ಮಾನಸಿಕ ಬೆಳವಣಿಗೆಗೆ ಚಿತ್ರಕಲೆ ಸಹಕಾರಿ

ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಅಭಿಪ್ರಾಯ
ಕಿರಿ ಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ
-ಬೇಲೂರಿನ ಬೃಂದಾವನ ಚಿತ್ರಕಲಾ ಅಕಾಡೆಮಿ ಹಾಗೂ ಕಾರುಣ್ಯ ಅಕಾಡೆಮಿಯಿಂದ ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಮೆಡಲ್‌ನೊಂದಿಗೆ ಪ್ರಶಸ್ತಿ ಪತ್ರ ವಿತರಿಸಿದ ಕಿರಿ ಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಇತರರು
Published on: 

ಬೇಲೂರು: ಬೇಲೂರಿನ ಬೃಂದಾವನ ಚಿತ್ರಕಲಾ ಅಕಾಡೆಮಿ ಹಾಗೂ ಕಾರುಣ್ಯ ಅಕಾಡೆಮಿಯಿಂದ ಇತ್ತೀಚೆಗೆ ಪಟ್ಟಣದ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಚಿಣ್ಣರ ಚಿತ್ತಾರ 2026-ಚಿತ್ರಕಲಾ ಸ್ಪರ್ಧೆಯನ್ನು ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಉದ್ಘಾಟಿಸಿದರು.

ಮಕ್ಕಳಿಗೆ ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಭಾಗವಹಿಸುವಂತೆ ಪ್ರೇರೇಪಿಸಿದರೆ ಮಕ್ಕಳಲ್ಲಿರುವ ಪ್ರತಿಭೆ ಗುರುತಿಸುವ ನಿಟ್ಟಿನಲ್ಲಿ ಹಾಗೂ ಅವರ ಮಾನಸಿಕ ಬೆಳವಣಿಗೆಗೆ ಇಂತಹ ಚಿತ್ರಕಲಾ ಸ್ಪರ್ಧೆಗಳು ಸಹಕಾರಿಯಾಗಲಿದೆ. ಮಕ್ಕಳು ಮೊಬೈಲ್‌ಗಳನ್ನು ಬಿಟ್ಟು ವಿದ್ಯಾಭ್ಯಾಸದೊಂದಿಗೆ ಕ್ರೀಡೆ, ಚಿತ್ರಕಲೆ, ನಿಮಗಿಷ್ಟವಾದ ಚಟುವಟಿಕೆಗಳಲ್ಲಿ ಭಾಗವಹಿಸಿದರೆ ಹೆಚ್ಚಿನ ಜ್ಞಾನದೊಂದಿಗೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ಶ್ರೀ ಸದಾಶಿವ ಸ್ವಾಮೀಜಿ ಹೇಳಿದರು.

ಪಾಲಕರು, ಶಿಕ್ಷಕರು ಸಹ ಮಕ್ಕಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುವುದರಿಂದ ಅವರ ಆಸಕ್ತಿಗನುಗುಣವಾಗಿ ಪ್ರೋತ್ಸಾಹಿಸಿದರೆ ಮಕ್ಕಳು ಉತ್ತಮ ಸಾಧನೆ ಮಾಡಲು ಸಾಧ್ಯ ಎಂದರು.

ಪುರಸಭೆ ಮಾಜಿ ಅಧ್ಯಕ್ಷ ಸಿ.ಎನ್.ದಾನಿ ಮಾತನಾಡಿ, ಮಕ್ಕಳು ಚಿಕ್ಕಂದಿನಲ್ಲೇ ವಿದ್ಯೆಯ ಜತೆಗೆ ಕ್ರೀಡೆ ಸೇರಿದಂತೆ ಇತರೆ ಚಟುವಟಿಕೆಗಳಲ್ಲಿ ಭಾಗವಹಿಸಿದರೆ ಉತ್ತಮ ಆರೋಗ್ಯದೊಂದಿಗೆ ಎಲ್ಲ ಕ್ಷೇತ್ರದಲ್ಲೂ ಉತ್ತಮ ಸಾಧನೆ ಮಾಡಬಹುದು. ಈ ನಿಟ್ಟಿನಲ್ಲಿ ಮಕ್ಕಳು ಮನಸ್ಸು ಮಾಡಬೇಕು. ಪಾಲಕರು ಪ್ರೋತ್ಸಾಹಿಸಿದರೆ ಏನನ್ನಾದರೂ ಸಾಧಿಸುತ್ತಾರೆ. ಅಲ್ಲದೆ, ಈ ಚಿತ್ರಕಲಾ ಸ್ಪರ್ಧೆಯಲ್ಲಿ ತಾಲೂಕಿನ 150 ಮಕ್ಕಳು ಭಾಗವಹಿಸಿ ತಮ್ಮ ಪ್ರತಿಭೆಗನುಗುಣವಾಗಿ ಸ್ಪರ್ಧಿಸುವ ಮೂಲಕ ಪ್ರತಿಭೆ ಪ್ರದರ್ಶಿಸಿರುವುದು ಶ್ಲಾಘನೀಯವಾಗಿದೆ ಎಂದರು.

ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಲಾಯಿತು. ಪೂರ್ಣಪ್ರಜ್ಞಾ ಶಾಲೆ ಪ್ರಾಂಶುಪಾಲ ಪ್ರಶಾಂತ್ ಕುಮಾರ್, ಬೃಂದಾವನ ಚಿತ್ರಕಲಾ ಅಕಾಡೆಮಿ ಸಂಚಾಲಕ ಲೋಕೇಶ್ ಮಳಲಿ, ತೀರ್ಪುಗರರಾದ ಹಿರಿಯ ಚಿತ್ರ ಕಲಾವಿದ ಕಟ್ಟಿಮನಿ ಹುಬ್ಬಳ್ಳಿ, ಚಿತ್ರಕಲಾ ನಿರ್ದೇಶಕ ಹರ್ಷ ಚಿಕ್ಕಮಗಳೂರು, ಡಾ.ಶಿಲ್ಪಾ ಚಿಕ್ಕಮಗಳೂರು, ಕಾರುಣ್ಯ ಅಕಾಡೆಮಿ ಪ್ರಭುಕುಮಾರ, ಕುಸುಮರಾಜ್, ರವಿ ಮೂದಿಗೆರೆ ಸೇರಿದಂತೆ ಇತರರಿದ್ದರು.