎನ್ನುವುದು ಬಿಜೆಪಿ ಅಭಿಪ್ರಾಯ. ಇದೀಗ ಜೆಡಿಎಸ್​ ಭದ್ರಕೋಟೆ ರಾಮನಗರ ಜಿಲ್ಲೆಯಲ್ಲಿ ಪ್ರಧಾನಿ ಮೋದಿ ಅವರ ಪ್ರಚಾರದಿಂದ ಬಿಜೆಪಿಗೆ ಎಷ್ಟು ಲಾಭವಾಗಲಿದೆ ಎನ್ನುವ ಪ್ರಶ್ನೆಯೂ ಮೂಡಿದೆ. ಮತ್ತೊಂದೆಡೆ ದೇವೇಗೌಡರು ಜಿಲ್ಲೆಗೆ  ಪ್ರಚಾರಕ್ಕೆ ಬರುತ್ತಿರುವುದೂ ಜಿಲ್ಲೆಯ ಜೆಡಿಎಸ್​ಗೆ ನವ ಚೈತನ್ಯ ನೀಡುವುದರಿಂದ ಹಾಲಿ ಮತ್ತು ಮಾಜಿ ಪ್ರಧಾನಿಗಳ ಪ್ರಚಾರದ ಫಲಿತಾಂಶ ನಾನಾ ನೀನಾ ಎನ್ನುವ ಕುತೂಹಲ ಹುಟ್ಟುಹಾಕಿದೆ.

ಅಮಿತ್​ ಷಾ

ರಾಜಕೀಯ ಚಾಣಾಕ್ಷ ಎಂದೇ ಕರೆಸಿಕೊಂಡಿರುವ ಕೇಂದ್ರ ಗೃಹ ಸಚಿವ ಅಮಿತ್​ ಷಾ ಅವರು ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಮೇ 1ರಂದು ಮಾಗಡಿಗೆ ಬಿಜೆಪಿ ಅಭ್ಯರ್ಥಿ ಪ್ರಸಾದ್​ಗೌಡ ಪರವಾಗಿ ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದಾರೆ. ಇವರಲ್ಲದೆ, ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸಹ ಜಿಲ್ಲೆಗೆ ಬರುತ್ತಿರುವುದು ಬಿಜೆಪಿಗೆ ಟಾನಿಕ್​ ನೀಡಿದಂತೆ ಆಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net