

ಅಬ್ಬರಿಸಿದ ಮಳೆಗೆ ಜಿನಕೇರ ತಾಂಡಾ ತತ್ತರ | ಎಸ್.ಹೊಸಳ್ಳಿಯಲ್ಲಿ ೧೦ ಕುರಿ ಸಾವು
ವಿಜಯವಾಣಿ ಸುದ್ದಿಜಾಲ ಯಾದಗಿರಿ
ಜಿಲ್ಲಾದ್ಯಂತ ಸೋಮವಾರ ಸಂಜೆ ಸುರಿದ ಗುಡುಗು ಸಹಿತ ಭಾರಿ ಮಳೆ ವೇಳೆ ಜಿನಕೇರ ತಾಂಡಾದಲ್ಲಿ ನೆಲಕ್ಕೆ ಅಪ್ಪಳಿಸಿದ ಸಿಡಿಲಿಗೆ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ನೇನು ಜಾಧವ್ (೧೮), ಚನ್ನಪ್ಪ ಜಾಧವ್(೨೨), ಕಿಶನ್ ಜಾಧವ್(೩೦) ಮತ್ತು ಸುಮಿಬಾಯಿ ಜಾಧವ್ (೩೦) ಮೃತಪಟ್ಟಿದ್ದಾರೆ. ಗಂಭೀರ ಗಾಯಗೊಂಡ ಮೂವರಲ್ಲಿ ಒಬ್ಬನ ಸ್ಥಿತಿ ಚಿಂತಾಜನಕವಾಗಿದ್ದು, ಕಲಬುರಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಳೆ ಶುರುವಾಗುತ್ತಿದ್ದಂತೆ ಆಶ್ರಯಕ್ಕಾಗಿ ತಾಂಡಾದಲ್ಲಿನ ಚಿಕ್ಕದಾದ ದುರ್ಗಮ್ಮ ದೇವಿ ದೇವಸ್ಥಾನದಲ್ಲಿ ಏಳೆಂಟು ಜನರು ಹೋಗಿz್ದÁರೆ. ಏಕಾಏಕಿ ಮಳೆ ಜೋರಾಗಿ ಗುಡುಗು ಮಿಂಚಿನ ಸದ್ದು ಹೆದರುವಂತೆ ಮಾಡಿದೆ. ಸ್ವಲ್ಪ ಹೊತ್ತಿನಲ್ಲಿಯೇ ಭಾರಿ ಸದ್ದಿನೊಂದಿಗೆ ಸಿಡಿಲು ನೇರವಾಗಿ ಗುಡಿಗೆ ಅಪ್ಪಳಿಸಿದ್ದರಿಂದ ಒಳಗಿದ್ದವರ ಪೈಕಿ ನಾಲ್ವರು ಸ್ಥಳದಲ್ಲೇ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ನೂರಾರು ಜನರ ದುಃಖದ ಕಟ್ಟೆ ಒಡೆಯಿತು. ಕೇವಲ ಅರ್ಧ ಗಂಟೆ ಮುಂಚೆ ಎಲ್ಲರೊಂದಿಗೆ ಇದ್ದು ಮಾತಾಡಿಸಿದ್ದ ನಾಲ್ವರು ಜೀವ ಕಳೆದುಕೊಂಡಿರುವುದನ್ನು ನೆನೆಸಿ ಬಿಕ್ಕಿ ಬಿಕ್ಕಿ ಅಳುವ ಸನ್ನಿವೇಶ ಮನಕುಲುಕುವಂತ್ತಿತ್ತು. ಎಸ್.ಹೊಸಳ್ಳಿಯಲ್ಲಿ ೧೦ ಕುರಿಗಳು ಸಿಡಿಲಿನಿಂದಾಗಿ ಅಸುನೀಗಿವೆ. ಯಾದಗಿರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸಿಪಿಐ ಸುನೀಲ್ ಮೂಲಿಮನಿ ಪ್ರಕರಣ ದಾಖಲಿಸಿದ್ದಾರೆ.
ಒಂದು ಗಂಟೆಗೂ ಹೆಚ್ಚು ಭಾರಿ ಮಳೆಯಾಗಿದ್ದು, ನಗರದ ರಸ್ತೆಗಳು ಹಳ್ಳದಂತೆ ಗೊಚರಿಸಿವೆ. ವಾಹನ ಸಂಚಾರಕ್ಕೆ ತೊಂದರೆಯಾದರೆ, ಇಳಿಜಾರು ಪ್ರದೇಶಗಳ ಮನೆಗಳಿಗೆ ಮಳೆ ನೀರು ಹೊಕ್ಕು ನಿವಾಸಿಗಳು ಪರದಾಡುವಂತಾಯಿತು.