ಹೋರಾಟಗಾರರ ಮೇಲಿನ ಕೇಸ್ ವಾಪಸ್ ಪಡೆಯಿರಿ

ಸಿಮೆಂಟ್ ಮಂಜು
ಸಿಮೆಂಟ್ ಮಂಜು
Published on

ಪ್ರಮುಖ ಮುಖ್ಯಾಂಶಗಳು

  • ಹೋರಾಟಗಾರರ ಮೇಲಿನ ಕೇಸ್ ವಾಪಸ್ ಪಡೆಯಿರಿ
  • ರಾಜ್ಯ ಸರ್ಕಾರಕ್ಕೆ ಶಾಸಕ ಸಿಮೆಂಟ್ ಮಂಜು ಆಗ್ರಹ
  • ಅರ್ಜುನ ಆನೆ ಸ್ಮಾರಕ ವಿಚಾರವಾಗಿ ಪ್ರತಿಭಟಿಸಿದ್ದ ಸ್ಥಳೀಯರು
ಹಾಸನ: ವಿಶ್ವವಿಖ್ಯಾತ ದಸರಾದ ಅಂಬಾರಿ ಆನೆ ಅರ್ಜುನನ ಸ್ಮಾರಕ ನಿರ್ಮಾಣ ವಿಚಾರದಲ್ಲಿ ಹೋರಾಟ ನಡೆಸಿದ ಹೋರಾಟಗಾರರು ಹಾಗೂ ಸ್ಥಳೀಯ ಯುವಕರ ಮೇಲೆ ದಾಖಲಿಸಿರುವ ಪ್ರಕರಣಗಳನ್ನು ಸರ್ಕಾರ ತಕ್ಷಣವೇ ವಾಪಸ್ ಪಡೆಯಬೇಕು ಎಂದು ಶಾಸಕ ಸಿಮೆಂಟ್ ಮಂಜು ಬೆಳಗಾವಿಯ ಸುವರ್ಣಸೌಧದಲ್ಲಿ ಜರುಗಿದ ಚಳಿಗಾಲದ ಅಧಿವೇಶನದಲ್ಲಿ ಶುಕ್ರವಾರ ಆಗ್ರಹಿಸಿದರು.
ಗಮನ ಸೆಳೆಯುವ ಸೂಚನೆಯಡಿ ಸದನದಲ್ಲಿ ಮಾತನಾಡಿದ ಅವರು, 2023ರ ಡಿಸೆಂಬರ್ 4ರಂದು ತಾಲೂಕಿನ ಯಸಳೂರು ಹೋಬಳಿಯ ದಬ್ಬಳ್ಳಿಕಟ್ಟೆಯಲ್ಲಿ ಕಾಡಾನೆ ಸೆರೆ ಹಿಡಿಯುವ ಕಾರ್ಯಾಚರಣೆ ವೇಳೆ ವಿಶ್ವವಿಖ್ಯಾತ ಅರ್ಜುನ ಆನೆ ಮೃತಪಟ್ಟಿದ್ದ ಘಟನೆ ಜನಮಾನಸದಲ್ಲಿ ನೋವುಂಟು ಮಾಡಿತ್ತು. ಅರ್ಜುನ ಆನೆಯ ಮೃತದೇಹವನ್ನು ಮುಖ್ಯ ರಸ್ತೆಯ ಬದಿಯಲ್ಲಿ ಅಂತ್ಯಸಂಸ್ಕಾರ ನಡೆಸಿ ಸ್ಮಾರಕ ನಿರ್ಮಿಸಿದರೆ ಪ್ರವಾಸೋದ್ಯಮಕ್ಕೆ ಉತ್ತೇಜನ ದೊರೆಯುತ್ತದೆ ಎಂಬ ಉದ್ದೇಶದಿಂದ ಸ್ಥಳೀಯರು ಹಾಗೂ ಹೋರಾಟಗಾರರು ಮನವಿ ಮಾಡಿದ್ದರು ಎಂದು ಶಾಸಕರು ವಿವರಿಸಿದರು. ಅರಣ್ಯ ಇಲಾಖೆಯವರು ಈ ಮನವಿಗೆ ಸ್ಪಂದಿಸದ ಹಿನ್ನೆಲೆಯಲ್ಲಿ ಅಂತ್ಯಸಂಸ್ಕಾರದ ಸಮಯದಲ್ಲಿ ಸಣ್ಣ ಗಲಭೆ ಉಂಟಾಗಿತ್ತು. ಈ ಘಟನೆಯನ್ನು ನೆಪವನ್ನಾಗಿ ಮಾಡಿಕೊಂಡು ಪೊಲೀಸರು ಅಪರಿಚಿತರು ಗಲಭೆಗೆ ಕಾರಣ ಎಂದು ಪ್ರಕರಣ ದಾಖಲಿಸಿದ್ದರು. ಇದೀಗ 19 ಜನರಿಗೆ ನ್ಯಾಯಾಲಯದಿಂದ ಸಮನ್ಸ್ ಜಾರಿಗೊಂಡಿದ್ದು, ಅದರಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸದೇ ಇದ್ದ ಅಮಾಯಕರು ಕೂಡ ಸೇರಿರುವುದು ಖಂಡನೀಯ ಎಂದು ಹೇಳಿದರು.
ಅಮಾಯಕರ ಮೇಲೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿರುವುದು ನ್ಯಾಯಸಮ್ಮತವಲ್ಲ. ಡಿಸೆಂಬರ್ 30ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಸಮನ್ಸ್ ನೀಡಿರುವುದು ಅವರ ಬದುಕಿನ ಮೇಲೆ ಗಂಭೀರ ಪರಿಣಾಮ ಬೀರುವಂತಿದೆ. ಆದ್ದರಿಂದ ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಹೋರಾಟಗಾರರ ಮೇಲಿನ ಪ್ರಕರಣಗಳನ್ನು ತಕ್ಷಣವೇ ವಾಪಸ್ ಪಡೆಯಬೇಕು ಎಂದು ಸಭಾಧ್ಯಕ್ಷರ ಮೂಲಕ ಸದನದಲ್ಲಿದ್ದ ಗೃಹ ಸಚಿವರು ಹಾಗೂ ಅರಣ್ಯ ಸಚಿವರಿಗೆ ಒತ್ತಾಯಿಸಿದರು.
ಗೃಹ ಸಚಿವರಿಂದ ಸಕಾರಾತ್ಮಕ ಸ್ಪಂದನೆ: ಸದನದಲ್ಲಿ ವಿಷಯ ಪ್ರಸ್ತಾಪಿಸುವ ಮೊದಲು ಶಾಸಕ ಸಿಮೆಂಟ್ ಮಂಜು ಅವರು ಗೃಹ ಸಚಿವ ಜಿ. ಪರಮೇಶ್ವರ್ ಅವರನ್ನು ಕಚೇರಿಯಲ್ಲಿ ಭೇಟಿ ಮಾಡಿ, ಅರ್ಜುನ ಆನೆ ಸ್ಮಾರಕ ಹೋರಾಟಗಾರರ ಮೇಲಿನ ಪ್ರಕರಣಗಳ ಕುರಿತು ಚರ್ಚೆ ನಡೆಸಿದರು. ಇದಕ್ಕೆ ಸ್ಪಂದಿಸಿದ ಗೃಹ ಸಚಿವರು, ಪ್ರಕರಣದ ಸಂಪೂರ್ಣ ಮಾಹಿತಿಯನ್ನು ಪಡೆದು ಮುಖ್ಯಮಂತ್ರಿ ಹಾಗೂ ಅರಣ್ಯ ಸಚಿವರೊಂದಿಗೆ ಚರ್ಚಿಸಿ, ಹೋರಾಟಗಾರರ ಮೇಲಿನ ಪ್ರಕರಣವನ್ನು ಸರ್ಕಾರ ವಾಪಸ್ ಪಡೆಯುವ ಕುರಿತು ನಿರ್ಧಾರ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿರುವುದಾಗಿ ಶಾಸಕ ಸಿಮೆಂಟ್ ಮಂಜು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net