ವಿಪಕ್ಷಗಳ ಮೇಲೆ ಕೈ ದ್ವೇಷದ ರಾಜಕಾರಣ

nikhil
Published on

ಕನಕಪುರ: ಗಿಫ್ಟ್‌ಕೂಪನ್, ಗ್ಯಾರಂಟಿ ಯೋಜನೆಗಳನ್ನೇ ನಿಜವಾದ ಅಭಿವೃದ್ಧಿ ಎಂದು ಜನರನ್ನು ವಂಚಿಸುತ್ತಿರುವ ಕಾಂಗ್ರೆಸ್, ಸರ್ಕಾರ ಇತ್ತೀಚಿನ ದಿನಗಳಲ್ಲಿ ವಿಪಕ್ಷಗಳ ಮೇಲೆ ದ್ವೇಷ ರಾಜಕಾರಣ ಮಾಡುತ್ತಾ ಜನರ ವಿಶ್ವಾಸ ಕಳೆದುಕೊಳ್ಳುತ್ತಿದೆ ಎಂದು ಜೆಡಿಎಸ್ ಯುವಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅಭಿಪ್ರಾಯಪಟ್ಟರು.

ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜಿಲ್ಲಾ ಜೆಡಿಎಸ್ ಸದಸ್ಯತ್ವ ಅಭಿಯಾನದಲ್ಲಿ ಮಾತನಾಡಿ, ರಾಮನಗರ ವಿಧಾನಸಭಾ ಕ್ಷೇತ್ರದ ಕಳೆದ ಚುನಾವಣೆಯಲ್ಲಿ ಜನರಿಗೆ ಕೂಪನ್‌ಕಾರ್ಡ್ ಹಾಗೂ ಹಲವು ಪೊಳ್ಳು ಭರವಸೆ ಒಡ್ಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಈಗ ಜನರ ಪಾಲಿಗೆ ಇಲ್ಲದಂತಾಗಿದೆ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್‌ನ ಭ್ರಷ್ಟಾಚಾರದ ವಿರುದ್ಧ ಜೆಡಿಎಸ್ ಹಾಗೂ ಬಿಜೆಪಿ ಧ್ವನಿ ಎತ್ತಲು ಮೈತ್ರಿ ಮಾಡಿಕೊಳ್ಳಲಾಯಿತು. ಇದರಿಂದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲು ಕಂಡರೂ ವಿಧಾನಸಭಾ ಕ್ಷೇತ್ರದಲ್ಲಿ ಗಳಿಸಿರುವ 136 ಸೀಟುಗಳನ್ನೇ ಮುಂದಿಟ್ಟುಕೊಂಡು ವಿಪಕ್ಷಗಳನ್ನು ಬೆದರಿಸುವ ತಂತ್ರ ಮಾಡುತ್ತಿದೆ ಎಂದರು.

ಕನಕಪುರ ಕ್ಷೇತ್ರದಲ್ಲಿ ಪಕ್ಷ ಸ್ವಾಭಿಮಾನಿ ಮತದಾರರು ಹಾಗೂ ಕಾರ್ಯಕರ್ತರನ್ನು ಹೊಂದಿದೆ. ಆದರೂ ರಾಜಕೀಯ ತಂತ್ರ-ಕುತಂತ್ರಗಳಿಂದ ಇಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುತ್ತಿದೆ. ಮೈತ್ರಿ ಅಭ್ಯರ್ಥಿ ಡಾ.ಸಿ.ಎನ್. ಮಂಜುನಾಥ್ ಅವರಿಗೆ ಲೋಕಸಭಾ ಚುನಾವಣೆಯಲ್ಲಿ ಕನಕಪುರ ಕ್ಷೇತ್ರದಲ್ಲಿ 83 ಸಾವಿರ ಮತ ನೀಡಿ ಜನ ಆಶೀರ್ವದಿಸಿದ್ದಾರೆ.

ಮುಂಬರುವ ಸ್ಥಾನಿಕ ಚುನಾವಣೆಗಳಲ್ಲಿ ಪಕ್ಷವು ಬಲವರ್ಧನೆಯಾಗಬೇಕು. ತಾಪಂ, ಜಿಪಂ ಸೇರಿ ಅನೇಕ ಚುನಾವಣೆಗಳನ್ನು ಪಕ್ಷ ಗಂಭೀರವಾಗಿ ಪರಿಗಣಿಸಿದೆ, ಪಕ್ಷ ಸಂಘಟನೆಯಲ್ಲಿ ಪ್ರತಿಯೊಬ್ಬರೂ ತೊಡಗಿಸಿಕೊಳ್ಳಬೇಕು ಎಂದರು.

ಗ್ಯಾರಂಟಿ ಯೋಜನೆಯನ್ನೇ ನಿಜವಾದ ಅಭಿವೃದ್ಧಿಯೆಂದು ಅಧಿಕಾರ ಹಿಡಿದ ಕಾಂಗ್ರೆಸ್, ವಿಪಕ್ಷದವರನ್ನು ಹೆಣೆಯುವ ನಿಟ್ಟಿನಲ್ಲಿ ದ್ವೇಷದ ರಾಜಕಾರಣ ಮಾಡುತ್ತಿದ್ದು, ಭ್ರಷ್ಟಾಚಾರವನ್ನು ಮುಚ್ಚಿಹಾಕಿಕೊಳ್ಳಲು ಪ್ರತಿ ಪಕ್ಷದ ನಾಯಕರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸುತ್ತಿದ್ದಾರೆ. ಇವರ ಎಲ್ಲ ಭ್ರಷ್ಟಾಚಾರ ತಂತ್ರ-ಕುತಂತ್ರಗಳು ಜನರ ಮುಂದೆ ಬಯಲಾಗಿವೆ. ಇದಕ್ಕೆಲ್ಲ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ತಕ್ಕ ಬೆಲೆ ತರಬೇಕಾಗುತ್ತದೆ ಎಂದರು.

ಜಿಲ್ಲೆಯಲ್ಲಿ ಜೆಡಿಎಸ್‌ಅನ್ನು ಪುನಃಶ್ಚೇತನಗೊಳಿಸುವ ನಿಟ್ಟಿನಲ್ಲಿ ಕನಕಪುರದಿಂದ ಸದಸ್ಯತ್ವ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಮುಂದೆ ಮಧ್ಯಂತರ ಚುನಾವಣೆ ಬಂದರೂ ಬರಬಹುದು. ಅದಕ್ಕಾಗಿ ಈಗಿನಿಂದಲೇ ಪಕ್ಷಕ್ಕೆ ಮತ್ತಷ್ಟು ಬಲತುಂಬಿ ಸಮರ್ಥವಾಗಿ ಎದುರಿಸಬೇಕಾಗಿದೆ ಎಂದು ಎಸ್‌ಸಿ, ಎಸ್‌ಟಿ ಘಟಕದ ಜೆಡಿಎಸ್ ಅಧ್ಯಕ್ಷ ಅನ್ನದಾನಿ ಹೇಳಿದರು.

ಡಿ.ಕೆ.ಸಹೋದರರ ಆಳ್ವಿಕೆಯಲ್ಲಿ ದೌರ್ಜನ್ಯ, ದಬ್ಬಾಳಿಕೆ, ದಲಿತರ ಸಾವು-ನೋವುಗಳು ಆಗುತ್ತಿವೆ.ಮತಬ್ಯಾಂಕ್‌ಗೋಸ್ಕರ ವಿಪಕ್ಷಗಳ ಮೇಲೆ ದಲಿತ ವಿರೋಧಿ ಪಟ್ಟಕಟ್ಟುತ್ತಿದ್ದಾರೆ. ಜಾತಿ-ಧರ್ಮವಿಲ್ಲದೇ ಎಲ್ಲರೂ ಸದಸ್ಯತ್ವ ನೊಂದಣಿಯಲ್ಲಿ ಭಾಗವಹಿಸಬೇಕು ಎಂದು ಮುಖಂಡರಾದ ಸುರೇಶ್‌ಬಾಬು, ಎ.ಮಂಜುನಾಥ್, ಚಿನ್ನಸ್ವಾಮಿ ಹೇಳಿದರು.

ಮಾಜಿ ಶಾಸಕ ಸುರೇಶ್‌ಗೌಡ, ಕನಕಪುರ ತಾಲೂಕು ಅಧ್ಯಕ್ಷ ಬಿ.ನಾಗರಾಜು, ಚನ್ನಪಟ್ಟಣ ಅಧ್ಯಕ್ಷ ಜಯಮುತ್ತು, ಮಾಗಡಿ ಅಧ್ಯಕ್ಷ ಶಿವಲಿಂಗಯ್ಯ, ಕಾನೂನು ಸಲಹೆಗಾರ ಎಪಿ ರಂಗನಾಥ್, ಪೈಲ್ವಾನ್ ಪುಟ್ಟರಾಜು, ಸಿದ್ದಮರಿಗೌಡ, ಸ್ಟುಡಿಯೋಚಂದ್ರು, ಕೊತ್ತನೂರು ನಾರಾಯಣ್, ಕಬ್ಬಾಳೇಗೌಡ, ರಾಜೇಶ್, ನೀಲಮ್ಮಸುರೇಶ್, ಫೋಟೋಸಿದ್ದು ಇದ್ದರು.

ದ್ವೇಷದ ರಾಜಕಾರಣ

ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಪತ್ರಬರೆದ ಐಪಿಎಸ್ ಅಧಿಕಾರಿ ಚಂದ್ರಶೇಖರ್ ಮೂಲಕ ದ್ವೇಷದ ರಾಜಕಾರಣ ಮಾಡಲಾಗುತ್ತಿದೆ. ಜೆಡಿಎಸ್ ಬಗ್ಗೆ ನಿತ್ಯ ದ್ವೇಷದ ಕಿಡಿ ಕಾರುತ್ತಿರುವ ಕೈ ನಾಯಕರು, ಈ ಹಿಂದೆ ಮೈತ್ರಿ ಪಕ್ಷವನ್ನು ಅಧಿಕಾರಕ್ಕೆ ತರಲು ಕುಮಾರಸ್ವಾಮಿ ಅವರ ಮನೆಬಾಗಿಲು ತಟ್ಟಿ ಮುಖ್ಯಮಂತ್ರಿ ಪಟ್ಟವನ್ನೂ ಕೊಟ್ಟರೂ. ಮೈತ್ರಿ ಧರ್ಮವನ್ನು ಪಾಲಿಸಲಾಗದೆ ಅವರೇ ಸರ್ಕಾರ ಉರುಳಿಸಲು ಕಾರಣರಾದರು ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷದಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಅಂದು ಡಿ.ಕೆ.ಸುರೇಶ್ ಗೆಲುವು ಸಾಧಿಸಿದ್ದರು ಎಂದ ಅವರು, ಚನ್ನಪಟ್ಟಣದ ಉಪಚುನಾವಣೆಯಲ್ಲಿ ನನ್ನ ಹೆಸರನ್ನು ಮಾಧ್ಯಮದವರು ಬಿತ್ತರಿಸುತ್ತಿದ್ದಾರೆ. ಅಲ್ಲಿಯೂ ಡಿಸಿಎಂ ಅಭಿವೃದ್ಧಿ ಮಾತನ್ನು ಆಡುತ್ತಿದ್ದಾರೆ. ಆದರೆ ಚುನಾವಣೆ ಫಲಿತಾಂಶದ ಬಳಿಕ ಮತದಾರರು ಅವರಿಗೆ ಉತ್ತರ ನೀಡಲಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net