ಮೊದಲ ಹಂತದಲ್ಲಿ ಶೇ.84 ಮತದಾನ

22-hvr-03a
Published on

ಹಾವೇರಿ: ಹಳ್ಳಿ ವಿಧಾನಸಭೆ ಎಂದೇ ಬಿಂಬಿತವಾಗಿರುವ ಗ್ರಾಮ ಪಂಚಾಯಿತಿಗಳಿಗೆ ಮಂಗಳವಾರ ನಡೆದ ಮೊದಲ ಹಂತದ ಚುನಾವಣೆಯಲ್ಲಿ ಜಿಲ್ಲೆಯಾದ್ಯಂತ ಶೇ. 84.01ರಷ್ಟು ಮತದಾನವಾಗಿದೆ.

ಕೆಲವೆಡೆ ಮಾಯವಾದ ಕೋವಿಡ್ ನಿಯಮ ಪಾಲನೆ, ಮತದಾರರ ಪಟ್ಟಿಯಿಂದ 66 ಜನರ ಹೆಸರು ಮಾಯವಾಗಿದ್ದು, ಸೀರೆ, ಉಪಹಾರ ಹಂಚಿಕೆ ಹಾಗೂ ಮದ್ಯದ ಘಮಲು, ಸ್ಯಾನಿಟೈಸರ್, ಮಾಸ್ಕ್, ಥರ್ಮಲ್ ಸ್ಕ್ರೀನಿಂಗ್​ನಿಂದ ತಪಾಸಣೆ… ಇವು ಮಂಗಳವಾರ ನಡೆದ ಮತದಾನ ಪ್ರಕ್ರಿಯೆಯಲ್ಲಿ ಕಂಡುಬಂದ ದೃಶ್ಯಗಳು.

ಜಿಲ್ಲೆಯ ನಾಲ್ಕು ತಾಲೂಕುಗಳ 104 ಗ್ರಾಪಂಗಳ 1,357 ಸದಸ್ಯ ಸ್ಥಾನಗಳಿಗೆ ಆಯ್ಕೆ ಬಯಸಿ 3,585 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಒಟ್ಟು 5,74,494 ಮತದಾರರಲ್ಲಿ 4,49,439ರಷ್ಟು ಮತದಾರರು ತಮ್ಮ ಹಕ್ಕು ಚಲಾಯಿಸಿದರು.

ಬೆಳಗ್ಗೆ ಮಂದ, ಬಿಸಿಲೇರುತ್ತಿದ್ದಂತೆ ಜೋರು: ಬೆಳಗ್ಗೆ 7 ಗಂಟೆಗೆ ಮತದಾನ ಪ್ರಕ್ರಿಯೆ ಆರಂಭವಾದ ಸಮಯದಲ್ಲಿ ಚಳಿಯ ಕಾರಣ ಮತದಾನ ಪ್ರಕ್ರಿಯೆ ನಿಧಾನಗತಿಯಲ್ಲಿ ಸಾಗಿತ್ತು. ಬಿಸಿಲೇರಿದಂತೆ ಬೆಳಗ್ಗೆ 9ರಿಂದ ಮತದಾರರು ಮತಗಟ್ಟೆಗಳಿಗೆ ಬಂದು ಸರದಿಯಲ್ಲಿ ನಿಂತು ಮತಚಲಾಯಿಸಿದರು. ಮಧ್ಯಾಹ್ನದ ಬಿಸಿಲು ಏರುತ್ತಿದ್ದಂತೆ ಕೆಲ ಮತಗಟ್ಟೆಗಳಲ್ಲಿ ಮತದಾರರ ಸಂಖ್ಯೆ ಕಡಿಮೆಯಾಗಿತ್ತಾದರೂ ಮತಗಟ್ಟೆಯ ಹೊರಗಡೆ ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿಗರು ಗುಂಪಾಗಿ ಮತಯಾಚನೆಗೆ ಕೊನೆಯ ಕ್ಷಣದ ಕಸರತ್ತು ನಡೆಸಿದ್ದರು. ಮತ ಚಲಾಯಿಸದೇ ಇರುವ ಮತದಾರರನ್ನು ಗುರುತಿಸಿ ಅವರ ಮನೆಗಳಿಗೆ ತೆರಳಿ ಕರೆ ತರುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು.

ಬೆಳಗ್ಗೆ 9 ಗಂಟೆಗೆ ನಾಲ್ಕು ತಾಲೂಕುಗಳಲ್ಲಿ ಶೇ. 5.75ರಷ್ಟು ಮತದಾನವಾಗಿದ್ದರೆ, 11ಕ್ಕೆ ಶೇ. 20.64ರಷ್ಟು, ಮಧ್ಯಾಹ್ನ 1 ಗಂಟೆಗೆ ಶೇ. 42.41ರಷ್ಟು, ಮಧ್ಯಾಹ್ನ 3ರ ವೇಳೆಗೆ ಶೇ. 64.97ರಷ್ಟು ಮತದಾನವಾಗಿತ್ತು.

ಹಾವೇರಿ ತಾಲೂಕು ಅಗಡಿ ಗ್ರಾಪಂನಲ್ಲಿ 8 ಬೂತ್​ಗಳು, ದೇವಗಿರಿ ಗ್ರಾಮದ ಬೂತ್​ಗಳು ಒಂದೇ ಕಡೆಯಲ್ಲಿದ್ದರಿಂದ ಬೂತ್​ನ ಹೊರಗಡೆ ಜನಜಾತ್ರೆಯೇ ಸೇರಿತ್ತು. ಅಗಡಿ ಗ್ರಾಮದ ಮತಗಟ್ಟೆಗಳಲ್ಲಿ ಬೆಳಗ್ಗೆ 11 ಗಂಟೆಯ ಸುಮಾರಿಗೆ 15ರಿಂದ 30ರಷ್ಟು ಜನರು ಆರು ಮತಗಟ್ಟೆಗಳಲ್ಲಿಯೂ ತಮ್ಮ ಹಕ್ಕು ಚಲಾಯಿಸಲು ಸರದಿಯಲ್ಲಿ ನಿಂತಿದ್ದರು. ಅಲ್ಲದೆ, ಸರದಿ ಬರುವುದು ವಿಳಂಬವಾಗಿದ್ದರಿಂದ ಮಹಿಳಾ ಮತದಾರರ ಮತಗಟ್ಟೆಗಳ ಎದುರು ಸರದಿಯಲ್ಲಿ ಕುಳಿತಿದ್ದು ವಿಶೇಷವಾಗಿತ್ತು.

ಕಳೆದ ಬಾರಿಯಷ್ಟೇ ಮತದಾನ: 2015ರಲ್ಲಿ ನಡೆದ ಗ್ರಾಪಂ ಚುನಾವಣೆಯಲ್ಲಿಯೂ ಇಷ್ಟೇ ಪ್ರಮಾಣದ ಮತದಾನವಾಗಿತ್ತು. ಹಿರೇಕೆರೂರ ಶೇ. 85.02, ಹಾವೇರಿ ಶೇ. 82.93, ರಾಣೆಬೆನ್ನೂರ ಶೇ. 82.64ರಷ್ಟು ಮತದಾನವಾಗಿತ್ತು. ಹಾವೇರಿ ಹಾಗೂ ರಾಣೆಬೆನ್ನೂರ ತಾಲೂಕುಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿ ಕಡಿಮೆ ಮತದಾನವಾಗಿದೆ.

ಆರೋಗ್ಯ ತಪಾಸಣೆ: ಈ ಬಾರಿಯ ಗ್ರಾಮ ಪಂಚಾಯಿತಿ ಚುನಾವಣೆಯ ವಿಶೇಷವೆಂದರೆ ಮತಗಟ್ಟೆಗೆ ಆಗಮಿಸಿದ ಪ್ರತಿಯೊಬ್ಬ ಮತದಾರರನ್ನೂ ಥರ್ಮಲ್ ಸ್ಕ್ರೀನಿಂಗ್ ಮೂಲಕ ತಪಾಸಣೆ ನಡೆಸಿ ಕೈಗೆ ಸ್ಯಾನಿಟೈಸರ್ ಹಾಕಿ ಮತಗಟ್ಟೆ ಬಳಿ ಬಿಡಲಾಗುತ್ತಿತ್ತು. ಅಲ್ಲದೆ, ಮಾಸ್ಕ್ ಧರಿಸದೇ ಬಂದವರಿಗೆ ಕರವಸ್ತ್ರ ಹಾಗೂ ಸೀರೆ, ವಸ್ತ್ರವನ್ನೇ ಮಾಸ್ಕ್ ಮಾಡಿಕೊಂಡು ಸರದಿಯಲ್ಲಿ ನಿಲ್ಲುವಂತೆ ಸೂಚಿಸಲಾಗುತ್ತಿತ್ತು.

ಮತಗಟ್ಟೆಯ ಬಳಿಯೇ ಮತಯಾಚನೆ: ಜಿಲ್ಲೆಯ ನಾಲ್ಕು ತಾಲೂಕಿನ ಬಹುತೇಕ ಮತಗಟ್ಟೆಗಳಲ್ಲಿ ಅಭ್ಯರ್ಥಿಗಳು ನಿಯಮ ಮೀರಿ ಮತಗಟ್ಟೆಯ 100 ಮೀ ಪ್ರದೇಶದೊಳಗೆ ಮತದಾರರ ಬಳಿ ತಮಗೆ ಮತ ನೀಡುವಂತೆ ವಿನಂತಿಸುತ್ತಿದ್ದುದು ಕಂಡುಬಂತು. ಪೊಲೀಸರಿದ್ದರೂ ಅವರು ಇದರ ಬಗೆಗೆ ಹೆಚ್ಚಿನ ಲಕ್ಷ್ಯ ವಹಿಸಲಿಲ್ಲ.

ಆಟೋ, ಬೈಕ್​ಗಳ ಸಂಚಾರ ಜೋರು: ಜಿಲ್ಲೆಯ ಬಹುತೇಕ ಮತಗಟ್ಟೆಗಳಲ್ಲಿ ವೃದ್ಧರು, ಮಹಿಳೆಯರನ್ನು ಆಟೋಗಳಲ್ಲಿ ಮತಗಟ್ಟೆಗಳಿಗೆ ಕರೆತರುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಅಗಡಿಯಲ್ಲಿ ಮತಗಟ್ಟೆಯವರೆಗೂ ಆಟೋ, ಬೈಕ್​ಗಳ ಸಂಚಾರ ನಿರಾಂತಕವಾಗಿತ್ತು.

ಸೀರೆ, ಕುಕ್ಕರ್, ಹಣ ಹಂಚಿಕೆ: ಮತದಾರರ ಮನಗೆಲ್ಲಲು ಅಭ್ಯರ್ಥಿಗಳು ಸೋಮವಾರ ರಾತ್ರಿಯಿಡಿ ಕಾರ್ಯಾಚರಣೆ ನಡೆಸಿದರು. ಕೆಲ ಗ್ರಾಮದಲ್ಲಿ ಮಹಿಳಾ ಮತದಾರರಿಗೆ ಸೀರೆಗಳನ್ನು ಹಂಚಿಕೆ ಮಾಡಿರುವ, ಯಲಗಚ್ಚ ಗ್ರಾಮದಲ್ಲಿ ಕುಕ್ಕರ್ ಹಂಚಿಕೆ ಮಾಡಿರುವ ಮಾಹಿತಿ ಕೇಳಿಬಂತು. ಅಲ್ಲದೆ, ರಾಣೆಬೆನ್ನೂರ ತಾಲೂಕು ಹಲಗೇರಿ ಗ್ರಾಮದಲ್ಲಿ ಸೋಮವಾರ ಅಭ್ಯರ್ಥಿಯೊಬ್ಬರು ಮನೆಮನೆಗೆ ತೆರಳಿ ಸೀರೆ ಹಂಚಿದ್ದರು. ಕೆಲ ಮತದಾರರು ಅವುಗಳನ್ನು ಮರಳಿ ಕೊಟ್ಟಿರುವ ಪ್ರಕರಣಗಳೂ ನಡೆದವು. ಸೀರೆ, ಕುಕ್ಕರ್​ಗಳನ್ನು ಕೆಲವರು ಹಂಚಿದರೆ, ಬಹುತೇಕ ಗ್ರಾಮಗಳಲ್ಲಿ ಮತವೊಂದಕ್ಕೆ 200 ರೂ.ಗಳಿಂದ 1 ಸಾವಿರ ರೂ.ಗಳವರೆಗೆ ಹಂಚಿಕೆ ಮಾಡಿರುವುದು ಕೇಳಿಬಂತು.

ಮನೆಗೊಂದು ಕೋಳಿ, ಮಸಾಲೆ ಪೌಚು: ಹಾವೇರಿ ತಾಲೂಕು ದೇವಗಿರಿ ಗ್ರಾಮದ ಕೆಲ ವಾರ್ಡ್​ಗಳಲ್ಲಿ ಮತದಾರರ ಮನೆಗೆ ಕೋಳಿ, ಮಸಾಲೆ ಪೌಚು, ಒಳ್ಳೆಣ್ಣೆ ಪಾಕೀಟು ಹಂಚಿಕೆ ಮಾಡಿದರೆ, ಇನ್ನು ಕೆಲ ವಾರ್ಡ್​ಗಳಲ್ಲಿ ಒಂದು ಮತಕ್ಕೆ 1 ಸಾವಿರ ರೂ.ಗಳ ಹಂಚಿಕೆಯನ್ನು ಕೆಲ ಅಭ್ಯರ್ಥಿಗಳು ಮಾಡಿದ್ದಾರೆ ಎನ್ನಲಾಗಿದೆ.

ಮಾಸ್ಕ್ ಹಂಚಿಕೆ: ಹಾವೇರಿ ತಾಲೂಕು ತೋಟದಯಲ್ಲಾಪುರ ಗ್ರಾಮದಲ್ಲಿ ಮೂರು ಸದಸ್ಯ ಸ್ಥಾನಗಳಿಗೆ ಆಯ್ಕೆಯಾಗಬೇಕಿತ್ತು. ಅದರಲ್ಲಿ 2 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದ್ದು, ಒಂದು ಸಾಮಾನ್ಯ ಸ್ಥಾನಕ್ಕೆ ನಾಲ್ವರು ಸ್ಪರ್ಧಿಸಿದ್ದರು. ಅದರಲ್ಲಿ ಒಬ್ಬ ಅಭ್ಯರ್ಥಿ ಮತಗಟ್ಟೆಗೆ ಬರುವ ಪ್ರತಿಯೊಬ್ಬ ಮತದಾರರಿಗೂ ಮಾಸ್ಕ್ ಹಂಚಿ ಮತ ಕೇಳುತ್ತಿದ್ದ ದೃಶ್ಯ ವಿಶೇಷವಾಗಿತ್ತು.

ಮಾಯವಾದ ಕೋವಿಡ್ ನಿಯಮ: ಕೋವಿಡ್ ಹರಡದಂತೆ ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಆಯೋಗವು ಸೂಚನೆ ನೀಡಿತ್ತು. ಆದರೆ, ಎಲ್ಲ ಮತಗಟ್ಟೆಗಳಲ್ಲಿ ಜನ ನಿಯಮ ಮರೆತು ಪರಸ್ಪರ ಅಂತರವಿಲ್ಲದೇ ಸರದಿಯಲ್ಲಿ ನಿಂತಿರುವುದು. ಕೆಲವರು ಮಾಸ್ಕ್ ಧರಿಸಿದ್ದರೆ ಕೆಲವರು ಅದನ್ನು ಧರಿಸಿರಲಿಲ್ಲ. ಅಲ್ಲದೆ, ಮತಗಟ್ಟೆಯೊಳಗೆ ಮೂರು ಜನರಿಗೆ ಮಾತ್ರ ಬಿಡಲು ಅವಕಾಶವಿದ್ದರೂ ಐದಾರು ಜನರು ಒಮ್ಮೆಲೆ ಹೋಗಿ ಅಲ್ಲಿಯೂ ಗುಂಪುಗೂಡಿರುವುದು ಕಂಡುಬಂತು.

ಮದ್ಯದ ವಾಸನೆ…: ಪುರುಷ ಮತದಾರರಲ್ಲಿ ಅದರಲ್ಲಿಯೂ ಮತಗಟ್ಟೆಯ ಹೊರಗೆ ಸುತ್ತಾಡುತ್ತಿದ್ದ ಕೆಲವರಲ್ಲಿ ಮದ್ಯದ ಅಮಲು ಜೋರಾಗಿತ್ತು. ನಮ್ಮ ಕ್ಯಾಂಡಿಡೇಟ್​ಗೆ ವೋಟು ಹಾಕ್ಬೇಕು ಎಂದು ಮತಗಟ್ಟೆ ಬರುತ್ತಿದ್ದವರ ಬಳಿ ತೂರಾಡುತ್ತ ಹೇಳುತ್ತಿದ್ದ ದೃಶ್ಯಗಳು ಕಂಡುಬಂದವು.

ಚುನಾವಣಾಧಿಕಾರಿ ವಿರುದ್ಧ ಹರಿಹಾಯ್ದ ಅಭ್ಯರ್ಥಿಗಳು: ಅರೇಮಲ್ಲಾಪುರ ಗ್ರಾಮದ ಶಿವಾಜಿನಗರದ 2ನೇ ವಾರ್ಡ್​ನಲ್ಲಿ ಒಟ್ಟು 4 ಸ್ಥಾನಗಳಿಗೆ ಅಭ್ಯರ್ಥಿಗಳ ಆಯ್ಕೆ ನಡೆಯಬೇಕಿತ್ತು. ಆದರೆ, ಸಾಮಾನ್ಯ ವರ್ಗದ ಅಭ್ಯರ್ಥಿ ನಾಮಪತ್ರ ವಾಪಸ್ ಪಡೆದಿದ್ದರಿಂದ ಮತದಾರರು ಮೂವರು ಅಭ್ಯರ್ಥಿಗಳಿಗೆ ಮಾತ್ರ ಮತ ಚಲಾಯಿಸಬೇಕಾಯಿತು. ಆದರೆ, ಈ ಬಗ್ಗೆ ಮಾಹಿತಿಯಿಲ್ಲದ ಇನ್ನುಳಿದ ಅಭ್ಯರ್ಥಿಗಳು ಮತದಾನದ ಹಿಂದಿನ ದಿನದವರೆಗೂ ನಾಲ್ಕೂ ಅಭ್ಯರ್ಥಿಗಳಿಗೆ ಮತ ನೀಡುವಂತೆ ಮತ ಯಾಚಿಸಿದ್ದರು. ಆದರೆ, ಭಾನುವಾರ ಮಧ್ಯಾಹ್ನ ಚುನಾವಣಾಧಿಕಾರಿ ‘ಮೂವರು ಅಭ್ಯರ್ಥಿಗಳಿಗೆ ಮತ ಚಲಾಯಿಸಲು ಅವಕಾಶವಿದ್ದು, ಸೋತ ಅಭ್ಯರ್ಥಿಗಳಲ್ಲಿ ಯಾರು ಹೆಚ್ಚಿನ ಮತ ಗಳಿಸುತ್ತಾರೋ ಅವರು ಸಾಮಾನ್ಯ ಅಭ್ಯರ್ಥಿ ಎಂದು ಪರಿಗಣಿಸಿ ವಿಜೇತರೆಂದು ಘೊಷಿಸಲಾಗುವುದು’ ಎಂದು ತಿಳಿಸಿದ್ದಾರೆ. ಇದು ಕಣದಲ್ಲಿರುವ ಅಭ್ಯರ್ಥಿಗಳಿಗೂ ಇರಿಸು ಮುರಿಸು ಉಂಟು ಮಾಡಿದ್ದು, ಎಲ್ಲರೂ ಚುನಾವಣಾಧಿಕಾರಿ ವಿರುದ್ಧ ಹರಿಹಾಯ್ದರು.

ಮತದಾರರಿಗೆ ಹಂಚುತ್ತಿದ್ದ ಬ್ಯಾಟರಿ ವಶ: ಗುತ್ತಲ: ಮತದಾರರಿಗೆ ಹಂಚಲು ತಂದಿದ್ದ 25ಕ್ಕೂ ಅಧಿಕ ಬ್ಯಾಟರಿಗಳನ್ನು ಚುನಾವಣಾ ತಂಡದ ಅಧಿಕಾರಿಗಳು ವಶಪಡಿಸಿಕೊಂಡ ಘಟನೆ ತಾಲೂಕಿನ ಬೂದಗಟ್ಟಿ ಪ್ಲಾಟ್​ನಲ್ಲಿ ಸೋಮವಾರ ರಾತ್ರಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿ ಬೂದಗಟ್ಟಿ ಗ್ರಾಪಂ ಅಭ್ಯರ್ಥಿ ವೀರಪ್ಪ ವೆಂಕಪ್ಪ ಹೊಸಮನಿ ಹಾಗೂ ಕಲ್ಲಪ್ಪ ಮಹಾದೇವಪ್ಪ ಹೊಸಮನಿ (27) ಎಂಬುವರ ವಿರುದ್ಧ ದೂರು ದಾಖಲಾಗಿದೆ. ವೀರಪ್ಪ ಹೊಸಮನಿ ಬೂದಗಟ್ಟಿ ಗ್ರಾಪಂ ಚುನಾವಣೆಗೆ ಸ್ಪರ್ಧಿಸಿದ್ದು, ಬ್ಯಾಟರಿ ಚಿಹ್ನೆ ನೀಡಲಾಗಿತ್ತು. ಆದ್ದರಿಂದ ಮತದಾರರಿಗೆ ಬ್ಯಾಟರಿ ಹಂಚುವ ಮೂಲಕ ಗಮನ ಸೆಳೆಯಲು ಸಿದ್ಧತೆ ಮಾಡಿಕೊಂಡಿದ್ದರು. ಅದರಂತೆ ಸೋಮವಾರ ರಾತ್ರಿ ಕಲ್ಲಪ್ಪ ಎಂಬುವರು ಮತದಾರರಿಗೆ ಬ್ಯಾಟರಿ ಹಂಚುವ ಮೂಲಕ ವೀರಪ್ಪನಿಗೆ ಮತ ನೀಡುವಂತೆ ಕೇಳುತ್ತಿದ್ದನು. ಈ ವೇಳೆ ನಗರಸಭೆ ಆಯುಕ್ತ ಪರಶುರಾಮ ಛಲವಾದಿ ಹಾಗೂ ತಂಡದವರು ದಾಳಿ ನಡೆಸಿ ಬ್ಯಾಟರಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ ಗುತ್ತಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಕಪ್ಪು ಬಟ್ಟೆ ಕಟ್ಟಿಕೊಂಡು ಬಂದ ಅಸುಂಡಿ ಗ್ರಾಮಸ್ಥರು: ಮೂಲಸೌಲಭ್ಯಕ್ಕಾಗಿ ಆಗ್ರಹಿಸಿ ಮತದಾನ ಬಹಿಷ್ಕಾರದ ಎಚ್ಚರಿಕೆ ನೀಡಿದ್ದ ರಾಣೆಬೆನ್ನೂರ ತಾಲೂಕಿನ ಅಸುಂಡಿ ಗ್ರಾಮದ ಪರಿಶಿಷ್ಟ ಜಾತಿ ಕೇರಿಯ ಮತದಾರರು ಸೋಮವಾರ ಕೈಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಬಂದು ಮತದಾನ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

25 ವರ್ಷದಿಂದ ಸಣ್ಣ ಮನೆಯಲ್ಲಿ ವಾಸ ಮಾಡುತ್ತಿದ್ದೇವೆ. ಎಷ್ಟೇ ಕೇಳಿಕೊಂಡರೂ ನಮಗೆ ನಿವೇಶನ ಸೇರಿ ಯಾವುದೇ ರೀತಿಯ ಮೂಲಸೌಲಭ್ಯ ನೀಡಿಲ್ಲ. ಮತದಾನ ಬಹಿಷ್ಕಾರದ ಎಚ್ಚರಿಕೆ ನೀಡಿದರೂ ಜಿಲ್ಲಾಡಳಿತ ಕ್ಯಾರೇ ಎಂದಿಲ್ಲ. ಆದರೆ, ಪ್ರಜಾಪ್ರಭುತ್ವ ನಮಗೆ ನೀಡಿದ ಹಕ್ಕುನ್ನು ಚಲಾಯಿಸಬೇಕು ಎಂಬ ಉದ್ದೇಶದಿಂದ ಕೈಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಬಂದು ಮತದಾನ ಮಾಡಿದ್ದೇವೆ. ಮುಂದಿನ ದಿನದಲ್ಲಾದರೂ ಪರಿಶಿಷ್ಟ ಜಾತಿಯ ನಿವಾಸಿಗಳಿಗೆ ಆಶ್ರಯ ಮನೆ, ಚರಂಡಿ ನಿರ್ವಣ, ಕುಡಿಯುವ ನೀರು ಸೇರಿ ಮೂಲಸೌಲಭ್ಯ ಒದಗಿಸಬೇಕು ಎಂದು ಆಗ್ರಹಿಸಿದರು. ಪ್ರಮುಖರಾದ ರವಿ ಎಚ್., ಬಸವರಾಜ ಬಿ., ಮಾಲತೇಶ ಕೆ., ಮಹಾದೇವ ಕೆ. ಸೇರಿ ನೂರಾರು ಜನ ಮತದಾರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net