

ಹಾಸನ: ಭಾನುವಾರ ಹಾಸನಾಂಬೆ ದರ್ಶನಕ್ಕೆ ಭಕ್ತರು ಜಿಲ್ಲೆ, ರಾಜ್ಯ ಹಾಗೂ ವಿವಿಧ ಭಾಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವಿಯ ದರ್ಶನ ಪಡೆದರು.
ವಾರಾಂತ್ಯದ ಹಿನ್ನೆಲೆಯಲ್ಲಿ ಬೆಳಗ್ಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಮಳೆಯ ಕಾರಣದಿಂದ ಹಿಂದಿನ ದಿನಗಳಿಗೆ ಹೋಲಿಕೆ ಮಾಡಿದರೆ ಭಕ್ತರ ಸಂಖ್ಯೆ ಕಡಿಮೆ ಇತ್ತು. ಮಧ್ಯಾಹ್ನ ಧರ್ಮ ದರ್ಶನದ ಸಾಲುಗಳು ಕೂಡ ಖಾಲಿ ಇತ್ತು. ಭಕ್ತರು ಕಡಿಮೆ ಸಮಯದಲ್ಲಿ ದೇವಿಯ ದರ್ಶನ ಪಡೆಯುವಂತಾಯಿತು. ನೈವೇದ್ಯ ಹಾಗೂ ಪೂಜೆಗಾಗಿ ಮಧ್ಯಾಹ್ನ 2 ರಿಂದ 3:30 ರವರೆಗೆ ಗರ್ಭ ಗುಡಿ ಬಾಗಿಲು ಹಾಕಲಾಗಿತ್ತು. ನಂತರ 3.30ರಿಂದ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ರಾತ್ರಿ 8 ಗಂಟೆಗೆ ದೇವಾಲಯದ ಗೇಟ್‌ಗಳನ್ನು ಮುಚ್ಚಲಾಯಿತು. ಮಧ್ಯರಾತ್ರಿ 12 ಗಂಟೆಗೆ ಗರ್ಭಗುಡಿ ಬಾಗಿಲು ಹಾಕಲಾಯಿತು. ಸೋಮವಾರ ಬೆಳಗ್ಗೆ 5 ಗಂಟೆಗೆ ದರ್ಶನ ಆರಂಭವಾಯಿತು. ದೀಪಾವಳಿ ಹಿನ್ನೆಲೆ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು.
ವಿವಿಧ ಕ್ಷೇತ್ರದ ಗಣ್ಯರು: ಭಾನುವಾರ ವಿವಿಧ ಕ್ಷೇತ್ರದ ಗಣ್ಯರು ಹಾಸನಾಂಬೆ ದರ್ಶನ ಪಡೆದರು. ನಟ ರಿಷಬ್ ಶೆಟ್ಟಿ, ಪತ್ನಿ ಪ್ರಗತಿ ಶೆಟ್ಟಿ, ಇಬ್ಬರು ಮಕ್ಕಳೊಂದಿಗೆ ಜತೆ ದೇಗುಲಕ್ಕೆ ಆಗಮಿಸಿದರು. ಚಿತ್ರನಟ ಶಿವರಾಜ್‌ಕುಮಾರ್, ಪತ್ನಿ ಗೀತಾ, ಮದ್ದೂರು ಶಾಸಕ ಉದಯ್‌ಗೌಡ ಹಾಗೂ ಪತ್ನಿ, ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್, ಮಾಜಿ ಸಚಿವೆ ಉಮಾಶ್ರೀ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಪುತ್ರಿ ಅನಸೂಯಾ ದೇಗುಲಕ್ಕೆ ಭೇಟಿ ನೀಡಿದರ್ಶನ ಪಡೆದರು.
ದೇವರನ್ನು ನಂಬಿ ಸಿನೆಮಾ: ಮೊದಲ ಬಾರಿಗೆ ಹಾಸನಾಂಬೆ ದರ್ಶನ ಪಡೆದಿದ್ದೇನೆ. ಪ್ರತಿ ಬಾರಿ ಬರಬೇಕು ಎಂದು ಕೊಳ್ಳುತ್ತಿದ್ದೆವು ಈ ಬಾರಿ ಸಾಧ್ಯವಾಯಿತು ಎಂದು ನಟ ರಿಷಬ್ ಶೆಟ್ಟಿ ಹೇಳಿದರು.
ಕುಟುಂಬದ ಜತೆ ಬಂದಿರುವುದು ಖುಷಿಯಾಗಿದೆ. ಕಾಂತಾರ ಸಿನಿಮಾವನ್ನು ದೇವರನ್ನು ನಂಬಿ ಮಾಡಲಾಯಿತು. ದೇವರನ್ನು ನಂಬಿ ಸಿನೆಮಾ ಮಾಡಿದ್ದರಿಂದ ಸಿನಿಮಾ ಸರಿಯಾಗಿ ಬರಲು ಸಾಧ್ಯವಾಗಿದೆ. ಜನರ ಹಾಗೂ ದೈವ ಆಶೀರ್ವಾದದಿಂದ ಸಿನೆಮಾ ಇಷ್ಟು ದೊಡ್ಡ ಮಟ್ಟದಲ್ಲಿ ತಲುಪಿದೆ. ಸಿನೆಮಾ ಯಶಸ್ವಿಯಾದ ಹಿನ್ನೆಲೆ ಜನರ ಬಳಿ ಹಾಗೂ ದೇವರ ಬಳಿ ಹೋಗಿ ಕೃತಜ್ಞತೆ ಸಲ್ಲಿಸಲಾಗುತ್ತಿದೆ ಎಂದರು.