

ಹಟ್ಟಿಚಿನ್ನದಗಣಿ: ಚಿನ್ನದಗಣಿ ಕಂಪನಿಯ ಮಲ್ಲಪ್ಪ ಶಾಫ್ಟ್ನಲ್ಲಿ ಭದ್ರತಾ ನಿರೀಕ್ಷಕನ ಅನುಚಿತ ವರ್ತನೆ ಖಂಡಿಸಿ 1,500 ಕಾರ್ಮಿಕರು ಧಿಡೀರ್ ಪ್ರತಿಭಟನೆ ನಡೆಸಿದ ಘಟನೆ ಘಟನೆ ಗುರುವಾರ ನಡೆದಿದೆ.
ಬೆಳಗಿನ ಪಾಳಯ ಮುಗಿಸಿ ಮಧ್ಯಾಹ್ನ 2.30ಕ್ಕೆ ಹೊರ ಬರಬೇಕಿದ್ದ ಕಾರ್ಮಿಕರು ಹೊರಗಡೆ ಬಾರದೆ ಹಾಗೂ ಮಧ್ಯಾಹ್ನದ ಪಾಳೆಗೆ ಹೋಗುವ ಕಾರ್ಮಿಕರು ಕತರ್ರ್ವ್ಯಕ್ಕೆ ಹಾಜರಾಗದೆ ಮುಖ್ಯ ದ್ವಾರವನ್ನು ಒಂದೂವರೆ ಗಂಟೆ ಬಂದ್ ಮಾಡಿ ಬೃಹತ್ ಪ್ರತಿಭಟನೆ ನಡೆಸಿದರು.
ಕಾರಣವೇನು?: 2.30ಕ್ಕೆ ಹೊರಗೆ ಬಿಡುವಾಗ ಇನ್ನು ಒಂದು ನಿಮಿಷ ಬಾಕಿ ಇದೆ ನೀವು ಹೇಗೆ ಹೊರಗೆ ಹೋಗುತ್ತೀರಿ ಎಂದು ಪಾನಮತ್ತರಾದ ಸಿಬ್ಬಂದಿಯೋರ್ವ ಕಾರ್ಮಿಕರನ್ನು ತಳ್ಳಿದ್ದಾರೆ. ಕುಡಿದು ಅಸಭ್ಯವಾಗಿ ವರ್ತಿಸಿದ ಸಿಬ್ಬಂದಿ ನಡೆ ಖಂಡಿಸಿ ಮಲ್ಲಪ್ಪ ಶಾಫ್ಟಿನ ಪ್ರವೇಶ ದ್ವಾರವನ್ನು ಬಂದ್ ಮಾಡಿದ ಕಾರ್ಮಿಕರು, ಭದ್ರತಾ ಸಿಬ್ಬಂದಿ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.
ಕಾರ್ಮಿಕರನ್ನು ಬೆಂಬಲಿಸಿ ಕಾರ್ಮಿಕ ಸಂಘದ ಚುನಾಯಿತ ಪ್ರತಿನಿಧಿಗಳಾದ ವೆಂಕೋಬ್ ಮಿಯ್ಯಪೂರ್, ಶಾಂತಪ್ಪ ಆನ್ವರಿ, ತಿಪ್ಪಣ್ಣ ಮಾಚನೂರು, ದುರುಗಪ್ಪ ಚಿಕ್ಕನಗನೂರು, ಹನುಮಂತಗೌಡ ಗುರಿಕಾರ್, ಸೋಮಣ್ಣ, ಮೈನುದ್ದೀನ್, ಗೌಸ್ಮಿಯಾ, ರಾಮಣ್ಣ ವಂದಲಿ ಬೆಂಬಲ ವ್ಯಕ್ತಪಡಿಸಿ ಭದ್ರತಾ ಸಿಬ್ಬಂದಿ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಸ್ಥಳಕ್ಕೆ ಗಣಿ ಕಂಪನಿ ಪ್ರಧಾನ ವ್ಯವಸ್ಥಾಪಕ ಹನುಮಂತಪ್ಪ ನೀರಮಾನ್ವಿ, ವ್ಯವಸ್ಥಾಪಕರಾದ ಸುರೇಶ್ ಆರ್.ಸಿ. ಹಾಗೂ ಹಟ್ಟಿ ಠಾಣೆ ಸಿಪಿಐ ಪ್ರಕಾಶ್ ಎಲ್. ಮಾಳಿ, ಕಂಪನಿ ಮುಖ್ಯ ಭದ್ರತಾಧಿಕಾರಿ ಬಾಲಚಂದ್ರ ನರಸನಗಿ ಹಾಗೂ ಪೊಲೀಸ್ ಸಿಬ್ಬಂದಿ ಹುಚ್ಚರೆಡ್ಡಿ, ನಾರಾಯಣ ಬಸವರಾಜ್, ಲಕ್ಷ್ಮಣ್, ಕಾರ್ಮಿಕರ ಸಮಸ್ಯೆ ಆಲಿಸಿ ಕರ್ತವ್ಯಕ್ಕೆ 15 ನಿಮಿಷ ತಡವಾಗಿ ಹಾಜರಾಗಲು ಅನುಮತಿ ನೀಡಲಾಗುವುದು ಹಾಗೂ ಕರ್ತವ್ಯ ಮರೆತು ಅನುಚಿತವಾಗಿ ಕಾರ್ಮಿಕರೊಡನೆ ವರ್ತಿಸಿದ ಭದ್ರತಾ ಸಿಬ್ಬಂದಿಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿ ಮುಂದಿನ ಕ್ರಮಕೈಗೊಳ್ಳಲಾಗುವುದೆಂದು ಭರವಸೆ ನೀಡಿದ ನಂತರ ಮುಖ್ಯ ದ್ವಾರ ತೆಗೆದು ಬೆಳಗಿನ ಪಾಳೆಯದವರು ಹೊರಗೆ ಹಾಗೂ ಎರಡನೆ ಪಾಳೆಯದ ಕಾರ್ಮಿಕರು ಕರ್ತವ್ಯಕ್ಕೆ ಹಾಜರಾದರು.