ಹಾಸನಾಂಬ ಭಕ್ತರಿಗೆ ಈ ವರ್ಷವೂ ಪ್ರವಾಸ ಭಾಗ್ಯ

ಹಾಸನಾಂಬ ಭಕ್ತರಿಗೆ ಈ ವರ್ಷವೂ ಪ್ರವಾಸ ಭಾಗ್ಯ
Published on

ಕೆ.ಆರ್.ಪ್ರಸಿನ್ ಹಾಸನ

ಶಕ್ತಿದೇವತೆ ಹಾಸನಾಂಬ ಜಾತ್ರಾ ಮಹೋತ್ಸವಕ್ಕೆ ದಿನಗಣನೆ ಶುರುವಾಗಿದೆ. ಈ ವರ್ಷವೂ ಪ್ರವಾಸೋದ್ಯಮ ಇಲಾಖೆ ಟೂರ್ ಪ್ಯಾಕೇಜ್ ಕೈಗೆತ್ತಿಕೊಂಡಿದೆ. ಬೆಂಗಳೂರು, ಮೈಸೂರಿನಿಂದಲೂ ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಿಕೊಂಡಿದೆ. ಅ. 9 ರಿಂದ 23ರ ವರೆಗೆ ಪ್ರವಾಸಿ ಬಸ್‌ಗಳು ಸಂಚರಿಸಲಿವೆ.

ಕಳೆದ ಹಲವು ವರ್ಷಗಳಿಂದ ಹಾಸನಾಂಬ ಜಾತ್ರೆಗೆ ಬರುವ ಭಕ್ತರಿಗೆ ಜಿಲ್ಲೆಯ ವಿವಿಧ ಪ್ರವಾಸಿ ಸ್ಥಳಗಳ ವೀಕ್ಷಣೆಗೆ ಪ್ಯಾಕೇಜ್ ಟೂರ್ ವ್ಯವಸ್ಥೆ ಮಾಡಿಕೊಡಲಾಗುತ್ತದೆ. ಈ ಬಾರಿ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯು ರಾಜಧಾನಿ ಬೆಂಗಳೂರು ಮತ್ತು ಸಾಂಸ್ಕೃತಿಕ ನಗರಿ ಮೈಸೂರಿನ ಸಾರ್ವಜನಿಕರಿಗೆ ಈ ವ್ಯವಸ್ಥೆಯನ್ನು ಕಲ್ಪಿಸಿದೆ. ಬೆಂಗಳೂರಿನಿಂದ ಬರುವ ಪ್ರವಾಸಿಗರಿಗೆ 1 ಸಾವಿರ ರೂ. ದರ್ಶನ ಟಿಕೆಟ್ ಸಹಿತ ಒಬ್ಬರಿಗೆ ಒಟ್ಟು 2,500 ರೂ., ಮೈಸೂರಿನಿಂದ ಬರುವವರಿಗೆ ದರ್ಶನ ಟಿಕೆಟ್ ಸಹಿತ 2,200 ರೂ. ನಿಗದಿ ಮಾಡಲಾಗಿದೆ. ಹಾಸನಾಂಬ ದರ್ಶನದ ಬಳಿಕ ಸಪ್ತಮಾತೃಕೆಯರ ದರ್ಶನಕ್ಕೂ ಪ್ರವಾಸಿಗರನ್ನು ಕರೆದೊಯ್ಯಲಾಗುತ್ತದೆ. ಹಾಸನದ ದೇವಿಗೆರೆ ಕಲ್ಯಾಣಿ, ಆಲೂರು ತಾಲೂಕಿನ ಕೆಂಚಮ್ಮನ ಹೊಸಕೋಟೆ, ಮೊಸಳೆ ಗ್ರಾಮದ ನಾಗೇಶ್ವರ ಮತ್ತು ಚನ್ನಕೇಶವ ದೇವಾಲಯ ದರ್ಶನ ಭಾಗ್ಯ ದೊರಕಲಿದೆ.

ಅ.9 ರಿಂದ 23ರ ವರೆಗೆ ನಿತ್ಯವೂ ಬೆಳಗ್ಗೆ 6 ಗಂಟೆಗೆ ಬೆಂಗಳೂರು ಹಾಗು ಮೈಸೂರಿನಿಂದ ಹೊರಡುವ ವೋಲ್ವೊ ಬಸ್ ಬೆಳಗ್ಗೆ 10 ಗಂಟೆ ವೇಳೆಗೆ ಹಾಸನಾಂಬ ದೇವಸ್ಥಾನಕ್ಕೆ ಬರಲಿವೆ. ದೇವಿ ದರ್ಶನ ಬಳಿಕ ಉಳಿದ ಪ್ರವಾಸಿ ಸ್ಥಳಗಳಿಗೆ ಕರೆದುಕೊಂಡು ಹೋಗಲಾಗುತ್ತದೆ. ಉಪಾಹಾರ ಮತ್ತು ಊಟದ ಖರ್ಚುಗಳನ್ನು ಪ್ರಯಾಣಿಕರೇ ಭರಿಸಿಕೊಳ್ಳಬೇಕು.

ಸ್ಥಳೀಯವಾಗಿ 7 ಪ್ಯಾಕೇಜ್:

ಬೆಂಗಳೂರು, ಮೈಸೂರಿನಿಂದ ನಿಗದಿಪಡಿಸಿರುವ ಪ್ಯಾಕೇಜ್ ಹೊರತುಪಡಿಸಿ ಸ್ಥಳೀಯವಾಗಿ ಏಳು ಮಾರ್ಗದಲ್ಲಿ ಪ್ರವಾಸ ಪ್ಯಾಕೇಜ್ ರೂಪಿಸಲಾಗಿದೆ. ಅ. 9 ರಿಂದ 23ರವರೆಗೆ ಪ್ರತಿದಿನ ಬೆಳಿಗ್ಗೆ 7 ಗಂಟೆಗೆ ನಗರ ಬಸ್ ನಿಲ್ದಾಣದಿಂದ ಹೊರಡುವ ಬಸ್‌ಗಳು ಸುತ್ತಮುತ್ತಲ ಪ್ರೇಕ್ಷಣೀಯ ಸ್ಥಳಗಳು ಹಾಗು ದೇವಸ್ಥಾನಗಳಿಗೆ ಭೇಟಿ ನೀಡಿ ಸಂಜೆ 5 ಗಂಟೆಗೆ ನಗರ ಬಸ್ ನಿಲ್ದಾಣಕ್ಕೆ ಬಂದು ಸೇರಲಿವೆ. ಪ್ರವಾಸಿಗರಿಗೆ ಸ್ಥಳ ಮಾಹಿತಿ ನೀಡಲು ಮಾರ್ಗದರ್ಶಿಗಳು ಹಾಗು ಸಹಾಯಕರಾಗಿ ಆಶಾ ಕಾರ್ಯಕರ್ತರನ್ನು ನಿಯೋಜನೆ ಮಾಡಲಾಗುತ್ತಿದೆ.

ಪ್ಯಾಕೇಜ್ 1ರ ವಿವರ: ಹಾಸನದಿಂದ ವಾಟೆಹೊಳೆ ಜಲಾಶಯ, ಆಲೂರು ತಾಲೂಕು ಪಾಳ್ಯ ಗ್ರಾಮದಲ್ಲಿರುವ ಶ್ರೀ ಜನಾರ್ದನ ದೇವಾಲಯ, ಅಬ್ಬಿ ಜಲಪಾತ, ಬೆಟ್ಟದ ಭೈರವೇಶ್ವರ ದೇವಸ್ಥಾನ ಒಳಗೊಂಡಿದೆ. ಒಟ್ಟು 182 ಕಿ.ಮೀ. ದೂರದ ಪ್ರಯಾಣಕ್ಕೆ ವಯಸ್ಕರಿಗೆ 500 ರೂ. ಮತ್ತು ಮಕ್ಕಳಿಗೆ 400 ರೂ. ದರ ನಿಗದಿಪಡಿಸಲಾಗಿದೆ.

ಪ್ಯಾಕೇಜ್ 2: ಬೆಳಗ್ಗೆ 7.30ಕ್ಕೆ ಹಾಸನದಿಂದ ಹೊರಟು ಸಕಲೇಶಪುರ ತಾಲೂಕಿನ ಮುಂಜರಾಬಾದ್ ಕೋಟೆ, ಮೂಕನಮನೆ ಜಲಪಾತ, ಬಿಸ್ಲೆ ಘಾಟ್ ಅರಣ್ಯ ಸೇರಿದಂತೆ ಒಟ್ಟು 192 ಕಿ.ಮೀ. ಪ್ರಯಾಣ. ಇದಕ್ಕಾಗಿ ವಯಸ್ಕರಿಗೆ 525 ರೂ., ಮತ್ತು ಮಕ್ಕಳಿಗೆ 425 ರೂ. ಶುಲ್ಕ ನಿಗದಿಮಾಡಲಾಗಿದೆ.

ಪ್ಯಾಕೇಜ್ 3: ಹಾಸನದಿಂದ ಬೆಳಗ್ಗೆ 7 ಗಂಟೆಗೆ ಹೊರಟು ಬೇಲೂರು ಚನ್ನಕೇಶವ ದೇವಾಲಯ ಭೇಟಿ, ಯಗಚಿ ಜಲಸಾಹಸ ಕೇಂದ್ರ, ಹಳೇಬೀಡಿನ ಪುಷ್ಪಗಿರಿ ಬೆಟ್ಟ, ಹೊಯ್ಸಳೇಶ್ವರ ದೇವಾಲಯ, ಕೊಂಡಜ್ಜಿಯ ಶ್ರೀ ವರದರಾಜಸ್ವಾಮಿ ದೇವಾಲಯ, ಸೀಗೆಗುಡ್ಡದ ಮಳೆಮಲ್ಲೇಶ್ವರ ದೇಗುಲ ವೀಕ್ಷಣೆಯನ್ನು ಪ್ರವಾಸ ಒಳಗೊಂಡಿದೆ. ಒಟ್ಟು 116 ಕಿ.ಮೀ. ಪ್ರಯಾಣ ಇದಾಗಿದೆ. ವಯಸ್ಕರಿಗೆ 375 ರೂ. ಮತ್ತು ಮಕ್ಕಳಿಗೆ 275 ರೂ. ಟಿಕೆಟ್ ದರ ಇರಲಿದೆ.

ಪ್ಯಾಕೇಜ್ 4: ಹಾಸನದಿಂದ ಆರಂಭವಾಗಿ ನುಗ್ಗೇಹಳ್ಳಿ ಶ್ರೀ ಲಕ್ಷ್ಮಿ ನರಸಿಂಹಸ್ವಾಮಿ ದೇವಾಲಯ, ಶ್ರವಣಬೆಳಗೊಳ ವಿಂಧ್ಯಗಿರಿ ಹಾಗು ಚಂದ್ರಗಿರಿ ಬೆಟ್ಟ, ಬೆಲಸಿಂದ ಉದ್ಯಾನವನದ ವೀಕ್ಷಣೆ ಒಳಗೊಂಡಿದೆ. ಒಟ್ಟು ಪ್ರಯಾಣ 131 ಕಿ.ಮೀ. ಆಗಲಿದ್ದು, ಇದಕ್ಕಾಗಿ ವಯಸ್ಕರಿಗೆ 400 ರೂ., ಮಕ್ಕಳಿಗೆ 300 ರೂ. ನಿಗದಿಪಡಿಸಲಾಗಿದೆ.

ಪ್ಯಾಕೇಜ್ 5: ಹಾಸನದಿಂದ ಆರಂಭವಾಗಿ ಕೋರವಂಗಲದ ಬೂಚೇಶ್ವರ ದೇಗುಲ, ಹಾರನಹಳ್ಳಿ ಗ್ರಾಮದ ಕೇಶವ ಹಾಗು ಸೋಮವೇಶ್ವರ ದೇವಸ್ಥಾನ, ಅರಸೀಕೆರೆಯ ಶ್ರೀ ಮಾಲೇಕಲ್ ತಿರುಪತಿ, ಜೇನುಕಲ್ ಸಿದ್ದೇಶ್ವರ ಬೆಟ್ಟ, ಗಾಂಧೀಜಿ ಚಿತಾಭಸ್ಮ ತಾಣ, ಶಾಂತಿಗ್ರಾಮದ ನರಸಿಂಹಸ್ವಾಮಿ ದೇವಾಲಯ, ಹಾಸನದ ಗೆಂಟೆಕಟ್ಟೆ ಉದ್ಯಾನವನದ ವೀಕ್ಷಣೆ. ಇದಕ್ಕಾಗಿ ಟಿಕೆಟ್ ದರ 400 ರೂ., ಮಕ್ಕಳಿಗೆ 300 ರೂ. ರೂ. ನಿಗದಿ ಮಾಡಲಾಗಿದೆ.

ಪ್ಯಾಕೇಜ್ 6: ಹಾಸನದಿಂದ ಆರಂಭವಾಗಿ ಹಾಲುವಾಗಿಲು ಕಟ್ಟೆ, ಶೆಟ್ಟಿಹಳ್ಳಿ ಚರ್ಚ್, ಕೋನಾಪುರದ ರಂಗನಾಥಸ್ವಾಮಿ ದೇವಾಲಯ, ಕೊಣನೂರು ತೂಗುಸೇತುವೆ, ರಾಮನಾಥಪುರದ ಸುಬ್ರಹಣ್ಯ ಮತ್ತು ರಾಮೇಶ್ವರ ದೇಗುಲ, ಗೊರೂರು ಹೇಮಾವತಿ ಜಲಾಶಯಕ್ಕೆ ಭೇಟಿ ನೀಡುವುದು. ಒಟ್ಟು 138 ಕಿ.ಮೀ. ಪ್ರಯಾಣ ಇದಾಗಿದೆ. ಇದಕ್ಕಾಗಿ ಟಿಕೆಟ್ ದರ 400 ರೂ., ಮಕ್ಕಳಿಗೆ 300 ರೂ. ರೂ. ನಿಗದಿ ಗೊಂಡಿದೆ.

ಪ್ಯಾಕೇಜ್ 7: ಹಾಸನದಿಂದ ಹೊರಟು ಜಾವಗಲ್‌ನ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯ, ಅರಕೆರೆ ಚನ್ನಕೇಶವ ದೇವಸ್ಥಾನ, ಬೆಟ್ಟದಪುರ ರಂಗನಾಥಸ್ವಾಮಿ ದೇವಸ್ಥಾನ ಹಾಗು ಬಾಣಾವರ ಕೋಟೆ, ಹಾಸನದ ವಸ್ತು ಸಂಗ್ರಹಾಲಯ ವೀಕ್ಷಣೆಗೆ ಅವಕಾಶವಿದೆ. ವಯಸ್ಕರಿಗೆ 400 ರೂ. ಮತ್ತು ಮಕ್ಕಳಿಗೆ 300 ರೂ. ದರ ನಿಗದಿಪಡಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net