

ಪರಶುರಾಮ ಕೆರಿ ಹಾವೇರಿ
ಸ್ಥಳೀಯ ಎಪಿಎಂಸಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಗೆ ಜೂ. 15ರಂದು ಮಹೂರ್ತ ನಿಗದಿ ಯಾಗಿದ್ದು, ಆಕಾಂಕ್ಷಿಗಳ ಚಟುವಟಿಕೆಗಳು ಗರಿಗೆದರಿವೆ.
ಎಪಿಎಂಸಿ ಮೂವರು ನಾಮನಿರ್ದೇಶಿತ ಸದಸ್ಯರು ಹಾಗೂ ಚುನಾಯಿತ 16 ಸದಸ್ಯ ಬಲ ಹೊಂದಿದೆ. ಇದರಲ್ಲಿ ಬಿಜೆಪಿ ಬೆಂಬಲಿತರು 11 ಹಾಗೂ ಕಾಂಗ್ರೆಸ್ ಬೆಂಬಲಿತ ಐವರು ಸದಸ್ಯರಿದ್ದು, ಕಮಲ ಪಾಳಯ ಸಂಪೂರ್ಣ ಬಹುಮತದೊಂದಿಗೆ ಗಾದಿಗೇರಲು ಕಾತುರವಾಗಿದೆ. 20 ತಿಂಗಳ ಅವಧಿಗೆ ಈ ಚುನಾವಣೆ ನಡೆಯಲಿದೆ.
ಲಾಟರಿ ನೀಡಿದ್ದ ಅಧಿಕಾರ: ಹಿಂದಿನ 20 ತಿಂಗಳ ಅವಧಿಯಲ್ಲಿ ಕಾಂಗ್ರೆಸ್ ಪಕ್ಷ ಅಂದಿನ ಸರ್ಕಾರ ನೇಮಿಸಿದ ಮೂವರು ನಾಮನಿರ್ದೇಶಿತ ಸದಸ್ಯರ ಬಲದೊಂದಿಗೆ 8 ಮತಗಳನ್ನು ಪಡೆದು ಬಿಜೆಪಿ ಅಭ್ಯರ್ಥಿಯೊಂದಿಗೆ ಸಮಬಲ ಸಾಧಿಸಿತ್ತು. ಆಗ ಲಾಟರಿ ಎತ್ತಿದ ಪರಿಣಾಮ ಕಾಂಗ್ರೆಸ್ ಕೈ ಮೇಲಾಗಿ 20 ತಿಂಗಳು ಅಧಿಕಾರ ನಡೆಸಿತು.
ನಾಲ್ವರು ಆಕಾಂಕ್ಷಿಗಳು: ತಲಾ 20 ತಿಂಗಳಂತೆ ಒಟ್ಟು ಮೂರು ಅವಧಿಗೆ ಎಪಿಎಂಸಿಯಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆ ನಡೆಯುತ್ತದೆ. ಅದರಲ್ಲಿ ಮೊದಲ 20 ತಿಂಗಳ ಅವಧಿಯಲ್ಲಿ ಬಿಜೆಪಿ ಬೆಂಬಲಿತ ಮಲ್ಲಿಕಾರ್ಜುನ ಹಾವೇರಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಸಮ ಮತ ಪಡೆದು ಲಾಟರಿ ಅದೃಷ್ಟದಾಟದಲ್ಲಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. 15 ತಿಂಗಳ ಅಧಿಕಾರ ನಡೆಸಿ ಅವರು ರಾಜೀನಾಮೆ ಕೊಟ್ಟ ನಂತರ ಉಳಿದ ಅವಧಿಗೆ ಬಿಜೆಪಿ ಬೆಂಬಲಿತ ಗೌಡಪ್ಪಗೌಡ ಪಾಟೀಲ ಆಯ್ಕೆಯಾಗಿದ್ದರು. ಈ ಸಾರಿ ರುದ್ರೇಶ ಚಿನ್ನಣ್ಣನವರ, ಚನ್ನಬಸಪ್ಪ ಕೋಡಿಹಳ್ಳಿ ಅಧ್ಯಕ್ಷ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ರುದ್ರೇಶ ಚಿನ್ನಣ್ಣನವರ ಯುವಕರ ಕೋಟಾದಲ್ಲಿ
ತಮಗೆ ಅವಕಾಶ ನೀಡುವಂತೆ ಕೇಳುತ್ತಿದ್ದರೆ, ಹಿರಿಯರ ಕೋಟಾದಲ್ಲಿ ಈ ಸಾರಿ ತಮಗೇ ಅವಕಾಶ ನೀಡಬೇಕು ಎಂದು ಚನ್ನಬಸಪ್ಪ ಕೋಡಿಹಳ್ಳಿ ವರಿಷ್ಠರ ಬೆನ್ನು ಬಿದ್ದಿದ್ದಾರೆ. ಇನ್ನು ಈ ಹಿಂದೆ ಅಧ್ಯಕ್ಷರಾಗಿದ್ದ ಮಲ್ಲಿಕಾರ್ಜುನ ಹಾವೇರಿ, ಗೌಡಪ್ಪಗೌಡ ಪಾಟೀಲ ಅವರು ತಮಗೂ ಇನ್ನೊಂದು ಸಾರಿ ಅವಕಾಶ ನೀಡಬೇಕು ಎಂದು ವರಿಷ್ಠರಲ್ಲಿ ಬೇಡಿಕೆಯಿಟ್ಟಿದ್ದಾರೆ.
ಹಿಂದೆಯೂ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದೆ. ಪಕ್ಷದ ಹಿರಿಯರು ಮುಂದೆ ಅವಕಾಶ ಕಲ್ಪಿಸುವ ಭರವಸೆ ನೀಡಿದ್ದರು. ಅದರಂತೆ ಜಿಲ್ಲಾ ಕೇಂದ್ರ ಸ್ಥಾನದ ಸದಸ್ಯನಾಗಿದ್ದು, ಈ ಸಾರಿ ಅವಕಾಶ ಕಲ್ಪಿಸುವ ಭರವಸೆಯಿದೆ. ಅದಕ್ಕಾಗಿ ಎಲ್ಲ ಪ್ರಯತ್ನವನ್ನೂ ನಡೆಸಿದ್ದೇನೆ.| ರುದ್ರೇಶ ಚಿನ್ನಣ್ಣನವರ ಎಪಿಎಂಸಿ ಸದಸ್ಯನಾನು ಹಿರಿಯ ಸದಸ್ಯ. ರೈತರ ಸಮಸ್ಯೆಗಳ ಅರಿವಿದೆ. ಹೀಗಾಗಿ ನನಗೆ ಅವಕಾಶ ಕೊಡಿ ಎಂದು ವರಿಷ್ಠರಲ್ಲಿ ವಿನಂತಿಸಿದ್ದೇನೆ. ಅವಕಾಶ ಸಿಗುವ ಭರವಸೆ ಇದೆ.| ಚನ್ನಬಸಪ್ಪ ಕೋಡಿಹಳ್ಳಿ ಎಪಿಎಂಸಿ ಸದಸ್ಯ