

ಸಕಲೇಶಪುರ: ಕಾಫಿ ಬೆಳೆಗಾರರು ಶ್ರಮಜೀವಿಗಳು. ಹಲವು ಸಮಸ್ಯೆಗಳ ನಡುವೆಯೂ ನಲುಗುತ್ತಿರುವ ಕಾಫಿ ಬೆಳೆಗಾರರು ಸಮಸ್ಯೆಗಳನ್ನು ತೋರಿಸಿಕೊಳ್ಳದೆ ಕೆಲಸ ಮಾಡುವ ವಿಶೇಷ ಜನರು ಎಂದು ಸಂಸದ ಶ್ರೇಯಸ್ ಪಟೇಲ್ ಬಣ್ಣಿಸಿದರು.
ತಾಲೂಕಿನ ಒಸ್ಸೂರು ಗ್ರಾಮದಲ್ಲಿ ಗುರುವಾರ ಹಾಸನ ಜಿಲ್ಲಾ ಬೆಳೆಗಾರರ ಸಂಘ ಆಯೋಜಿಸಿದ್ದ 12ನೇ ಅಂತಾರಾಷ್ಟ್ರೀಯ ಕಾಫಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಾಫಿ ಬೆಳೆಗಾರರ ಸಮಸ್ಯೆಗೆ ದ್ವನಿಯಾಗಿ, ಸಂಸದನಾಗಿ ಪ್ರಮಾಣಿಕವಾಗಿ ಕೆಲಸ ಮಾಡಲಿದ್ದೇನೆ. ಸರ್ಫೇಸಿ ಕಾನೂನು, ಕಾಡಾನೆ ಸಮಸ್ಯೆಗಳು ಕುರಿತು ಸಂಸತ್ತಿನಲ್ಲಿ ಗಮನ ಸೇಳೆದಿದ್ದೇನೆ ಕಾಫಿ ಬೆಳೆಗಾರರ ಒಗ್ಗಟ್ಟು ಎಲ್ಲ ಬೆಳೆಗಾರರಲ್ಲೂ ಅಗತ್ಯವಿದೆ. ಮಲೆನಾಡಿನಲ್ಲೂ ಬರದ ಛಾಯೆ ಕಾಣಿಸಿಕೊಂಡಿದ್ದು ಇದನ್ನು ಗಮನದಲ್ಲಿಟ್ಟುಕೊಂಡು ಸಕಲೇಪುರ ತಾಲೂಕನ್ನು ಬರಪಟ್ಟಿಗೆ ಸೇರಿಸಲು ಪ್ರಮಾಣಿಕ ಪ್ರಯತ್ನ ನಡೆಸಲಿದ್ದೇನೆ. ತಾಲೂಕಿಗೆ ಮತ್ತೊಮ್ಮೆ ಮುಖ್ಯಮಂತ್ರಿಗಳನ್ನು ಕರೆಸಿ ಬೆಳೆಗಾರರ ಸಮಸ್ಯೆಗಳನ್ನ ವಿವರಿಸುವ ಪ್ರಯತ್ನಿಸುತ್ತೇನೆ ಎಂದರು.
ಕಾಫಿ ಕುಡಿಯುವುದರಿಂದ ಮನಶಾಂತಿ ದೊರೆಯಲಿದೆ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ. ಕಾಫಿ ಕುಡಿಯುವುದರಿಂದ ಒತ್ತಡ ನಿವಾರಣೆಯಾಗಲಿದೆ. ಸಂಸತ್ತಿನಲ್ಲಿ ಎಲ್ಲ ಸಂಸದರಿಗೂ ಕಾಫಿ ಪೌಡರ್ ನೀಡುವ ಮೂಲಕ ಕಾಫಿ ಪರಿಚಯ ಮಾಡುವ ಯತ್ನ ನಡೆಸಲಿದ್ದೇನೆ. ಕಾಫಿ ಬೆಳೆಗಾರರು ಹೃದಯವಂತರು ಸದಾ ಹಸನ್ಮಖಿಯಾಗಿರುವ ಬೆಳೆಗಾರರ ನಗು ಮಾಸದಂತೆ ನೋಡಿಕೊಳ್ಳುವ ಜವಾಬ್ದಾರಿ ನನ್ನ ಮೇಲಿದೆ ಎಂದರು.
ಶಾಸಕ ಸೀಮೆಂಟ್ ಮಂಜು ಮಾತನಾಡಿ, ಒತ್ತುವರಿ ಭೂಮಿ ಗುತ್ತಿಗೆ ನೀಡುವ ಯೋಜನೆ ಅರ್ಧಕ್ಕೆ ನಿಂತಿದ್ದು, ಯೋಜನೆ ಕಾರ್ಯಗತಗೊಳಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು. ಡೀಮ್ಡ್ ಅರಣ್ಯ ಸರ್ವೇಗೆ ಈಗಾಗಲೇ ಮರು ಸರ್ವೇ ನಡೆಸಲು ಸರ್ಕಾರ ಸೂಚಿಸಿದೆ. ಇದು ಕಾಫಿ ಬೆಳೆಗಾರರಿಗೆ ದೊರೆತಿರುವ ಮೊದಲ ಜಯವಾಗಿದೆ. ಕಸ್ತೂರಿ ರಂಗನ್ ವರದಿ ಬಗ್ಗೆ ಈಗಾಗಲೇ ನಮ್ಮ ಶಕ್ತಿ ಮೀರಿ ಹೋರಾಟ ನಡೆಸಿದ್ದೇನೆ. ವಿಧಾನಸೌಧದಲ್ಲಿ ಕಾಫಿ ಬೆಳೆಗಾರರನ್ನು ಕಾಡುತ್ತಿರುವ ಸಮಸ್ಯೆಗಳ ಕುರಿತು ಅಂಕಿಸಂಖ್ಯೆ ಸಹಿತ ವಿವರಿಸಿದ್ದೇನೆ. ಕಾಫಿ ಬೆಳೆಗಾರರ ಯಾವುದೇ ರೀತಿಯ ಸಮಸ್ಯೆಗೆ ಧ್ವನಿಯಾಗಲಿದ್ದೇನೆ. ಸಕಲೇಶಪುರ ತಾಲೂಕನ್ನು ಬರಪಟ್ಟಿಗೆ ಸೇರಿಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದೇನೆ. ಒಗ್ಗಟ್ಟಿನಿಂದ ಹೋರಾಟ ಮಾಡಿದರೆ ಸಮಸ್ಯೆ ಪರಿಹರಿಸಬಹುದಾಗಿದೆ. ಪರಿಹಾರವಿಲ್ಲದ ಸಮಸ್ಯೆಯೇ ಇಲ್ಲ ಎಂದರು.
ವೇದಿಕೆಯಲ್ಲಿ ಹಾಸನ ಜಿಲ್ಲಾ ಬೆಳೆಗಾರರ ಸಂಘದ ಅಧ್ಯಕ್ಷ ಮಂಜುನಾಥ್ ಶೆಟ್ಟಿ, ಕರ್ನಾಟಕ ಬೆಳೆಗಾರರ ಒಕ್ಕೋಟದ ಮಾಜಿ ಅಧ್ಯಕ್ಷ ಜಯರಾಂ, ಕರ್ನಾಟಕ ಬೆಳೆಗಾರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸುರೇಂದ್ರ, ಹಾಸನ ಬೆಳೆಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಹೆಗ್ಗೂವೆ ಪುಟ್ಟರಾಜು, ಬೆಕ್ಕನಹಳ್ಳಿ ನಾಗರಾಜ್, ಸುಬ್ರಮಣ್ಯ ಮುಂತಾದವರಿದ್ದರು. ಕಾರ್ಯಕ್ರಮದ ಅಂಗವಾಗಿ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಉಚಿತವಾಗಿ ಕಾಫಿ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಆಧುನಿಕ ಯಂತ್ರೋಪಕರಣ ಹಾಗೂ ಕೃಷಿ ಸಲಕರಣೆಗಳ ಪ್ರದರ್ಶನ ಹಾಗೂ ಮಾರಾಟ ಮಳಿಗೆಗಳು ಹೆಚ್ಚು ಆಕರ್ಷಕವಾಗಿದ್ದು ಜನರನ್ನು ಸೆಳೆಯಲು ಯಶಸ್ವಿಯಾಗಿದ್ದವು.