ಇಂದಿನಿಂದ ಹಾಸನಾಂಬೆ ದಿವ್ಯದರ್ಶನ

hasanamba
Published on

ಹಾಸನ: ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನ ಜಿಲ್ಲೆಯ ಅಧಿದೇವತೆ ಹಾಸನಾಂಬೆ ದೇವಿಯ ದೇಗುಲದ ಬಾಗಿಲನ್ನು ಗುರುವಾರ ಶಾಸ್ತ್ರೋಕ್ತವಾಗಿ ತೆರೆಯಲಾಯಿತು.

ಅಶ್ವಿನಿ ಮಾಸದ ಪೌರ್ಣಿಮೆ ನಂತರದ ಗುರುವಾರ ಮಧ್ಯಾಹ್ನ ಸರಿಯಾಗಿ 12.10ಕ್ಕೆ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಸಿದ್ಧಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಹಾಗೂ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ವಿಧಿವಿಧಾನಗಳೊಂದಿಗೆ ದೇವಾಲಯದ ಬಾಗಿಲನ್ನು ತೆರೆದು ಹಾಸನಾಂಬೆ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು.

ಗುರುವಾರ ಬೆಳಗ್ಗೆಯಿಂದಲೇ ಅರ್ಚಕರ ತಂಡವು ದೇವಿಯ ಆಭರಣಗಳು ಮತ್ತು ಪೂಜಾ ಸಾಮಗ್ರಿಗಳನ್ನು ದೇವಾಲಯದ ಬಾಗಿಲಲ್ಲಿಟ್ಟು ಪೂಜಾ ಕೈಂಕರ್ಯಗಳನ್ನು ಆರಂಭಿಸಿತು. ನಂತರ ಅರಸು ವಂಶಸ್ಥ ನಂಜರಾಜ ಅರಸು ಅವರನ್ನು ದೇವಾಲಯಕ್ಕೆ ಮಂಗಳವಾದ್ಯದೊಂದಿಗೆ ಕರೆತರಲಾಯಿತು. ನಂತರ ಪೂಜೆ ಸಲ್ಲಿಸಿ ದೇವಿಯ ಬಾಗಿಲನ್ನು ತೆರೆಯುವುದಕ್ಕೂ ಮುನ್ನ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯದಂತೆ ಮಧ್ಯಾಹ್ನ 12.10ಕ್ಕೆ ನಂಜರಾಜ ಅರಸು ಬಾಳೆ ಕಂದು ಕಡಿದರು. ಆ ಮೂಲಕ ದೃಷ್ಟಿ ತೆಗೆಯಲಾಯಿತು. ಬಳಿಕ ವಿವಿಧ ಮಠಗಳ ಮಠಾಧೀಶರು, ಸಚಿವ, ಶಾಸಕರು ಹಾಗೂ ಗಣ್ಯರ ಸಮ್ಮುಖದಲ್ಲಿ ದೇವಾಲಯದ ಬಾಗಿಲನ್ನು ತೆರೆಯುವ ಮೂಲಕ ಹಾಸನಾಂಬೆ ದರ್ಶನೋತ್ಸವಕ್ಕೆ ವಿಧ್ಯುಕ್ತವಾಗಿ ಚಾಲನೆ ನೀಡಲಾಯಿತು. ಈ ವೇಳೆ ಕಳೆದ ವರ್ಷ ದೇವಿಗೆ ಮುಡಿಸಿದ್ದ ಹೂ ಬಾಡಿರಲಿಲ್ಲ, ದೇವಿಗೆ ಹಚ್ಚಿದ್ದ ನಂದಾದೀಪ ಉರಿಯುತ್ತಿತ್ತು. ಈ ದೃಶ್ಯವನ್ನು ನೆರೆದಿದ್ದವರು ಕಣ್ತುಂಬಿಕೊಂಡರು.

hasanamba

9 ದಿನಗಳು ದರ್ಶನ: ಶುಕ್ರವಾರದಿಂದ ನ.2ರ ಶನಿವಾರದವರೆಗೂ ಸಾರ್ವಜನಿಕರಿಗೆ ದೇವಿ ದರ್ಶನ ಸಿಗಲಿದೆ. ಪ್ರತಿದಿನ ದೇವಿಗೆ ಎರಡು ಗಂಟೆಗಳ ಕಾಲ ವಿಶೇಷ ಹಾಗೂ ರಹಸ್ಯ ಪೂಜೆಗಳು ನಡೆಯಲಿವೆ. ಈ ವೇಳೆ ದೇವಾಲಯದ ಬಾಗಿಲನ್ನು ಮುಚ್ಚಲಾಗಿರುತ್ತದೆ. ಪ್ರಧಾನ ಅರ್ಚಕ ನಾಗರಾಜು ನೇತೃತ್ವದಲ್ಲಿ ಈ ಪೂಜೆಗಳು ನಡೆಯಲಿವೆ.

20 ಲಕ್ಷ ಭಕ್ತರ ನಿರೀಕ್ಷೆ: ದೇವಿ ದರ್ಶನದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಬಾರಿ ಹಾಸನಾಂಬೆ ದರ್ಶನಕ್ಕೆ 20 ಲಕ್ಷ ಭಕ್ತರನ್ನು ನಿರೀಕ್ಷಿಸಲಾಗಿದ್ದು, ಜಿಲ್ಲಾಡಳಿತದಿಂದ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ಮೈಸೂರು ದಸರಾ ಮೀರಿಸುವಂತೆ ವಿದ್ಯುತ್ ದೀಪದ ಅಲಂಕಾರ ಮಾಡಲಾಗಿದೆ. ವಿದ್ಯುತ್ ದೀಪಾಲಂಕಾರ ವೀಕ್ಷಿಸಲು ಡಬಲ್ ಡೆಕ್ಕರ್ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಸಿಎಂ, ಡಿಸಿಎಂ, ಹೈಕೋರ್ಟ್ ನ್ಯಾಯಮೂರ್ತಿಗಳು ಸೇರಿ ಹೊರ ರಾಜ್ಯಗಳ ಗಣ್ಯರು ದರ್ಶನಕ್ಕೆ ಬರುವ ನಿರೀಕ್ಷೆ ಇದೆ ಎಂದು ಹೇಳಿದರು.

ಇಡೀ ನಾಡಿನಲ್ಲಿ ಮೂರು ಮಾತೆಯರು ಒಂದೇ ಕಡೆ ನೆಲೆಸಿರುವಂತಹ ಪುಣ್ಯಕ್ಷೇತ್ರ ಹಾಸನ. ಧಾರ್ವಿುಕ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆದಾಗ ಅಂತರಂಗದಲ್ಲಿ ಶಕ್ತಿ ಮತ್ತು ಜ್ಞಾನವನ್ನು ವೃದ್ಧಿಸಿಕೊಳ್ಳಲು ಸಹಕಾರಿಯಾಗಲಿದೆ.

| ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಪೀಠಾಧ್ಯಕ್ಷರು ಆದಿಚುಂಚನಗಿರಿ ಸಂಸ್ಥಾನ ಮಠ

ವರ್ಷಕ್ಕೊಮ್ಮೆ ಕೆಲವು ದಿನಗಳು ಮಾತ್ರ ಭಕ್ತರಿಗೆ ದರ್ಶನ ಭಾಗ್ಯ ಕಲ್ಪಿಸುವಂತಹ ಹಾಸನಾಂಬೆ ದೇಗುಲವು ವಿಶಿಷ್ಟವಾಗಿದ್ದು, ಐತಿಹಾಸಿಕವಾಗಿ ಮಹತ್ವವನ್ನು ಹೊಂದಿದೆ. ಕಳೆದ ವರ್ಷ ಹಾಕಿದಂತಹ ಪೂಜಾ ವಸ್ತುಗಳು ಅದೇ ರೀತಿ ಇಂದಿಗೂ ಇದ್ದವು. ಇಂತಹ ಉತ್ಸವದಲ್ಲಿ ನಾವು ಭಾಗಿಯಾಗಿರುವುದಕ್ಕೆ ಅತ್ಯಂತ ಸಂತಸ ಎನಿಸಿದೆ.

| ಶ್ರೀ ಸಿದ್ದಲಿಂಗ ಸ್ವಾಮೀಜಿ ಶ್ರೀ ಸಿದ್ಧಗಂಗಾ ಮಠ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net