ಕಾಡಾನೆ ದಾಳಿಗೆ ಮಹಿಳೆ ಬಲಿ

ಸಕಲೇಶಪುರ ತಾಲೂಕು ಮೂಗಲಿಯಲ್ಲಿ ಪ್ರತಿಭಟನಾಕಾರರ ಜತೆ ಶಾಸಕ ಸಿಮೆಂಟ್ ಮಂಜು ಚರ್ಚೆ ನಡೆಸಿದರು. ಲತಾ ಕುಮಾರಿ,  ಸೌರಭ್‌ಕುಮಾರ್, ಮಂಜುನಾಥ್, ಮೋಹನ್‌ಕುಮಾರ್,   ಮಾಲತೀಶ್, ಸುಪ್ರಿತಾ ಇತರರು ಇದ್ದರು.
ಸಕಲೇಶಪುರ ತಾಲೂಕು ಮೂಗಲಿಯಲ್ಲಿ ಪ್ರತಿಭಟನಾಕಾರರ ಜತೆ ಶಾಸಕ ಸಿಮೆಂಟ್ ಮಂಜು ಚರ್ಚೆ ನಡೆಸಿದರು. ಲತಾ ಕುಮಾರಿ, ಸೌರಭ್‌ಕುಮಾರ್, ಮಂಜುನಾಥ್, ಮೋಹನ್‌ಕುಮಾರ್, ಮಾಲತೀಶ್, ಸುಪ್ರಿತಾ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮೂಗಲಿ ಗ್ರಾಮಸ್ಥರಿಂದ ಪ್ರತಿಭಟನೆ
  • ಐವತ್ತು ಲಕ್ಷ ರೂ. ಪರಿಹಾರ ನೀಡಲು ಆಗ್ರಹ
ಸಕಲೇಶಪುರ: ತಾಲೂಕಿನ ಮೂಗಲಿ ಗ್ರಾಮದಲ್ಲಿ ಮಂಗಳವಾರ ಕಾಡಾನೆ ದಾಳಿಗೆ ಮಹಿಳೆಯೊಬ್ಬರು ಬಲಿಯಾಗಿದ್ದಾರೆ.
ಶೋಭಾ (45) ಮೃತರು. ತೋಟದಲ್ಲಿ ತಾಯಿ ರಾಜಮ್ಮ ಹಾಗೂ ನೆರೆಮನೆಯ ಮಹಿಳೆಯೊಂದಿಗೆ ಕೆಲಸ ಮಾಡುತ್ತಿದ್ದ ವೇಳೆ ಕಾಡಾನೆ ದಾಳಿ ನಡೆಸಿದೆ. ಈ ವೇಳೆ ಇಬ್ಬರು ಮಹಿಳೆಯರು ತೋಟದ ಕೆಳಭಾಗಕ್ಕೆ ಓಡಿ ತಪ್ಪಿಸಿಕೊಂಡಿದ್ದಾರೆ. ಆದರೆ, ಶೋಭಾರನ್ನು ಅಟ್ಟಿಸಿಕೊಂಡು ಹೋಗಿ ಕಾಡಾನೆ ತುಳಿದು ಸಾಯಿಸಿದೆ. ಆಕೆಯ ಪತಿಯ ತವರೂರಾದ ಹಾಸನದ ಸತ್ತಿಗರಹಳ್ಳಿಯಲ್ಲಿ ಬುಧವಾರ ಮೃತರ ಅಂತ್ಯಕ್ರಿಯೆ ನಡೆಯಲಿದೆ.
ಘಟನೆಯಿಂದ ಆಕ್ರೋಶಗೊಂಡ ಗ್ರಾಮಸ್ಥರು ರಾಜ್ಯ ಹೆದ್ದಾರಿ-112 ತಡೆದು ಮಾಡಿ ಪ್ರತಿಭಟನೆ ನಡೆಸಿದರು. ಕಾಡಾನೆ ಹಾವಳಿ ತಡೆಗೆ ಶಾಶ್ವತ ಪರಿಹಾರ ಹಾಗೂ ಮೃತ ಮಹಿಳೆಯ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ನೀಡಬೇಕು. ಎರಡು ದಶಕದಲ್ಲಿ ಕಾಡಾನೆ ದಾಳಿಗೆ 92 ಜನರು ತುತ್ತಾಗಿದ್ದಾರೆ. ಆದರೂ ಸರ್ಕಾರಗಳು ಯಾವುದೇ ಪರಿಹಾರ ಕಂಡುಕೊಂಡಿಲ್ಲ. ತೋಟ-ಗದ್ದೆಗಳಿಗೆ ನಮ್ಮದಿಯಾಗಿ ಹೋಗಿಬರುವುದು ಅಸಾಧ್ಯವಾಗಿದೆ. ಸ್ಥಳಕ್ಕೆ ಅರಣ್ಯ ಸಚಿವ ಆಗಮಿಸಬೇಕು ಎಂದು ಪಟ್ಟುಹಿಡಿದರು. ರಾಜ್ಯ ಹೆದ್ದಾರಿ ಬಂದ್‌ನಿಂದಾಗಿ ಬೇಲೂರು-ಬೆಳಗೊಡು-ಸಕಲೇಶಪುರ ಮಾರ್ಗದ ವಾಹನಗಳ ಸಂಚಾರ ಕೆಲಕಾಲ ವ್ಯತ್ಯಯವಾಗಿತ್ತು.
ಸ್ಥಳಕ್ಕೆ ಬಂದ ಶಾಸಕ ಸಿಮೆಂಟ್ ಮಂಜು ಮಾತನಾಡಿ, ಮೃತ ಕುಟುಂಬಕ್ಕೆ 50 ಲಕ್ಷ ರೂ.ಪರಿಹಾರ ಕೊಡಬೇಕು. ಆದರೆ, ಪರಿಹಾರ ಮೊತ್ತದ ಘೋಷಣೆ ಸಚಿವ ಸಂಪುಟದಲ್ಲಿ ಆಗಬೇಕಿದೆ. ಈ ಬಗ್ಗೆ ಅರಣ್ಯ ಸಚಿವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ನಮ್ಮ ಬೇಡಿಕೆಯನ್ನು ತಿಳಿಸಿದ್ದೇನೆ. ಜ.16 ರಂದು ಪಟ್ಟಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡರ ನೇತೃತ್ವದಲ್ಲಿ ನಡೆಯಲಿರುವ ಜನಸಂಪರ್ಕ ಸಭೆಗೆ ಅರಣ್ಯ ಸಚಿವರು ಆಗಮಿಸಲಿದ್ದಾರೆ. ಅಂದಿನ ಸಭೆಗೂ ಮೊದಲು ಬೆಳೆಗಾರ ಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಿ ಪರಿಹಾರ ಮೊತ್ತ ಹಾಗೂ ಕಾಡಾನೆ ಸಮಸ್ಯೆ ಪರಿಹಾರದ ಬಗ್ಗೆ ಚರ್ಚೆ ನಡೆಸೋಣ ಎಂದರು. ಆದರೂ ಪಟ್ಟು ಸಡಿಲಿಸದ ಪ್ರತಿಭಟನಕಾರರು ಸ್ಥಳದಲ್ಲೆ ಪರಿಹಾರದ ಮೊತ್ತ ಘೋಷಣೆಯಾಗಬೇಕು ಎಂದು ಪಟ್ಟುಹಿಡಿದರು.
ಮೃತ ಮಹಿಳೆಯ ಕುಟುಂಬಕ್ಕೆ ಸರ್ಕಾರದ ಎಲ್ಲ ನೆರವನ್ನು ನೀಡಲಾಗುವುದು ಹಾಗೂ ಸ್ಥಳದಲ್ಲಿ 20 ಲಕ್ಷ ರೂ. ಪರಿಹಾರದ ಚೆಕ್ ನೀಡುವುದಲ್ಲದೆ ಜಿಲ್ಲಾಧಿಕಾರಿ ಪರಿಹಾರ ನಿಧಿಯಿಂದ ನಾಲ್ಕು ಲಕ್ಷ ರೂ. ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಲತಾಕುಮಾರಿ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.
ಜಿಲ್ಲಾಧಿಕಾರಿ ಲತಾಕುಮಾರಿ ಮಾತನಾಡಿ, ಕಾಡಾನೆ ದಾಳಿಯಿಂದ ತಪ್ಪಿಸಿಕೊಳ್ಳಲು ಜನರು ಮುನ್ನೆಚ್ಚರಿಕೆ ವಹಿಸುವುದು ಅವಶ್ಯ. ಸಮಸ್ಯೆ ಪರಿಹಾರದ ಬಗ್ಗೆ ತಜ್ಞರೊಂದಿಗೆ ಚರ್ಚೆ ನಡೆಸಿ ಸರ್ಕಾರಕ್ಕೆ ವರದಿ ನೀಡುವೆ ಎಂದರು.
ಸ್ಥಳದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಸೌರಭ್‌ಕುಮಾರ್, ಉಪವಿಭಾಗಾಧಿಕಾರಿ ಮಂಜುನಾಥ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮೋಹನ್‌ಕುಮಾರ್, ಡಿವೈಎಸ್‌ಪಿ ಮಾಲತೀಶ್, ತಹಸೀಲ್ದಾರ್ ಸುಪ್ರಿತಾ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net