ಸೂಕ್ತ ದಾಖಲೆಗಳಿದ್ದರೆ ಮರಳಿ ಭೂಮಿ ಕೊಡಿಸುವೆ

9-kgl-1.,
Published on

ಕೊಳ್ಳೇಗಾಲ: ನನ್ನ ತಂದೆ ದಿ.ಬಿ.ರಾಚಯ್ಯ ಅವರು ಈ ಹಿಂದೆ ಜನರಿಗೆ ಸರ್ಕಾರದಿಂದ ಕೊಡಿಸಿದ್ದ ಸಾಗುವಳಿ ಭೂಮಿಯನ್ನು ಸಮರ್ಪಕವಾಗಿ ಅರ್ಹರಿಗೆ ತಲುಪಿಸಬೇಕು ಎಂಬುದು ನನ್ನ ಕನಸಾಗಿದೆ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು.


ಪಟ್ಟಣದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪೀಪಲ್ ಫಾರ್ ಫಾರೆಸ್ಟ್ ಆ್ಯಂಡ್ ವೈಲ್ಡ್ ಲೈಫ್ ಕನ್ಸರ್ವೇಷನ್-ಕರ್ನಾಟಕ (ಪಿಎಫ್‌ಡಬ್ಲ್ಯುಸಿಕೆ) ಹಾಗೂ ಅರಣ್ಯ ಇಲಾಖೆ ಸಹಯೋಗದಲ್ಲಿ ಏರ್ಪಡಿಸಿದ್ದ ಅರಣ್ಯ ವೀಕ್ಷಕರಿಗೆ ಸುರಕ್ಷತಾ ಪರಿಕರಗಳ ವಿತರಣಾ ಕಾರ್ಯಕ್ರಮ ಮತ್ತು ಪಿಎಫ್‌ಡಬ್ಲ್ಯುಸಿಕೆ ಸಂಸ್ಥೆಯ 3ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.


ದಿ.ಬಿ.ರಾಚಯ್ಯ ಅವರು ಹಿಂದೆ ಅರಣ್ಯ ಹಾಗೂ ಕಂದಾಯ ಸಚಿವರಾಗಿ ಬಹಳಷ್ಟು ಉತ್ತಮ ಕೆಲಸ ಮಾಡಿದ್ದಾರೆ. ಅರಣ್ಯ ಭೂಮಿಯನ್ನು ಕಂದಾಯ ಭೂಮಿಯಾಗಿ ಪರಿವರ್ತಿಸಿ, ಹಿಂದುಳಿದ ಎಲ್ಲ ಜನರಿಗೆ ಅರಣ್ಯ ದಂಚಿನಲ್ಲಿ ಸಾಗುವಳಿ ಮಾಡಲು ಭೂಮಿ ಕೊಡಿಸಿದ್ದರು. ಇದ್ದರಿಂದ ಎಷ್ಟೋ ಜನರು ಬದುಕು ಕಟ್ಟಿಕೊಂಡಿದ್ದಾರೆ ಎಂದರು.


ಇದೀಗ ಕೆಲವರಿಗೆ ಆ ಭೂಮಿಯಲ್ಲಿ ಸಾಗುವಳಿ ಮಾಡಲು ಅವಕಾಶ ಸಿಕ್ಕಿಲ್ಲ. ಅರಣ್ಯ ಇಲಾಖೆಯಲ್ಲಿ ಸಾಕಷ್ಟು ಕಾನೂನು ಬದಲಾವಣೆ ಆಗಿದೆ. ನಮ್ಮ ಜಮೀನಿಗೆ ಅರಣ್ಯ ಇಲಾಖೆ ಬೇಲಿ ಹಾಕಿದೆ ಎಂದು ರೈತರು ನನ್ನ ಬಳಿ ಅಳಲು ತೋಡಿಕೊಂಡಿದ್ದಾರೆ. ನಾನು ಅವರಿಗೆ ಸ್ಪಂದಿಸಿದ್ದೇನೆ. ಈ ನಿಟ್ಟಿನಲ್ಲಿ ಸರ್ಕಾರ ಮರು ಸರ್ವೇ ಮಾಡುವಂತೆ ಸೂಚನೆ ನೀಡಿದೆ. ಅದರಂತೆ ಸೂಕ್ತ ದಾಖಲೆಗಳಿದ್ದರೆ ಅರಣ್ಯ ಇಲಾಖೆ ವಶಕ್ಕೆ ಪಡೆದ ಭೂಮಿಯನ್ನು ಜನರಿಗೆ ಬಿಡಿಸಿಕೊಡುವ ಕೆಲಸವನ್ನು ಮಾಡುತ್ತೇನೆ ಎಂದು ಭರವಸೆ ನೀಡಿದರು.


ಫಾರೆಸ್ಟ್ ಆ್ಯಂಡ್ ವೈಲ್ಡ್ ಲೈಫ್ ಕನ್ಸರ್ವೇಷನ್ ಸಂಸ್ಥೆ ಸಿಇಒ ನವೀನ್ ನಿಶ್ಚಲ್ ಮಾತನಾಡಿ, ಕಾಡುಪ್ರಾಣಿ ಹಾಗೂ ಮಾನವ ಸಂಕುಲ ಉಳಿಯಬೇಕಾದರೆ ಅರಣ್ಯ ಉಳಿಯಬೇಕು. ವಿದೇಶದಲ್ಲಿರುವ ಕನ್ನಡಿಗರ ಸಹಕಾರ ಪಡೆದು ಕಾಡು ಉಳಿಸುವ ಕೆಲಸ ಮಾಡಲಾಗುತ್ತಿದೆ. ಜನರಿಗೆ ಕಾಡಿನ ಮೌಲ್ಯದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇವೆ ಎಂದು ಹೇಳಿದರು.
ಮಲೆ ಮಹದೇಶ್ವರ ಬೆಟ್ಟ ವನ್ಯಜೀವಿ ಧಾಮದ ಡಿಸಿಎಫ್ ಸಂತೋಷ್ ಕುಮಾರ್ ಮಾತನಾಡಿದರು. ಎಸಿಎಫ್ ಶಿಶಿಧರ್, ಚಂದ್ರಶೇಖರ್ ಪಾಟೀಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net