ಹಾವೇರಿಯಲ್ಲಿ ಅಚ್ಚರಿ ಪವಾಡ; ಅಂತ್ಯಕ್ರಿಯೆಗೆ ಸಿದ್ಧತೆ ನಡೆಸುವಾಗ್ಲೇ ಮರುಜನ್ಮ ಪಡೆದ ಮಹಿಳೆ, ಮುಂದೇನಾಯ್ತು?

ಎಐ ಸಹಾಯದಿಂದ ನಿರ್ಮಿಸಿದ ಚಿತ್ರ
ಎಐ ಸಹಾಯದಿಂದ ನಿರ್ಮಿಸಿದ ಚಿತ್ರ
Published on
  • ಸತ್ತಿದ್ದಾರೆಂದು ಅಂತ್ಯಕ್ರಿಯೆಗೆ ಸಿದ್ಧತೆ ನಡೆಸಿಕೊಂಡಿದ್ದ ಕುಟುಂಬಸ್ಥರು

  • ವೈದ್ಯರ ಸಮಯಪ್ರಜ್ಞೆಯಿಂದ 63 ವರ್ಷದ ಮಹಿಳೆಗೆ ಸಿಕ್ತು ಮರುಜೀವ

  • ಹಾವೇರಿಯ ಹಿರೇಕೆರೂರು ತಾಲೂಕಿನ ಗೊಡಚಿಕೊಂಡ ಗ್ರಾಮದಲ್ಲಿ ಘಟನೆ

ಹಾವೇರಿ: 63 ವರ್ಷದ ಮಹಿಳೆ ಮೃತಪಟ್ಟಿದ್ದಾರೆ ಎಂದು ಭಾವಿಸಿ ಅಂತ್ಯಕ್ರಿಯೆಗೆ ಸಿದ್ಧತೆ ನಡೆಸುತ್ತಿದ್ದ ವೇಳೆಯೇ, ಆಕೆ ಜೀವಂತವಾಗಿದ್ದಾರೆ ಎನ್ನುವುದನ್ನು ಅರಿತ ಕುಟುಂಬಸ್ಥರು ಶಾಕ್​ಗೊಳಗಾದ ಘಟನೆ ಹಿರೇಕೆರೂರು ತಾಲೂಕಿನ ಗೊಡಚಿಕೊಂಡ ಗ್ರಾಮದಲ್ಲಿ ನಡೆದಿದೆ.

ವೈದ್ಯರ ಸಮಯಪ್ರಜ್ಞೆಯಿಂದ 63 ವರ್ಷದ ರೇಣುಕಮ್ಮ ಸಂಕೊಳ್ಳಿ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ರೇಣುಕಮ್ಮ ಸೋಮವಾರ ರಾತ್ರಿ ತೀವ್ರ ಅಸ್ವಸ್ಥರಾಗಿದ್ದರು. ರಕ್ತದೊತ್ತಡ ಹಾಗೂ ರಕ್ತದಲ್ಲಿನ ಸಕ್ಕರೆ ಪ್ರಮಾಣದಲ್ಲಿ ತೀವ್ರ ಏರುಪೇರಾಗಿದ್ದರಿಂದ ಪ್ರಜ್ಞಾಹೀನರಾಗಿದ್ದರು. ಕುಟುಂಬಸ್ಥರು ಅವರನ್ನು ಗ್ರಾಮದ ಸ್ಥಳೀಯ ವೈದ್ಯರ ಬಳಿ ಕರೆದೊಯ್ದಿದ್ದರು. ಈ ವೇಳೆ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಉಸಿರಾಟವೂ ಕ್ಷೀಣಿಸಿತ್ತು ಎನ್ನಲಾಗಿದೆ.

ಮೃತಪಟ್ಟಿದ್ದಾರೆ ಎಂದು ಕೊಂಡಿದ್ದ ಕುಟುಂಬ

ರೇಣುಕಮ್ಮ ಮೃತಪಟ್ಟಿದ್ದಾರೆಂದು ಭಾವಿಸಿದ ಕುಟುಂಬಸ್ಥರು ಸಂಬಂಧಿಕರಿಗೆ ಮಾಹಿತಿ ನೀಡಿ ಅಂತ್ಯಕ್ರಿಯೆಗೆ ಸಿದ್ಧತೆ ಆರಂಭಿಸಿದ್ದರು. ಕೆಲ ಸಂಬಂಧಿಕರು ಅಂತಿಮ ದರ್ಶನಕ್ಕಾಗಿ ಹೂವಿನ ಹಾರಗಳೊಂದಿಗೆ ಆಗಮಿಸಿದ್ದರು.

ಉಸಿರಾಟದ ಚಲನೆ ಕಂಡುಬಂತು

ಅಂತ್ಯಕ್ರಿಯೆಯ ಸಿದ್ಧತೆ ನಡೆಯುತ್ತಿದ್ದ ಸಂದರ್ಭದಲ್ಲಿ ರೇಣುಕಮ್ಮ ಅವರ ಎದೆಯ ಭಾಗದಲ್ಲಿ ಉಸಿರಾಟದ ಚಲನೆ ಕಂಡುಬಂದಿದೆ. ಇದರಿಂದ ಕುಟುಂಬಸ್ಥರು ತಕ್ಷಣ ಅವರನ್ನು ಹಿರೇಕೆರೂರು ಪಟ್ಟಣದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆಸ್ಪತ್ರೆಯಲ್ಲಿ ವೈದ್ಯರು ತುರ್ತು ಚಿಕಿತ್ಸೆ ನೀಡಿದ್ದು, ರೇಣುಕಮ್ಮ ಅವರು ಚಿಕಿತ್ಸೆಗೆ ಸ್ಪಂದಿಸಿದ್ದಾರೆ. ಸದ್ಯ ಅವರ ಆರೋಗ್ಯ ಸ್ಥಿರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

ಮೃತಪಟ್ಟಿದ್ದಾರೆಂದು ಭಾವಿಸಿ ಅಂತ್ಯಕ್ರಿಯೆಗೆ ಸಿದ್ಧತೆ ನಡೆಸಿದ್ದ ಕುಟುಂಬಕ್ಕೆ, ರೇಣುಕಮ್ಮ ಅವರು ಚೇತರಿಸಿಕೊಂಡಿರುವುದು ನೆಮ್ಮದಿ ತಂದಿದೆ. ವೈದ್ಯರ ಸಮಯೋಚಿತ ಚಿಕಿತ್ಸೆಯಿಂದ ಮಹಿಳೆಯ ಜೀವ ಉಳಿದಂತಾಗಿದೆ.

ಮಗ ಹೇಳಿದ್ದೇನು?

ಮಗ ಗಡಚಿಕೊಪ್ಪದ ಬಸವರಾಜ್ ಮಾತನಾಡಿ, 'ರಾತ್ರಿ 2 ಗಂಟೆ ಸುಮಾರಿಗೆ ಹೊಟ್ಟೆನೋವು ಕಾಣಿಸಿಕೊಂಡು ಪ್ರಜ್ಞೆ ತಪ್ಪಿದ್ದರು. ಅವರನ್ನು ಸ್ಥಳೀಯ ವೈದ್ಯರಿಗೆ ತೋರಿಸಿದಾಗ, ಉಸಿರಾಟ ತುಂಬಾ ಕ್ಷೀಣಿಸಿದ್ದು ಬದುಕುಳಿಯುವ ಸಾಧ್ಯತೆ ಇಲ್ಲ ಎಂದರು. ಮನೆಯವರು ಮತ್ತು ಸಂಬಂಧಿಕರು ಮೃತಪಟ್ಟಿದ್ದಾರೆ ಎಂದರು. ಎಲ್ಲರಿಗೂ ಫೋನ್ ಮೂಲಕ ವಿಷಯ ಮುಟ್ಟಿಸಿ ಅಂತಿಮ ವಿಧಿವಿಧಾನಕ್ಕಾಗಿ ಊರಿಗೆ ಹೊರಟಿದ್ದೆವು. ಆದರೆ, ದಾರಿಯಲ್ಲಿ ಕೊನೆಯ ಪ್ರಯತ್ನವಾಗಿ ಮಾಗನೂರು ಆಸ್ಪತ್ರೆಗೆ ಕರೆತಂದಾಗ ಪರಿಸ್ಥಿತಿ ಸಂಪೂರ್ಣ ಬದಲಾಯಿತು. ಅಮ್ಮ ಬದುಕಿದರು ಎಂದು ಮಗ ಹೇಳಿದ್ದಾರೆ.

ವೈದ್ಯರು ಏನಂದ್ರು?

ಇನ್ನೂ ಈ ಬಗ್ಗೆ ವೈದ್ಯರು ಮಾತನಾಡಿ, ಆಸ್ಪತ್ರೆಗೆ ಬಂದಾಗ ನಾಡಮಿಡಿತ ಹಾಗೂ ರಕ್ತದೊತ್ತಡ ಅತ್ಯಂತ ಕಡಿಮೆಯಿತ್ತು. ಐಸಿಯು ಪ್ರೊಟೋಕಾಲ್ ಅಡಿಯಲ್ಲಿ ರಕ್ತ ಪರೀಕ್ಷೆ ನಡೆಸಿ, ಸಕ್ಕರೆ ಮಟ್ಟ ಹಾಗೂ ದೇಹದ ಎಲೆಕ್ಟ್ರೋಲೈಟ್ಸ್‌ಗಳನ್ನು ಸರಿಪಡಿಸುವ ತುರ್ತು ಚಿಕಿತ್ಸೆ ನೀಡಲಾಯಿತು. ಒಂದು ಗಂಟೆಯ ಒಳಗೆ ಚೇತರಿಸಿಕೊಂಡ ವೃದ್ಧೆ ಕಣ್ಣುಬಿಟ್ಟು ಮಾತನಾಡಲಾರಂಭಿಸಿದರು ಎಂದು ಹೇಳಿದ್ದಾರೆ, (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net