ಹ್ಯಾಟ್ರಿಕ್​ ಸೋಲೋ, ಸರಪಳಿ ಮುಕ್ತಿಯೋ?

Published on

*ಹೈ ವೋಲ್ಟೇಜ್​ ಕ್ಷೇತ್ರ ಚನ್ನಪಟ್ಟಣ ಅಭ್ಯರ್ಥಿಗಳಿಗೆ ಎರಡರಲ್ಲೊಂದು ಪಟ್ಟ ಫಿಕ್ಸ್​

ಗಂಗಾಧರ್​ ಬೈರಾಪಟ್ಟಣ ರಾಮನಗರ

ಹೈ ವೋಲ್ಟೇಜ್​ ಕ್ಷೇತ್ರ ಚನ್ನಪಟ್ಟಣದಲ್ಲಿ ಈಗ ಹ್ಯಾಟ್ರಿಕ್​ ಸೋಲು ಯಾರಿಗೆ ಎನ್ನುವ ಚರ್ಚೆ ಜೋರಾಗಿದೆ. ಅಂತಿಮ ಕ್ಷಣದಲ್ಲಿ ಕಾಂಗ್ರೆಸ್​ನಿಂದ ಸ್ಪರ್ಧಿಸಿದ ಸಿ.ಪಿ.ಯೋಗೇಶ್ವರ್​ ಮತ್ತು ಎನ್​ಡಿಎ ಅಭ್ಯರ್ಥಿ ನಿಖಿಲ್​ ಕುಮಾರಸ್ವಾಮಿ ಇಬ್ಬರೂ ಈ ಹಿಂದೆ ಸ್ಪರ್ಧೆ ಮಾಡಿದ ಎರಡು ಚುನಾವಣೆಗಳಲ್ಲಿ ಸೋಲು ಕಂಡಿದ್ದು, ಯಾರೇ ಗೆದ್ದರೂ ಸೋಲಿನ ಸರಪಳಿ ತುಂಡಾಗಲಿದ್ದು, ಮತ್ತೊಬ್ಬರಿಗೆ ಹ್ಯಾಟ್ರಿಕ್​ ಸೋಲಾಗಲಿದೆ.

ಸೋಲುಂಡವರೇ?

ಕಾಂಗ್ರೆಸ್​ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್​ 5 ಬಾರಿ ಶಾಸಕರಾಗಿದ್ದರೂ, ಸತತ ಎರಡು ಸೋಲುಗಳನ್ನು ಅವರಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನೀರಾವರಿ ಯೋಜನೆ ಜಾರಿ ಹೊರತಾಗಿಯೂ ಚನ್ನಪಟ್ಟಣ ಕ್ಷೇತ್ರದ ಮತದಾರರು 2018 ಮತ್ತು 23ರ ಚುನಾವಣೆಯಲ್ಲಿ ಸೋಲು ಉಣಿಸಿದರು. ಅದಾಗಲೇ 5 ಬಾರಿ ಶಾಸಕರಾಗಿ, ಮಂತ್ರಿಯಾಗಿ ಅಧಿಕಾರ ಅನುಭವಿಸಿದವರು. ಆದರೆ, ಸತತ ಎರಡು ಸೋಲು ಸಿಪಿವೈ ರಾಜಕೀಯ ದಿಕ್ಕನ್ನೇ ಬದಲಿಸಿದೆ. ಈಗ ಅವರು ಮತ್ತೊಮ್ಮೆ ಅದೃಷ್ಟ ಪರೀಕ್ಷೆ ಸಜ್ಜಾಗಿದ್ದು, ಮತದಾರರ ತೀರ್ಪು ಅವರ ರಾಜಕೀಯ ಜೀವನ ನಿರ್ಧಾರ ಮಾಡಲಿದೆ.

ಎನ್​ಡಿಎ ಅಭ್ಯರ್ಥಿ ನಿಖಿಲ್​ ಕುಮಾರಸ್ವಾಮಿ, ಜೆಡಿಎಸ್​ನ ಭವಿಷ್ಯದ ನಾಯಕ. ಪಕ್ಷಕ್ಕೆ ಅವರೇ ಉತ್ತರಾಧಿಕಾರಿ. ಅವರಿಗೆ ರಾಜಕೀಯ ನೆಲೆ ಕಂಡುಕೊಡಬೇಕು ಎನ್ನುವ ಕುಟುಂಬದ ಸದಸ್ಯರ ಹೋರಾಟ ಎರಡು ಚುನಾವಣೆಗಳಲ್ಲಿ ಯಶಸ್ಸು ತಂದುಕೊಡಲಿಲ್ಲ.

2019ರಲ್ಲಿ ಮಂಡ್ಯದಿಂದ ಲೋಕಸಭೆ ಪ್ರವೇಶದ ಕನಸು ಕಂಡಿದ್ದ ನಿಖಿಲ್​ ಅವರಿಗೆ ಮೊದಲ ಪ್ರಯತ್ನವೇ ಆಘಾತ ನೀಡಿತು. ನಂತರ ಕಳೆದ ವಿಧಾನಸಭೆ ಚುನಾವಣೆಯಲ್ಲೂ ರಾಮನಗರದ ರಾಜಕೀಯ ಲೆಕ್ಕಾಚಾರ ಏರುಪೇರಾಗಿ, ಎರಡನೇ ಸೋಲು ಅನುಭವಿಸಿದರು. ಪಕ್ಷ ರಾಜ್ಯದಲ್ಲಿ ಬಲಿಷ್ಠವಾಗಿ ಬೆಳೆಯಬೇಕಾದರೆ ಹಾಗೂ ರಾಜಕೀಯ ಭವಿಷ್ಯ ಉಜ್ವಲವಾಗಬೇಕಾದರೆ ಈ ಬಾರಿ ಅವರಿಗೆ ಗೆಲುವು ಅನಿವಾರ್ಯ.

ಹುರುಪು ತಂದ ಎಕ್ಸಿಟ್​ ಪೋಲ್​

ಚನ್ನಪಟ್ಟಣ ಜೆಡಿಎಸ್​ ಕಾರ್ಯಕರ್ತರಲ್ಲಿ ಬುಧವಾರ ಸಂಜೆ ಪ್ರಕಟಗೊಂಡ ಎಕ್ಸಿಟ್​ ಪೋಲ್​ ಹುರುಪು ತಂದಿದೆ. ಅಬ್ಬರದಿಂದ ಚುನಾವಣೆ ಎದುರಿಸಿದ ಜೆಡಿಎಸ್​ ಕಾರ್ಯಕರ್ತರು ನಂತರ ಸೋಲು&ಗೆಲುವಿನ ಲೆಕ್ಕಾಚಾರದಲ್ಲಿ ಹಿಂದೆ ಬಿದ್ದು ಮಂಕಾಗಿದ್ದರು. ಕೈ ಪಾಳಯದಿಂದ ಬೆಟ್ಟಿಂಗ್​ ಆಹ್ವಾನ ಬಂದರೂ ಸ್ಥಳಿಯವಾಗಿ ಯಾರೂ ಅಷ್ಟು ಆತ್ಮ ಸ್ಥೈರ್ಯದಿಂದ ಬೆಟ್ಟಿಂಗ್​ಗೆ ಮುಂದೆ ಬರುತ್ತಿರಲಿಲ್ಲ. ಆದರೆ, ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಮುಗಿದು, ಎಕ್ಸಿಟ್​ ಪೋಲ್​ ಮಾಧ್ಯಮಗಳಲ್ಲಿ ಬಿತ್ತರಗೊಂಡು, ಯಾವಾಗ ನಿಖಿಲ್​ ಗೆಲುವು ಎನ್ನುವ ವರದಿ ಆಚೆ ಬಂತೋ, ನಂತರ ಇಲ್ಲಿನ ಚಿತ್ರಣವೇ ಬದಲಾಗಿದೆ.

ಮಂಕಾದ ಕೈ ಪಡೆ

ಮತ್ತೊಂದೆಡೆ, ಚುನಾವಣೆ ಮುಗಿದ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್​ ಸೋಲು&ಗೆಲುವಿನ ಲೆಕ್ಕಾಚಾರವನ್ನು ಅವರದೇ ರೀತಿಯಲ್ಲಿ ವಿಶ್ಲೇಷಣೆ ಮಾಡಿ, ಗೆಲುವು ಸುಲಭವಲ್ಲ ಎನ್ನುವ ಮಾತು ಆಡಿದ್ದರೂ, ಕೈ ಪಾಳಯದಲ್ಲಿ ಮಾತ್ರ ಸೋಲಿನ ಆತಂಕ ಇರಲೇ ಇಲ್ಲ. ಆದರೆ, ಎಕ್ಸಿಟ್​ ಪೋಲ್​ ಹೊರಬಿದ್ದ ನಂತರ, ನಿಖಿಲ್​ ಗೆಲುವು ಎನ್ನುವ ಮಾಹಿತಿ ಕೈ ಕಾರ್ಯಕರ್ತರು ಅರಗಿಸಿಕೊಳ್ಳದಂತಾಗಿದೆ. ಈ ಹಿನ್ನೆಲೆಯಲ್ಲಿ ನಾಯಕರು ಮತ್ತು ಸ್ಥಳಿಯ ಮುಖಂಡರಿಗೆ ಕರೆ ಮಾಡಿ ಇದು ಹೇಗೆ ಸಾಧ್ಯ ಎನ್ನುವ ಪ್ರಶ್ನೆ ಹಾಕುವ ಜತೆಗೆ, ಕೈ ಅಭ್ಯರ್ಥಿ ಗೆಲುವನ್ನು ಹಿಂದಿನ ಚುನಾವಣೆ ಲಿತಾಂಶಗಳಿಗೆ ಹೋಲಿಕೆ ಮಾಡುವ ಮೂಲಕ ತಮಗೆ ತಾವೇ ಸಾಂತ್ವನ ಹೇಳಿಕೊಳ್ಳುತ್ತಿದ್ದಾರೆ.

ಜಿದ್ದಿಗೆ ಬಿದ್ದಿದ್ದರು

ಚನ್ನಪಟ್ಟಣ ಕ್ಷೇತ್ರದ ಇತಿಹಾಸದಲ್ಲಿ ಹಿಂದೆಂದೂ ಕಂಡು ಮತ್ತು ಕೇಳರಿಯದ ಹಾಗೂ ಭವಿಷ್ಯದಲ್ಲಿ ಕಾಣಲು ಸಾಧ್ಯವಾಗದ ರೀತಿಯಲ್ಲಿ ಚುನಾವಣೆ ನಡೆದಿದೆ. ರಾಜ್ಯದ ಆಡಳಿತಾರೂಡ ಕಾಂಗ್ರೆಸ್​ ಮತ್ತು ಎನ್​ಡಿಎ ಮೈತ್ರಿ ಕೂಟದ ನಾಯಕರು ತಾತ್ಕಾಲಿಕವಾಗಿ ಚನ್ನಪಟ್ಟಣದಲ್ಲಿ ಡೇರೆ ನಿರ್ಮಿಸಿಕೊಂಡು ಸಮಬಲದ ಹೋರಾಟ ನಡೆಸಿದರು. ಮತದಾರರನ್ನು ಸೆಳೆಯಲು ಇರುವ ಎಲ್ಲ ಮಾರ್ಗಗಳನ್ನು ಬಳಸಿಕೊಳ್ಳುವ ಮೂಲಕ ಚುನಾವಣೆ ಆಯೋಗದ ಕಣ್ಣು ತಪ್ಪಿಸಿ, ಹಣದ ಹೊಳೆಯನ್ನೇ ಹರಿಸಿದರು. ಇದರಿಂದ ಇಲ್ಲಿ ಸೋಲು&ಗೆಲುವು ಯಾರಿಗೆ ಎನ್ನುವ ಲೆಕ್ಕಾಚಾರ ಸ್ಪಷ್ಟವಾಗಿ ಯಾರಿಗೂ ಸಿಕ್ಕಿಲ್ಲ. ಆದರೆ, ಶನಿವಾರ ಹೊರ ಹೊಮ್ಮುವ ಲಿತಾಂಶ ಒಬ್ಬರಿಗೆ ಹ್ಯಾಟ್ರಿಕ್​ ಸೋಲಿನ ರುಚಿ ಉಣಿಸಿದರೆ, ಮತ್ತೊಬ್ಬರ ಸೋಲಿನ ಸರಪಳಿಯನ್ನು ಕಳಚಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net