

ಹನೂರು: ತಾಲೂಕಿನ ಬಂಡಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಪಡಿತರ ಪಡೆದುಕೊಳ್ಳಬೇಕಾದರೆ ಬಿಸಿಲಿನಲ್ಲಿ ಗಂಟೆಗಟ್ಟಲೇ ಕಾದು ನಿಲ್ಲಬೇಕಿದ್ದು, ಇದರಿಂದ ತೊಂದರೆ ಅನುಭವಿಸುವಂತಾಗಿದೆ.
ಈ ಸಹಕಾರ ಸಂಘದಲ್ಲಿ ಪಡಿತರವನ್ನು ನೀಡಲಾಗುತ್ತಿದೆ. ಆದರೆ ಇಲ್ಲಿನ ಕಾರ್ಯನಿರ್ವಾಹಕರು ಸರಿಯಾದ ಸಮಯಕ್ಕೆ ಆಗಮಿಸುತ್ತಿಲ್ಲ. ಜತೆಗೆ ಕುಡಿಯುವ ನೀರು ಹಾಗೂ ನೆರಳಿನ ವ್ಯವಸ್ಥೆ ಇಲ್ಲದ ಪರಿಣಾಮ ಭಾನುವಾರ ಆಗಮಿಸಿದ್ದ ಗ್ರಾಹಕರು ಸುಮಾರು 2 ಗಂಟೆಗಳ ಕಾಲ ಬಿಸಿಲಿನಲ್ಲೇ ಕಾದು ನಿಂತು ತೊಂದರೆ ಅನುಭವಿಸಿದರು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರು ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೀಗ ಬಿಸಿಲು ಹೆಚ್ಚಾಗಿದೆ. ಆದರೆ ಸೊಸೈಟಿಯಲ್ಲಿ ಕುಡಿಯುವ ನೀರು ಹಾಗೂ ನೆರಳಿನ ವ್ಯವಸ್ಥೆ ಇಲ್ಲದ ಪರಿಣಾಮ ಜನರು ಅದರಲ್ಲೂ ವೃದ್ಧರು ಪಡಿತರವನ್ನು ಪಡೆಯಬೇಕಾದರೆ ಹೆಚ್ಚಿನ ತೊಂದರೆ ಅನುಭವಿಸುವಂತಾಗಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಅಗತ್ಯ ಕ್ರಮಕೈಗೊಂಡು ಜನರಿಗೆ ಅನುಕೂಲ ಕಲ್ಪಿಸುವಂತೆ ಸದಾಶಿವ ಸಾರ್ವಜನಿಕರು ಒತ್ತಾಯಿಸಿದ್ದಾರೆ.