ಪ್ರತ್ಯೇಕ ವಿಧಾನಸಭೆ ಕ್ಷೇತ್ರಕ್ಕಾಗಿ ಹೋರಾಟ

ವಿವಿಧ ಮಠಾಧೀಶರ ಸಾನ್ನಿಧ್ಯದಲ್ಲಿ ಸವಣೂರಲ್ಲಿ ಪ್ರತಿಭಟನಾ ಮೆರವಣಿಗೆ
ಸವಣೂರು ತಾಲೂಕನ್ನು ಪ್ರತ್ಯೇಕ ವಿಧಾನಸಭಾ ಕ್ಷೇತ್ರವನ್ನಾಗಿ ಘೋಷಿಸಬೇಕು ಎಂದು ಸವಣೂರಲ್ಲಿ ಸಮೀರಪ್ರಕಾಶ ಕೋಡೆ ಅವರ ಮೂಲಕ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಂಬಂಧಪಟ್ಟ ಇಲಾಖೆಗೆ ಮನವಿ ಸಲ್ಲಿಸಲಾಯಿತು. ಶ್ರೀ ದಿಂಗಾಲೇಶ್ವರ ಸ್ವಾಮೀಜಿ, ಶ್ರೀ ನಿಜಗುಣ ಶಿವಯೋಗಿ ಸ್ವಾಮೀಜಿ, ಶ್ರೀ ಚನ್ನಬಸವ ಸ್ವಾಮೀಜಿ ಇತರರು ಇದ್ದರು.
ಸವಣೂರು ತಾಲೂಕನ್ನು ಪ್ರತ್ಯೇಕ ವಿಧಾನಸಭಾ ಕ್ಷೇತ್ರವನ್ನಾಗಿ ಘೋಷಿಸಬೇಕು ಎಂದು ಸವಣೂರಲ್ಲಿ ಸಮೀರಪ್ರಕಾಶ ಕೋಡೆ ಅವರ ಮೂಲಕ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಂಬಂಧಪಟ್ಟ ಇಲಾಖೆಗೆ ಮನವಿ ಸಲ್ಲಿಸಲಾಯಿತು. ಶ್ರೀ ದಿಂಗಾಲೇಶ್ವರ ಸ್ವಾಮೀಜಿ, ಶ್ರೀ ನಿಜಗುಣ ಶಿವಯೋಗಿ ಸ್ವಾಮೀಜಿ, ಶ್ರೀ ಚನ್ನಬಸವ ಸ್ವಾಮೀಜಿ ಇತರರು ಇದ್ದರು.
Published on: 

ಸವಣೂರು: ಸರ್ವಾಂಗೀಣ ಅಭಿವೃದ್ಧಿಗಾಗಿ ತಾಲೂಕನ್ನು ಪ್ರತ್ಯೇಕ ವಿಧಾನಸಭೆ ಕ್ಷೇತ್ರ ಎಂದು ಘೋಷಿಸಲು ಒತ್ತಾಯಿಸಿ ಸವಣೂರು ತಾಲೂಕು ಪ್ರತ್ಯೇಕ ವಿಧಾನಸಭಾ ಕ್ಷೇತ್ರ ಹೋರಾಟ ಸಮಿತಿ ಪದಾಧಿಕಾರಿಗಳು ಸೋಮವಾರ ವಿವಿಧ ಮಠಾಧೀಶರ ಸಾನ್ನಿಧ್ಯದಲ್ಲಿ ಪ್ರತಿಭಟನೆ ನಡೆಸಿದರು.

ಪಟ್ಟಣದ ದೊಡ್ಡಹುಣಸೇ ಕಲ್ಮಠದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಡಾ. ವಿ.ಕೃ.ಗೋಕಾಕ ವೃತ್ತ, ಡಾ. ಬಿ.ಆರ್.ಅಂಬೇಡ್ಕರ ವೃತ್ತ, ಮುಖ್ಯಮಾರುಕಟ್ಟೆ, ಅಂಚೆ ಇಲಾಖೆ ರಸ್ತೆ ಮೂಲಕ ಎಸಿ ಕಾರ್ಯಾಲಯಕ್ಕೆ ಆಗಮಿಸಿ ಉಪವಿಭಾಗಾಧಿಕಾರಿ ಸಮೀರಪ್ರಕಾಶ ಕೋಡೆ ಅವರಿಗೆ ಮನವಿ ಸಲ್ಲಿಸಲಾಯಿತು.

ಸವಣೂರು ಐತಿಹಾಸಿಕ ಹಿನ್ನೆಲೆ ಹೊಂದಿರುವ ಕ್ಷೇತ್ರವಾಗಿದೆ. ಸವಣೂರು ಸಂಸ್ಥಾನ 1680 ರಿಂದ 1948ರವರೆಗೆ ಅಸ್ತಿತ್ವದಲ್ಲಿತ್ತು. ಬ್ರಿಟಿಷರ್ ಆಡಳಿತ ಕಾಲದಲ್ಲಿ ಸವಣೂರು ರಾಜ್ಯ ಪ್ರದೇಶವಾಗಿದ್ದು, ದಕ್ಷಿಣದ ತುಂಗ-ಭದ್ರಾ ನದಿಯಿಂದ ಉತ್ತರದ ಕೃಷ್ಣಾ ನದಿಯವರಿಗೂ ವಿಸ್ತಾರ ಹೊಂದಿತ್ತು ಎಂಬುವ ಇತಿಹಾಸದಲ್ಲಿದೆ. ಆದರೆ, ಇಂದು ತಾಲೂಕು ಕೇಂದ್ರವಾಗಿದ್ದರೂ ಶಿಗ್ಗಾಂವ ಹಾಗೂ ಹಾವೇರಿ ವಿಧಾನಸಭಾ ಕ್ಷೇತ್ರಗಳಲ್ಲಿ ಹಂಚಿ ಹೋಗಿದೆ. ಆದ್ದರಿಂದ, ಅನುದಾನ, ಅಭಿವೃದ್ಧಿ ಹಾಗೂ ಮೂಲಸೌಕರ್ಯ ದೊರೆಯುತ್ತಿಲ್ಲ. ರಾಜ್ಯದಲ್ಲಿ ಹಿಂದುಳಿದ ತಾಲೂಕು ಪಟ್ಟಿಯಲ್ಲಿ ಸವಣೂರು ಸೇರಿದ್ದು, ಸ್ಥಳೀಯ ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ.

ಸವಣೂರು ಪುರಸಭೆ 27 ವಾರ್ಡ್, ತಾಲೂಕಿನಲ್ಲಿ ಒಟ್ಟು 65 ಗ್ರಾಮಗಳು ಹಾಗೂ 21 ಗ್ರಾಪಂಗಳನ್ನು ಹೊಂದಿದ್ದು, ಅಂದಾಜು 1.80 ಲಕ್ಷ ಜನಸಂಖ್ಯೆಯಿದೆ. ಕಂದಾಯ ಉಪ ವಿಭಾಗವಾಗಿದ್ದು, ಜನಸಂಖ್ಯೆ ಹಾಗೂ ಭೌಗೋಳಿಕವಾಗಿ ಪ್ರತ್ಯೇಕ ವಿಧಾನಸಭಾ ಕ್ಷೇತ್ರದ ಅರ್ಹತೆ ಹೊಂದಿದೆ. ಆದ್ದರಿಂದ, ತಾಲೂಕಿನ ಸರ್ವಾಂಗಿಣ ಅಭಿವೃದ್ಧಿಗಾಗಿ ಪ್ರತ್ಯೇಕ ವಿಧಾನಸಭಾ ಕ್ಷೇತ್ರ ಎಂದು ಘೋಷಣೆಯನ್ನು ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಪ್ರತಿಭಟನಾ ಮೆರವಣಿಗೆ ನೇತೃತ್ವ ವಹಿಸಿದ್ದ ಶಿರಹಟ್ಟಿ ಜಗದ್ಗುರು ಶ್ರೀ ದಿಂಗಾಲೇಶ್ವರ ಸ್ವಾಮೀಜಿ, ಹತ್ತಿಮತ್ತೂರು ವಿರಕ್ತಮಠದ ಶ್ರೀ ನಿಜಗುಣ ಶಿವಯೋಗಿ ಸ್ವಾಮೀಜಿ, ಪಟ್ಟಣದ ದೊಡ್ಡಹುಣಸೇ ಕಲ್ಮಠದ ಶ್ರೀ ಚನ್ನಬಸವ ಸ್ವಾಮೀಜಿ ಮಾತನಾಡಿ, ಸವಣೂರು ತಾಲೂಕನ್ನು ಪ್ರತ್ಯೇಕ ವಿಧಾನಸಭಾ ಕ್ಷೇತ್ರವನ್ನಾಗಿಸುವುದು ಅವಶ್ಯವಾಗಿದೆ. ಕೇಂದ್ರ ಸರ್ಕಾರ ಹಾಗೂ ಚುನಾವಣೆ ಇಲಾಖೆ ಕೂಡಲೇ ಸ್ಪಂದಿಸಬೇಕು. ತಾಲೂಕಿನ ಜನರೊಂದಿಗೆ ಕೊನೆಯ ತನಕ ಇರುತ್ತೇವೆ ಎಂದು ಭರವಸೆ ನೀಡಿದರು.

ಹೋರಾಟ ಸಮಿತಿ ಅಧ್ಯಕ್ಷ ಎಸ್.ವಿ. ಪಾಟೀಲ ಮಾತನಾಡಿ, ಪ್ರತ್ಯೇಕ ವಿಧಾನಸಭಾ ಕ್ಷೇತ್ರ ಘೋಷಣೆಯ ಹೋರಾಟ ರೂಪುರೇಷೆಗಳನ್ನು ವಿವರಿಸಿದರು. ಪ್ರತಿಭಟನೆಯಲ್ಲಿ ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಸರ್ವರು ಪಾಲ್ಗೊಂಡಿದ್ದು ಮತ್ತಷ್ಟು ಬಲ ತಂದಿದೆ ಎಂದರು.

ಕಾಂಗ್ರೆಸ್, ಬಿಜೆಪಿ, ಡಿಎಸ್‌ಎಸ್, ವಕೀಲರ ಸಂಘ, ವಿವಿಧ ರೈತ ಸಂಘಟನೆಗಳ ಪದಾಧಿಕಾರಿಗಳು ಸೇರಿದಂತೆ ಪಟ್ಟಣ ಹಾಗೂ ತಾಲೂಕಿನ ಪ್ರಮುಖರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net