ಪ್ರೇಮ ಪ್ರವಾಹಿನಿ ರಥಕ್ಕೆ ಸ್ವಾಗತ

ಚನ್ನರಾಯಪಟ್ಟಣಕ್ಕೆ ಆಗಮಿಸಿದ್ದ ಶ್ರೀ ಸತ್ಯಸಾಯಿ ಪ್ರೇಮ ಪ್ರವಾಹಿನಿ ರಥಯಾತ್ರೆಯಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದರು.
ಚನ್ನರಾಯಪಟ್ಟಣಕ್ಕೆ ಆಗಮಿಸಿದ್ದ ಶ್ರೀ ಸತ್ಯಸಾಯಿ ಪ್ರೇಮ ಪ್ರವಾಹಿನಿ ರಥಯಾತ್ರೆಯಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದರು.
Published on
ಚನ್ನರಾಯಪಟ್ಟಣ: ಶ್ರೀ ಸತ್ಯಸಾಯಿ ಬಾಬಾ ಅವರ 100ನೇ ಜನ್ಮ ವಾರ್ಷಿಕೋತ್ಸವ ಪ್ರಯುಕ್ತ ದೇಶಾದ್ಯಂತ ಸಂಚರಿಸುತ್ತಿರುವ ಶ್ರೀ ಸತ್ಯಸಾಯಿ ಪ್ರೇಮ ಪ್ರವಾಹಿನಿ ರಥಯಾತ್ರೆಯೂ ಗುರುವಾರ ಪಟ್ಟಣಕ್ಕೆ ಆಗಮಿಸಿದ್ದ ಸಂದರ್ಭ ಸಾವಿರಾರು ಜನರು ಸ್ವಾಗತಿಸಿದರು.
ಆಂಧ್ರಪ್ರದೇಶದ ಪುಟ್ಟಪರ್ತಿಯಿಂದ ಆರಂಭಗೊಂಡ ಈ ರಥಯಾತ್ರೆ ಶಿವಮೊಗ್ಗ, ಚಿಕ್ಕಮಗಳೂರು ಮಾರ್ಗವಾಗಿ ಹಾಸನ ಜಿಲ್ಲೆಗೆ ಆಗಮಿಸಿ ಬೇಲೂರಿನಲ್ಲಿ ರಥಯಾತ್ರೆ ಮುಗಿಸಿ ಗುರುವಾರ ಪಟ್ಟಣದ ಮುಖ್ಯರಸ್ತೆಯಲ್ಲಿ ರಥಯಾತ್ರೆ ಪ್ರಾರಂಭಗೊಂಡಿತು. ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ದೇಶದಾದ್ಯಂತ ಸುಮಾರು 50,000 ಗ್ರಾಮಗಳನ್ನು ಸಂಚರಿಸಿ 3,50,000 ಕಿ.ಮೀ ಯಾತ್ರೆ ಪೂರ್ಣಗೊಳಿಸಿರುವ ಈ ರಥವು ಭಕ್ತರಲ್ಲಿ ವಿಶೇಷ ಭಾವನೆ ಮೂಡಿಸಿತು.
ಬೇಲೂರು ತಾಲೂಕಿನಿಂದ ಚನ್ನರಾಯಪಟ್ಟಣ ತಾಲೂಕಿಗೆ ಬಂದ ರಥವನ್ನು ಶ್ರವಣಬೆಳಗೊಳ ಹೋಬಳಿ ಕೊತ್ತನ ಘಟ್ಟದಲ್ಲಿ ಸ್ವಾಗತಿಸಿ ಪಟ್ಟಣಕ್ಕೆ ಕರೆತರಲಾಯಿತು. ಬಳಿಕ ಕೆಂಪೇಗೌಡ ವೃತದ ಬಳಿಯಿಂದ ಪೂರ್ಣಕುಂಭ, ಕಳಸ, ವೇದಘೋಷ , ಮಂಗಳವಾದ್ಯ, ಕಲಾಮೇಳ, ಚಿಣ್ಣರ ವಿವಿಧ ವೇಷ ಭೂಷಣ, ಭಜನೆಯೊಂದಿಗೆ ಪಟ್ಟಣದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಯಿತು. ಕೆಂಪೇಗೌಡ ವೃತ್ತದಿಂದಲೂ ಸಾವಿರಾರು ಭಕ್ತಾದಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡು ಬಾಬಾ ಸ್ಮರಣೆ ಮಾಡಿದರು. ರಥ ಸಾಗಿದ ಬೀದಿಗಳಲ್ಲಿ ಭಕ್ತರು ಬಾಬಾ ಪಾದುಕಾ ದರ್ಶನ ಪಡೆದರು.
ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳ ಜಿಲ್ಲಾಧ್ಯಕ್ಷ ಡಾ.ಕೆ.ಆರ್.ನಾಗರಾಜ್ ಮಾತನಾಡಿ, ಪ್ರೇಮ ಪ್ರವಾಹಿನಿ ರಥವು ಸಾಮಾನ್ಯ ರಥವಲ್ಲ. ಸ್ವಾಮಿಯೇ ಪಟ್ಟಣಕ್ಕೆ ಆಗಮಿಸಿದಂತೆಯೇ ಭಾವಿಸಬೇಕು. ದೇಶಾದ್ಯಂತ ಐದು ರಥಗಳು ಸಂಚರಿಸುತ್ತಿದ್ದು, ಅವುಗಳಲ್ಲಿ ಒಂದು ರಥ ಪಟ್ಟಣಕ್ಕೆ ಆಗಮಿಸಿದೆ. ಸಾವಿರಾರು ಭಕ್ತರು ದರ್ಶನ ಪಡೆದಿದ್ದಾರೆ. ಭಕ್ತರ ಉತ್ಸಾಹ ಹಾಗೂ ಭಾವನಾತ್ಮಕ ಸ್ವಾಗತ ನೋಡುವುದು ಸಂತೋಷ ತಂದಿದೆ. ಸಾರ್ವಜನಿಕರು, ಮಾಧ್ಯಮಗಳು ಹಾಗೂ ಪೊಲೀಸ್ ಇಲಾಖೆಯವರು ಉತ್ತಮ ಸಹಕಾರ ನೀಡಿದ್ದಾರೆ. ಈ ಸಂಭ್ರಮದಲ್ಲಿ ಪಾಲ್ಗೊಳ್ಳುವುದು ನಮ್ಮ ಭಾಗ್ಯ ಎಂದು ತಿಳಿಸಿದರು.
ರಥಯಾತ್ರೆಯ ಬಳಿಕ ಪಟ್ಟಣದ ಸಿಜಿಎಂಆರ್ ಕಲ್ಯಾಣ ಮಂಟಪದಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ವೇದ ಘೋಷ, ಬಾಲವಿಕಾಸ ಮಕ್ಕಳಿಂದ ಭರತನಾಟ್ಯ, ವಿಷ್ಣು, ಲಲಿತಾ ಸಹಸ್ರನಾಮ, ಸ್ವಾಮಿಯ ಸಂದೇಶ, ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಯ ಯುವಕರಿಂದ ಗೀತಾ ಕಾರ್ಯಕ್ರಮ, ದಿವ್ಯ ದರ್ಶನ, ಪಾದ ನಮಸ್ಕಾರ, ಮಹಾ ಮಂಗಳಾರತಿ, ಬ್ರಹ್ಮಾರ್ಪಣದೊಂದಿಗೆ ಸ್ವಾಮಿಗೆ ನೈವೇದ್ಯ ಹಾಗೂ ಪ್ರಸಾದ ವಿನಿಯೋಗ ನಡೆಯಿತು. ಶುಕ್ರವಾರ ಬೆಳಗ್ಗೆ 6 ಗಂಟೆಗೆ ಓಂಕಾರ, ಸುಪ್ರಭಾತ, ನಗರ ಸಂಕೀರ್ತನೆ ನಂತರ ಮಹಾ ಮಂಗಳಾರತಿಯೊಂದಿಗೆ ರಥವನ್ನು ಹೊಳೆನರಸೀಪುರಕ್ಕೆ ಬೀಳ್ಕೊಡಲಾಯಿತು.
ತಾಲೂಕು ಸಂಚಾಲಕ ಅನಂತಪದ್ಮನಾಭ, ಶ್ರೀ ಸಾಯಿ ಮಂದಿರದ ಭಕ್ತರು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net