ಕಾನೂನು ಚೌಕಟ್ಟಿನಲ್ಲಿ ಕೆಲಸ ನಿರ್ವಹಿಸಿ

ಹಾಸನ ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಏರ್ಪಡಿಸಿದ್ದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ದಿನಾಚರಣೆ ಹಾಗೂ 2024 ನೇ ಮತ್ತು 2025ನೇ ಸಾಲಿನ ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಗಣ್ಯರು ಉದ್ಘಾಟಿಸಿದರು. ಸಂಸದ ಶ್ರೇಯಸ್ ಪಟೇಲ್, ಶಾಸಕ ಸ್ವರೂಪ್ ಪ್ರಕಾಶ್, ಡಿಸಿ ಲತಾಕುಮಾರಿ, ಪಟೇಲ್ ಶಿವಪ್ಪ ಇತರರಿದ್ದರು.
ಹಾಸನ ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಏರ್ಪಡಿಸಿದ್ದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ದಿನಾಚರಣೆ ಹಾಗೂ 2024 ನೇ ಮತ್ತು 2025ನೇ ಸಾಲಿನ ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಗಣ್ಯರು ಉದ್ಘಾಟಿಸಿದರು. ಸಂಸದ ಶ್ರೇಯಸ್ ಪಟೇಲ್, ಶಾಸಕ ಸ್ವರೂಪ್ ಪ್ರಕಾಶ್, ಡಿಸಿ ಲತಾಕುಮಾರಿ, ಪಟೇಲ್ ಶಿವಪ್ಪ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕಾನೂನು ಚೌಕಟ್ಟಿನಲ್ಲಿ ಕೆಲಸ ನಿರ್ವಹಿಸಿ
  • ಸಂಸದ ಶ್ರೇಯಸ್ ಎಂ.ಪಟೇಲ್ ಸಲಹೆ
  • ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ
ಹಾಸನ: ಸರ್ಕಾರಿ ಕಚೇರಿಗಳಿಗೆ ಬರುವಂತಹ ಸಾರ್ವಜನಿಕರನ್ನು ಗೌರವಯುತವಾಗಿ ಕಾಣುವುದರ ಜತೆಗೆ ಕಾನೂನು ಚೌಕಟ್ಟಿನಲ್ಲಿ ಅವರ ಕೆಲಸ ಮಾಡಲು ಆದ್ಯತೆ ನೀಡಿ ಎಂದು ಸಂಸದ ಶ್ರೇಯಸ್ ಎಂ. ಪಟೇಲ್ ಹೇಳಿದರು.
ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಜಿಲ್ಲಾ ಶಾಖೆ ಆಶ್ರಯದಲ್ಲಿ ಮಂಗಳವಾರ ಹಾಸನಾಂಬ ಕಲಾಕ್ಷೇತ್ರದಲ್ಲಿ ಏರ್ಪಡಿಸಿದ್ದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ದಿನಾಚರಣೆ ಹಾಗೂ 2024ನೇ ಮತ್ತು 2025ನೇ ಸಾಲಿನ ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಸರ್ಕಾರಿ ನೌಕರರಲ್ಲಿ ತಾಳ್ಮೆ ಬಹುಮುಖ್ಯ ಯಾವುದೇ ಒತ್ತಡವಿದ್ದರೂ ಅದನ್ನು ಸಂಭಾಳಿಸಿಕೊಂಡು ಮುಂದೆ ಸಾಗಬೇಕು ಎಂದರು.
ಯಾವುದೇ ಕೆಲಸವಾದರೂ ಪ್ರಾಮಾಣಿಕತೆಯಿಂದ ಮಾಡುವುದು ಅತಿ ಮುಖ್ಯ. ನೌಕರರು ಸಾರ್ವಜನಿಕರ ಧ್ವನಿಯಾಗಿ ಕೆಲಸ ಮಾಡಬೇಕು. ಒಂದು ಜಿಲ್ಲೆ ಪ್ರಗತಿ ಕಾಣಬೇಕು ಎಂದರೆ ಅದಕ್ಕೆ ಮುಖ್ಯ ಕಾರಣ ಹಾಸನ ಜಿಲ್ಲೆಯಲ್ಲಿ ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿಯೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವುದರಿಂದ ಜಿಲ್ಲೆ ಎಲ್ಲದರಲ್ಲೂ ಉತ್ತಮ ಸ್ಥಾನದಲ್ಲಿದೆ ಎಂದರು.
ಶಾಸಕ ಸ್ವರೂಪ್ ಪ್ರಕಾಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯ ಸರ್ಕಾರಿ ನೌಕರರು ಬಹಳ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವುದರಿಂದ ಜಿಲ್ಲೆ ಪ್ರಗತಿಶೀಲವಾಗಿದೆ ಎಂದರು.
ಯಾವುದೇ ಕೆಲಸವಾಗಿರಲಿ ಪ್ರಾಮಾಣಿಕವಾಗಿ ಮಾಡಿ ಕೆಲಸಕ್ಕೆ ಗೌರವ ನೀಡಬೇಕು. ನಾಗರಿಕರು ಮತ್ತು ಸಾರ್ವಜನಿಕರ ಕೆಲಸಕ್ಕೆ ಹೆಚ್ಚು ಒತ್ತು ನೀಡುವ ಮೂಲಕ ಸಹಕರಿಸಬೇಕು ಎಂದರು.
ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಮಾತನಾಡಿ, ನಾವು ಮಾಡುವ ಕೆಲಸಕ್ಕೆ ಪ್ರಶಸ್ತಿ ಬೇಕಿಲ್ಲ, ಮಾಡುವ ಕೆಲಸದಲ್ಲಿ ಪ್ರಾಮಾಣಿಕತೆ ಇದ್ದರೆ ಸಾಕು. ಸಂವಿಧಾನದ ಚೌಕಟ್ಟಿನ ಒಳಗೆ ಕೆಲಸ ಮಾಡುವ ಸರ್ಕಾರಿ ನೌಕರರಿಗೆ ಪ್ರತಿ ದಿನವೂ ಹೊಸ ದಿನವಾಗಿರಬೇಕು. ಆದ್ದರಿಂದ ಉತ್ಸಾಹದಿಂದ ಕೆಲಸ ಮಾಡಿ ಎಂದು ಹೇಳಿದರು.
ಸಾರ್ವಜನಿಕರ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಸಮಸ್ಯೆಗೆ ಸೂಕ್ತವಾದ ಪರಿಹಾರವನ್ನು ಅಧಿಕಾರಿಗಳು ನೀಡಬೇಕು ಹಾಗೂ ಯಾವುದೇ ಕೆಲಸವಾದರೂ ಸಹ ಆ ಕೆಲಸದ ಮೇಲೆ ಶ್ರದ್ಧೆ, ಬದ್ಧತೆ ಮತ್ತು ನಿಷ್ಠೆ ಇರಬೇಕು ಎಂದರು.
ಕೆಲಸ ಮಾಡುವಾಗ ಯಾವ ಕೆಲಸವೂ ಸಣ್ಣ ಕೆಲಸ, ದೊಡ್ಡ ಕೆಲಸ ಅಂತ ಇರುವುದಿಲ್ಲ ಎಲ್ಲ ಕೆಲಸವೂ ಒಂದೇ, ಕೆಲಸ ಯಾವುದೇ ಆಗಿರಲಿ ಮಾಡುವ ಹಂಬಲ ಪ್ರತಿಯೊಬ್ಬರಲ್ಲೂ ಇರಬೇಕು. ನೌಕರರು ಕೆಲಸದ ಜವಾಬ್ದಾರಿಯನ್ನು ನಿರ್ವಹಿಸುವುದರ ಜತೆಗೆ, ತಮ್ಮ ಆರೋಗ್ಯದ ಕಡೆ ಹೆಚ್ಚು ಗಮನಹರಿಸಬೇಕು. ಆರೋಗ್ಯ ಸಮತೋಲನದಲ್ಲಿದ್ದರೆ ತಾವು ತೆಗೆದುಕೊಂಡ ನಿರ್ಧಾರ ಹಾಗೂ ನಿರ್ಣಯಗಳು ಕೂಡ ಸರಿಯಾಗಿರುತ್ತದೆ ಎಂದು ಹೇಳಿದರು.
ಸರ್ಕಾರಿ ನೌಕರರು ಧನಾತ್ಮಕ ಚಿಂತನೆಗಳೊಂದಿಗೆ ಕೆಲಸ ಮಾಡುವುದರ ಮೂಲಕ ದೇಶ, ರಾಜ್ಯ, ಜಿಲ್ಲೆಯ ಆಸ್ತಿಯಾಗಿ ಎಂದು ತಿಳಿಸಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪಟೇಲ್ ಶಿವಪ್ಪ ಮಾತನಾಡಿ, ದೇಶ, ರಾಜ್ಯ, ಜಿಲ್ಲೆ ಅಭಿವೃದ್ಧಿ ಹೊಂದಬೇಕು ಎಂದರೆ ಸರ್ಕಾರಿ ನೌಕರರ ಪಾತ್ರ ತುಂಬ ಮುಖ್ಯ. ಸರ್ಕಾರಿ ನೌಕರರು ಸರ್ಕಾರದ ಎರಡು ಚಕ್ರ ಇದ್ದಂತೆ, ಉತ್ತಮ ನಡೆಯಬೇಕು ಎಂದರೆ ಸರ್ಕಾರಿ ನೌಕರರು ಕೆಲಸ ಮಾಡಬೇಕು. ಆದ್ದರಿಂದ ಮೊದಲ ಆದ್ಯತೆ ನೌಕರರಿಗೆ ನೀಡಬೇಕು ಎಂದು ಹೇಳಿದರು.
ಸಾರ್ವಜನಿಕರು ಅವರ ಸಮಸ್ಯೆಗಳನ್ನು ಬಗೆಹರಿಸುವ ಅಧಿಕಾರಿಗಳೇ ದೇವರು ಎಂದುಕೊಂಡು ಬರುತ್ತಾರೆ. ಅಂತಹ ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸಲು ಆದ್ಯತೆ ನೀಡಿ ಎಂದು ತಿಳಿಸಿದರು.
ಜಿಲ್ಲಾ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೃಷ್ಣೇಗೌಡ ಮಾತನಾಡಿ, ನೌಕರರು ಅವರ ಮೊದಲ ಆದ್ಯತೆಯನ್ನು ನಾಗರಿಕರ ಕೆಲಸಗಳಿಗೆ ನೀಡಬೇಕು. ಸರ್ಕಾರಿ ನೌಕರರು ಸಾರ್ವಜನಿಕರ ಕೊಂಡಿಯಾಗಿ ಕೆಲಸ ಮಾಡಬೇಕು ಹಾಗೂ ಪ್ರಾಮಾಣಿಕತೆ, ದಕ್ಷತೆ, ತಾಳ್ಮೆ, ಶ್ರದ್ಧೆಯಿಂದ ಕರ್ತವ್ಯವನ್ನು ನಿರ್ವಹಿಸಬೇಕು ಎಂದರು.
ಸಾರ್ವಜನಿಕರು ಸಮಸ್ಯೆಗಳಿಗೆ ಪ್ರತ್ಯಕ್ಷವಾಗಿ ಪರಿಹಾರ ನೀಡಲು ಸಾಧ್ಯವಾಗದಿದ್ದರೆ ಪರೋಕ್ಷವಾಗಿ ಪರಿಹಾರ ನೀಡಬೇಕು ಮತ್ತು ಸಾರ್ವಜನಿಕರ ಪರವಾಗಿ ಕೆಲಸ ಮಾಡಬೇಕು ಎಂದರು.
ಅಪರ ಜಿಲ್ಲಾಧಿಕಾರಿ ಜಗದೀಶ್ ಗಂಗಣ್ಣನವರ್, ತಹಸೀಲ್ದಾರ್ ಗೀತಾ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net