

ಮೈಸೂರು: ಜೆಡಿಎಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಶಾಶ್ವತ ಅಲ್ಲ. ಪ್ರತಿದಿನ ಪಟ್ಟಿ ಬದಲಾವಣೆ ಆಗುತ್ತದೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಹೇಳಿದರು. ಪತ್ನಿ ಜತೆ ಗುರುವಾರ ನಂಜನಗೂಡು ನಂಜುಂಡೇಶ್ವರನ ದರ್ಶನಕ್ಕೆ
ತೆರಳುತ್ತಿದ್ದ ದೇವೇಗೌಡರು ಸುದ್ದಿಗಾರರೊಂದಿಗೆ ಮಾತನಾಡಿ, ಜೆಡಿಎಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಶಾಶ್ವತ ಅಲ್ಲ. ಪ್ರತಿದಿನ ಸಮೀಕ್ಷೆಯೂ ನಡೆಯುತ್ತಿದೆ. ಅದನ್ನು ಆಧರಿಸಿ ನಿರ್ಧಾರ ಆಗುತ್ತದೆ ಎಂದರು. ಮುಂದೆ ಯಾರು ಮುಖ್ಯಮಂತ್ರಿ ಆಗಬೇಕು ಎಂಬುದನ್ನು ಜನರೇ ತೀರ್ಮಾನ ಮಾಡುತ್ತಾರೆ ಎಂದರು.
ಎಚ್.ಡಿ. ಕುಮಾರಸ್ವಾಮಿ ಸೇರಿದಂತೆ ನಮ್ಮ ಪಕ್ಷದ ನಾಯಕರೆಲ್ಲರೂ "ಪಂಚರತ್ನ'' ಯಾತ್ರೆ ಮಾಡುತ್ತಿದ್ದಾರೆ. ಯಾತ್ರೆಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಯಾತ್ರೆ ಸಾಗುತ್ತಿರುವ ಪ್ರತಿ ಹಳ್ಳಿಗಳಲ್ಲೂ ನಮ್ಮ ಪಕ್ಷದ ಶಾಸಕರು, ಮುಖಂಡರು, ಮಾಜಿ ಶಾಸಕರು ಒಂದೊಂದು ಜವಾಬ್ದಾರಿ ವಹಿಸಿಕೊಂಡು ಕೆಲಸ ಮಾಡುತ್ತಿದ್ದಾರೆ. ಮನೆ ಮನೆಗೆ ತೆರಳಿ ಪಕ್ಷದ ಪರವಾಗಿ ಕೆಲಸ ಮಾಡಲು ಕಾರ್ಯಕರ್ತರಿಗೆ ಸೂಚನೆ ನೀಡಿದ್ದೇನೆ. ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮುಂದಿನ ತಿಂಗಳಿಂದ ನಾನೂ ಪ್ರಚಾರಕ್ಕೆ ಹೋಗುತ್ತೇನೆ ಎಂದು ದೇವೇಗೌಡ ಹೇಳಿದರು.
ಪಕ್ಷದಿಂದ ಅಂತರ ಕಾಯ್ದುಕೊಂಡಿರುವ ಶಾಸಕ ಶಿವಲಿಂಗೇಗೌಡರು ಕುಮಾರಸ್ವಾಮಿ ಜತೆ ಮಾತನಾಡಿದ್ದಾರೆ. ದ್ವಂದ ಇದೆ. ಇನ್ನೂ ಸಮಸ್ಯೆ ಬಗೆಹರಿದಿಲ್ಲ ಎಂದ ದೇವೇಗೌಡರು, ಹಾಸನದಲ್ಲಿ ಶಾಸಕ ಪ್ರೀತಂ ಗೌಡನಿಗೆ ಬಿ.ಎಸ್. ಯಡಿಯೂರಪ್ಪ ಸರ್ಕಾರವಿದ್ದಾಗ ಸರ್ವ ಶಕ್ತಿ ಕೊಟ್ಟಿದೆ. ಯಾವ್ಯಾವ ಕೆಲಸ ಕೊಟ್ಟಿದ್ದಾರೆ? ಅದರಿಂದ ಎಷ್ಟು ಹಣ ಸಂಪಾದಿಸಿದ್ದಾರೆ? ಅವರ ಶಕ್ತಿ ಎಷ್ಟಿದೆ ಎನ್ನುವುದು ತಿಳಿದಿದೆ. ಇದಕ್ಕೆ ಯಡಿಯೂರಪ್ಪ ಹಾಗೂ ಅವರ ಮಕ್ಕಳೇ ಕಾರಣ. ಅವರ ಯಾವ ಹೆದರಿಕೆಗೂ ನಾವು ಬಗ್ಗುವುದಿಲ್ಲ ಎಂದು ಗುಡುಗಿದರು.