ಹಾವೇರಿ ಭೀಕರ ಅಪಘಾತ: 1 ತಿಂಗಳ ಹಿಂದೆಯಷ್ಟೇ ಹೊಸ ಟಿಟಿ ವಾಹನ ಖರೀದಿಸಿದ್ದ ಚಾಲಕ ಆದರ್ಶ್​!

Untitled design - 2024-06-28T131424.111
Published on

ಹಾವೇರಿ: ಇಲ್ಲಿನ ಬ್ಯಾಡಗಿ ತಾಲೂಕಿನಲ್ಲಿ ಇಂದು (ಜೂ.28) ಬೆಳ್ಳಂಬೆಳಗ್ಗೆ ಜವರಾಯ ಅಟ್ಟಹಾಸ ಮೆರೆದಿದ್ದಾನೆ. ಸವದತ್ತಿ ರೇಣುಕಾ ಯಲ್ಲಮ್ಮ ದರ್ಶನ ಪಡೆದು ಮನೆಗೆ ಹಿಂತಿರುಗುತ್ತಿದ್ದವರು ಮಸಣ ಸೇರಿದ್ದಾರೆ. ನಸುಕಿನ ಜಾವ 4 ಗಂಟೆಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 13 ಮಂದಿ ದುರಂತ ಸಾವಿಗೀಡಾಗಿರುವ ಹೃದಯವಿದ್ರಾವಕ ಘಟನೆ ಸಂಭವಿಸಿದೆ. ತಮ್ಮವರನ್ನು ಕಳೆದುಕೊಂಡ ಕುಟಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಹೆದ್ದಾರಿಯಲ್ಲಿ ನಿಂತಿದ್ದ ಲಾರಿಗೆ ಹಿಂದಿನಿಂದ ಟಿಟಿ ವಾಹನ ಡಿಕ್ಕಿ ಹೊಡೆದ ಪರಿಣಾಮ ಭೀಕರ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಇಬ್ಬರು ಮಕ್ಕಳು ಸೇರಿದಂತೆ 13 ಜನರು ಮೃತಪಟ್ಟ ದುರ್ಘಟನೆ ಜಿಲ್ಲೆಯ ಬ್ಯಾಡಗಿ ತಾಲೂಕಿನ ಗುಂಡೇನಹಳ್ಳಿ ಕ್ರಾಸ್ ಬಳಿ ಪೂಣೆ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಮೃತರು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಎಮ್ಮಿಹಟ್ಟಿ ಗ್ರಾಮದವರು ಎಂದು ವರದಿಯಾಗಿದೆ.

ಅಪಘಾತದಲ್ಲಿ ಟಿಟಿ ವಾಹನ ಸಂಪೂರ್ಣ ನುಜ್ಜು ಗುಜ್ಜಾಗಿದ್ದು, ವಾಹನದಲ್ಲಿ ಸಿಲುಕಿಕೊಂಡಿದ್ದ ಮೃತದೇಹಗಳನ್ನು ಅಗ್ನಿಶಾಮಕ ಇಲಾಖೆ ಸಿಬ್ಬಂದಿ ಹೊರತೆಗೆದು ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ. ಟಿಟಿ ವಾಹನದಲ್ಲಿ 15 ಜನರು ಪ್ರಯಾಣಿಸುತ್ತಿದ್ದರು. ದೇವರ ದರ್ಶನ ಪಡೆಯಲೆಂದು ಅಪ್ಪ-ಅಮ್ಮ, ಸಹೋದರಿ ಹಾಗೂ ಕುಟುಂಬದವರು, ಸಂಬಂಧಿಕರನ್ನು ಕರೆದುಕೊಂಡು ಚಿಂಚೊಳಿ, ಸವದತ್ತಿ ಯಲ್ಲಮ್ಮನ ದರ್ಶನಕ್ಕೆ ಹೋಗಿ ಬರುವಾಗ ಈ ಅಪಘಾತ ಸಂಭವಿಸಿದೆ.

ಚಾಲಕ ಆದರ್ಶ್​ 7-8 ವರ್ಷಗಳಿಂದ ವಾಹನ ಓಡಿಸುತ್ತಿದ್ದ. ಇಲ್ಲಿಯವರೆಗೂ ಸಣ್ಣ ಅಪಘಾತ ಕೂಡ ಮಾಡಿರಲಿಲ್ಲ. ಸಾಲ ಮಾಡಿ ಒಂದು ತಿಂಗಳ ಹಿಂದೆಯಷ್ಟೇ ಹೊಸ ಟಿಟಿ ವಾಹನ ಖರೀದಿಸಿದ್ದ. ನಿದ್ರೆ ಮಂಪರಿನಲ್ಲಿ ಅಪಘಾತ ಸಂಭವಿಸಿರಬಹುದು ಎಂದು ಆದರ್ಶ ಅವರ ಸಂಬಂಧಿ ಪರಶುರಾಮ 'ವಿಜಯವಾಣಿ'ಗೆ ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net