ಹಳ್ಳಿ ಸೊಗಡಿನ ಅರಸಿ ಚೆನ್ನಮ್ಮ ವಿಧಿವಶ

 ಚೆನ್ನಮ್ಮ
ಚೆನ್ನಮ್ಮ
Published on

ಪ್ರಮುಖ ಮುಖ್ಯಾಂಶಗಳು

  • ಹಳ್ಳಿ ಸೊಗಡಿನ ಅರಸಿ ಚೆನ್ನಮ್ಮ ವಿಧಿವಶ
  • ಹಮ್ಮು-ಬಿಮ್ಮಿನಿಂದ ಬೀಗದ ಮಹಾತಾಯಿ
  • ಯಾರೇ ಮನೆಗೆ ಬಂದರೂ ಅವರನ್ನು ಉಪಚರಿಸಿ ಕಳಿಸುವ ಯಜಮಾನಿಕೆ
ಕೆ.ಆರ್.ಪ್ರಸಿನ್ ಹಾಸನ
ಎಚ್.ಡಿ. ದೇವೇಗೌಡರ ಕುಟುಂಬ ರಾಜಕೀಯವಾಗಿ ಎಷ್ಟೇ ಎತ್ತರಕ್ಕೆ ಬೆಳೆದರೂ ಚೆನ್ನಮ್ಮ ಮಾತ್ರ ಬಾಗಿದರೇ ಹೊರತು ಬಳುಕಲಿಲ್ಲ. ತಲೆ ತಗ್ಗಿಸಿ ನಡೆದರೇ ಹೊರತು, ಹಮ್ಮು-ಬಿಮ್ಮಿನಿಂದ ಬೀಗಲಿಲ್ಲ. ಗ್ರಾಮೀಣ ಜೀವನ, ಕೃಷಿ ಮತ್ತು ಸರಳತೆಗೆ ಅನ್ವರ್ಥವಾಗಿ ಬದುಕಿದರು.
ಆಚರಿಸಿಕೊಂಡು, ಅನುಸರಿಸಿಕೊಂಡು ಬಂದ ಸಂಪ್ರದಾಯವನ್ನು ಯಾವುದೇ ಸಂದರ್ಭದಲ್ಲೂ ಮೀರಿದವರಲ್ಲ. ಸೀರೆಯೇ ಭೂಷಣ ಎಂದು ಮಾದರಿಯಾದವರು. ಹಾಸನ ಜಿಲ್ಲೆಯ ಜನರ ಪಾಲಿಗೆ ಪ್ರೀತಿಯ ತಾಯಿಯಾಗಿದ್ದರು. ಏಕೆಂದರೆ ಯಾರೇ ಮನೆಗೆ ಬಂದರೂ ಅವರನ್ನು ಉಪಚರಿಸಿ ಕಳಿಸುವ ಯಜಮಾನಿಕೆಯನ್ನು ಅಚ್ಚುಕಟ್ಟಾಗಿ ಮಾಡಿ ಸೈ ಎನಿಸಿಕೊಂಡಿದ್ದಾರೆ.
ಮಾತು ಆಡಿದರೆ ಹೋಯ್ತು, ಮುತ್ತು ಒಡೆದರೆ ಹೋಯ್ತು ಎಂಬಂತೆ ಹಾಸನ ಜಿಲ್ಲೆಯ ಮಗಳಾಗಿ ಮತ್ತು ಸೊಸೆಯಾಗಿ ಮಾದರಿಯ ಹೆಣ್ಣು ಮಗಳಾಗಿದ್ದರು. ಚೆನ್ನಮ್ಮ ಅವರು ಎಂದಿಗೂ ಗಟ್ಟಿದನಿಯಲ್ಲಿ ಮಾತನಾಡಿದವರಲ್ಲ. ದೈವಭಕ್ತಿಯಲ್ಲಿ ಸದಾ ಮುಂದು. ದೇವರು, ಪೂಜೆ-ಪುನಸ್ಕಾರ ಎಂದರೆ ಅಲ್ಲಿ ಮೊದಲಿಗರಾಗಿರುತ್ತಿದ್ದರು. ಮನೆ ಕೆಲಸಕ್ಕೆ ಎಷ್ಟು ಆದ್ಯತೆ ಕೊಡುತ್ತಿದ್ದರೋ, ದೇವರ ಪೂಜೆಗೂ ಅಷ್ಟೇ ಪ್ರಾಧಾನ್ಯ ಕೊಡುತ್ತಿದ್ದರು. ಎಲ್ಲದರಲ್ಲೂ ಇವರು ತೋರುತ್ತಿದ್ದ ಮಡಿವಂತಿಕೆ ಪ್ರತಿಯೊಬ್ಬರಿಗೂ ಮಾದರಿಯಾಗಿತ್ತು.
ದೇವೇಗೌಡರು ಹುಟ್ಟೂರು ಬಿಟ್ಟು ಮಕ್ಕಳ ವಿದ್ಯಾಭ್ಯಾಸ ನಿಮಿತ್ತ ಬೆಂಗಳೂರು ಸೇರಿದಾಗ ಚೆನ್ನಮ್ಮ ಅವರು ಜತೆಯಾಗಿ ಹೆಜ್ಜೆ ಹಾಕಿದರೇ ಹೊರತು, ಯಾವುದಕ್ಕೂ ಮರುಮಾತು ಆಡಿದವರಲ್ಲ.
ದೇವೇಗೌಡರು ಪ್ರಧಾನಿ ಆದಾಗ ಕೆಲ ತಿಂಗಳು ದೆಹಲಿಯಲ್ಲಿ ಇದ್ದರೂ ಚೆನ್ನಮ್ಮ ಎಂದೂ ತಾವು ಉಸಿರಾಗಿಸಿಕೊಂಡಿದ್ದ ಗ್ರಾಮೀಣ ಜೀವನವನ್ನು ಕಿಂಚಿತ್ತೂ ಮರೆಯಲಿಲ್ಲ ಎಂಬುದು ಈಗ ಇತಿಹಾಸ.
ಪತಿಯ ಬಗ್ಗೆ ಹೆಚ್ಚು ಮುತುವರ್ಜಿ
ಚೆನ್ನಮ್ಮ ಅವರು ಜೀವನದ ಉದ್ದಕ್ಕೂ ಮಕ್ಕಳ ಜತೆಗೆ ಪತಿಯ ಶ್ರೇಯೋಭಿವೃದ್ಧಿಯನ್ನು ಹೆಚ್ಚು ಬಯಸಿದವರು. ಇಳಿವಯಸ್ಸಿನಲ್ಲೂ ಪತಿಯ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದ್ದರು. ಅವರ ಊಟ-ಉಪಚಾರ, ಮಾತ್ರೆ ಸೇವನೆಯಿಂದ ಹಿಡಿದು ಅವರ ಕಲ್ಯಾಣಕ್ಕಾಗಿಯೇ ಸದಾ ಪ್ರಾರ್ಥಿಸುತ್ತಿದ್ದರು. ದೇವೇಗೌಡರೂ ಅಷ್ಟೇ ಕಾಳಜಿ-ಗೌರವವನ್ನು ಪತ್ನಿಯ ಬಗ್ಗೆ ಹೊಂದಿದ್ದರು. ಹೀಗಾಗಿಯೇ 72 ವರ್ಷಗಳ ಸುದೀರ್ಘ ದಾಂಪತ್ಯ ಜೀವನದಲ್ಲಿ ಇಬ್ಬರೂ ಮಾದರಿ ಸತಿ-ಪತಿಗಳಾಗಿ ಬಾಳಿದರು.
ಚೆನ್ನಮ್ಮ ಹಿನ್ನೆಲೆ:
ಪತಿ ದೇವೇಗೌಡರ ಹುಟ್ಟೂರು ಹರದನಹಳ್ಳಿಗೆ ಹತ್ತಿರವೇ ಇರುವ ಮುತ್ತಿಗೆ ಹಿರೆಹಳ್ಳಿಯ ಚೆನ್ನಮ್ಮ ಅವರ ತಂದೆ ಹೆಸರೂ ದೇವೇಗೌಡ, ತಾಯಿ ಕಾಳಮ್ಮ. ಆಗಲೇ ಚೆನ್ನಮ್ಮ ಎಸ್‌ಎಸ್‌ಎಲ್‌ಸಿವರೆಗೂ ಶಿಕ್ಷಣ ಪಡೆದಿದ್ದರು. ದೇವೇಗೌಡ-ಕಾಳಮ್ಮ ದಂಪತಿಯ ಹಿರಿಯ ಮಗಳಾಗಿದ್ದ ಚೆನ್ನಮ್ಮ ಅವರಿಗೆ ನಾಲ್ವರು ತಮ್ಮಂದಿರು. ಮೂವರು ತಂಗಿಯರು. ಹಿರಿಯ ಮಗಳಾಗಿ ಒಡಹುಟ್ಟಿದವರನ್ನು ಸಾಕ್ಷಾತ್ ತಾಯಿಯಂತೆ ಸಾಕಿ ಸಲಹಿದ್ದು ಇದೇ ಚೆನ್ನಮ್ಮ.
ಹರದನಹಳ್ಳಿಯಲ್ಲಿ ಜನನ!
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹುಟ್ಟಿದ್ದು ಹೊಳೆನರಸೀಪುರ ತಾಲೂಕಿನ ಹರದನಹಳ್ಳಿಯಲ್ಲಿ. ಕಾಕತಾಳೀಯ ಎಂಬಂತೆ ಅವರ ಪತ್ನಿ ಚೆನ್ನಮ್ಮ ಅವರು ಹುಟ್ಟಿದ್ದೂ ಹರದನಹಳ್ಳಿಯಲ್ಲಿಯೇ. ದೇವೇಗೌಡರ ತಂದೆ ದೊಡ್ಡೇಗೌಡರ 2ನೇ ಪತ್ನಿ ದೇವಮ್ಮ ಅವರ ಮಗ ಎಚ್.ಡಿ.ದೇವೇಗೌಡರು. ಹಾಗೆಯೇ ಚೆನ್ನಮ್ಮ ಕೂಡ ಮುತ್ತಿಗೆ ಹಿರೇಹಳ್ಳಿಯ ಸಿರಿವಂತ ಪಟೇಲ್ ದೇವೇಗೌಡರ 2ನೇ ಹೆಂಡತಿ ಕಾಳಮ್ಮ ಅವರ ಮಗಳು. ಚೆನ್ನಮ್ಮ ಅವರ ತವರು ಮನೆ ಹಾಸನ ತಾಲೂಕು ಮುತ್ತಿಗೆ ಹಿರೇಹಳ್ಳಿ. ಚೆನ್ಮಮ್ಮ ಅವರ ತಾಯಿಯ ತವರೂರು ಹರದನಹಳ್ಳಿ. ಹರದನಹಳ್ಳಿ ಮತ್ತು ಮುತ್ತಿಗೆ ಹಿರೇಹಳ್ಳಿ ನಡುವಿನ ಅಂತರ ಕೇವಲ 4 ಕಿಮೀ ಮಾತ್ರ. ಚೆನ್ನಮ್ಮ ಅವರು ಹಬ್ಬ, ಹರಿದಿನಗಳಿಗೆ ಹರದನಹಳ್ಳಿಯ ಅಜ್ಜ - ಅಜ್ಜಿಯ ಮನೆಗೆ ಹೋಗಿ ಬರುತ್ತಿದ್ದರು. ಹಾಗಾಗಿ ವಿವಾಹದ ಪೂರ್ವದಲ್ಲೇ ದೇವೇಗೌಡರು ಹಾಗೂ ಚನ್ನಮ್ಮ ಅವರಿಗೆ ಪರಿಚಯವಿತ್ತು.
ಮುತ್ತಿಗೆ ಹಿರೇಹಳ್ಳಿಯ ಪಟೇಲ್ ದೇವೇಗೌಡ - ಹರದನಹಳ್ಳಿಯ ಕಾಳಮ್ಮ ದಂಪತಿ ಹಿರಿಯ ಪುತ್ರಿ ಚೆನ್ನಮ್ಮ ಅವರು ಜನಿಸಿದ್ದು 1937 ರಲ್ಲಿ. ಅವರು ಪ್ರಾಥಮಿಕ ಶಿಕ್ಷಣ ಪಡೆದದ್ದು ಮುತ್ತಿಗೆ ಹಿರೇಹಳ್ಳಿಯಲ್ಲಿ. ಮಾಧ್ಯಮಿಕ ಶಿಕ್ಷಣ ಪಡೆದದ್ದು ಹೊಳೆನರಸೀಪುರ ತಾಲೂಕಿನ ಹೋಬಳಿ ಕೇಂದ್ರ ಹಳೆಕೋಟೆ ಶಾಲೆಯಲ್ಲಿ. ಮುತ್ತಿಗೆ ಹಿರೇಹಳ್ಳಿ-ಹಳೆಕೋಟೆ ನಡುವಿನ ಅಂತರ 5 ಕಿ. ಮೀ. ಸ್ವಗ್ರಾಮದಿಂದ 5 ಕಿ.ಮೀ. ನಡೆದುಕೊಂಡೇ ಹೋಗಿ ಚೆನ್ನಮ್ಮ ಲೋಯರ್ ಸೆಕೆಂಡರಿ (ಎಲ್‌ಎಸ್) ಶಿಕ್ಷಣ ಪೂರೈಸಿದರು. ಪ್ರೌಢಶಿಕ್ಷಣಕ್ಕೆ ದೂರದೂರಿಗೆ ಕಳುಹಿಸಲು ಅವರ ತಂದೆ ಒಪ್ಪಲಿಲ್ಲವಾದ ಕಾರಣ ಚೆನ್ನಮ್ಮ ಅವರ ಶಿಕ್ಷಣ ಎಲ್‌ಎಸ್ ಗೆ ಸೀಮಿತವಾಗಿತ್ತು.
17ನೇ ವಯಸ್ಸಿಗೇ ವಿವಾಹ
ಚೆನ್ನಮ್ಮ -ಎಚ್.ಡಿ.ದೇವೇಗೌಡ ವಿವಾಹ ನಡೆದದ್ದು 1954ರ ಮೇ 25ರಂದು ಮುತ್ತಿಗೆ ಹಿರೇಹಳ್ಳಿಯಲ್ಲಿ. ಆಗ ಎಚ್.ಡಿ.ದೇವೇಗೌಡರ ವಯಸ್ಸು 21, ಚೆನ್ನಮ್ಮ ಅವರ ವಯಸ್ಸು 17. ಅಂದು ದೇವೇಗೌಡರು ಸಿವಿಲ್ ಕಂಟ್ರಾೃಕ್ಟರ್ ಆಗಿದ್ದರು. ಎಚ್.ಡಿ.ದೇವೇಗೌಡ - ಚೆನ್ನಮ್ಮ ದಂಪತಿಗೆ ನಾಲ್ವರು ಪುತ್ರರು, ಇಬ್ಬರು ಪುತ್ರಿಯರು ಸೇರಿ 6 ಮಂದಿ ಮಕ್ಕಳು. ಹಿರಿಯ ಮಗ ಎಚ್.ಡಿ.ಬಾಲಕೃಷ್ಣಗೌಡ, 2ನೇ ಮಗ ಎಚ್.ಡಿ.ರೇವಣ್ಣ, 3ನೇ ಮಗ ಎಚ್.ಡಿ.ಕುಮಾರಸ್ವಾಮಿ, 4ನೇ ಮಗ ಡಾ.ಎಚ್. ಡಿ. ರಮೇಶ್, ಅನಸೂಯ ಹಿರಿಯ ಮಗಳು, ಶೈಲಜಾ 2ನೇ ಮಗಳು.
ಅಪಾರ ದೈವ ಭಕ್ತೆಯಾಗಿದ್ದ ಚೆನ್ನಮ್ಮ
ಹೊಳೆನರಸೀಪುರ: ಅಪಾರ ದೈವ ಭಕ್ತೆ ಆಗಿದ್ದ ಚೆನ್ನಮ್ಮ ಅವರು ಎಚ್.ಡಿ.ದೇವೇಗೌಡರ ಜತೆ ತಪ್ಪದೆ ತಾಲೂಕಿನ ದೇವಸ್ಥಾನಗಳಿಗೆ ಆಗಮಿಸುತ್ತಿದ್ದರು.
ಮಹಾಶಿವರಾತ್ರಿಯ ದಿನದಂದು ಮನೆದೇವರು ಹರದನಹಳ್ಳಿಯ ಈಶ್ವರ ದೇವಾಲಯಕ್ಕೆ ಆಗಮಿಸಿ ದರ್ಶನ ಪಡೆಯುತ್ತಿದ್ದರು. ಹಳೆಕೋಟೆಯ ಬೆಟ್ಟದ ರಂಗನಾಥ ಸ್ವಾಮಿ, ಮಾವಿನ ಕೆರೆಯ ಲಕ್ಷ್ಮೀ ವೆಂಕಟರಮಣನ ದರ್ಶನ ಪಡೆದು ಕಣ್ತುಂಬಿಕೊಳ್ಳುತ್ತಿದ್ದರು. ಕಳೆದ ವರ್ಷ ನ್ಯಾಮನಹಳ್ಳಿಯ ಅನಂತ್ ಕುಮಾರ್ ಬೆಟ್ಟದ ರಂಗನಾಥಸ್ವಾಮಿ ಸನ್ನಿಧಾನದಲ್ಲಿ ಮೂರು ದಿನಗಳ ಕಾಲ ಸಹಸ್ರ ಪುಷ್ಪಾರ್ಚನೆ , ಶತ ಶಾಂತಿ ಹೋಮ, ಪೂಜಾ ಕಾರ್ಯಕ್ರಮಕ್ಕೆ ಗೌಡರ ಜತೆಗೂಡಿ ಭಾಗವಹಿಸಿದ್ದರು. ತಿರುಪತಿಯ ದತ್ತಿ ಇಲಾಖೆಯ ಅಧಿಕಾರಿ ಹಾಗೂ ಅರ್ಚಕರ ತಂಡ ಆಗಮಿಸಿ ಹೋಮ, ಹವನಗಳನ್ನು ನೆರವೇರಿಸಿದ್ದರು.
ಈ ಪೂಜಾ ಕಾರ್ಯಕ್ರಮವೇ ಚೆನ್ನಮ್ಮನವರ ಅಂತಿಮ ಭೇಟಿ ಆಗಿತ್ತು. ದೇವೇಗೌಡರ ಅಂದಿನ ರಾಜಕೀಯ ದಿನಗಳಲ್ಲಿ ತಾಲೂಕಿನಲ್ಲಿ ಹಲವು ಕುಟುಂಬಗಳ ಜತೆ ಉತ್ತಮ ಒಡನಾಟ ಹೊಂದಿದ್ದರು. ಮುಖಂಡರು, ಕಾರ್ಯಕರ್ತರು ಆಹ್ವಾನಿಸಿದ ಶುಭ ಸಮಾರಂಭಗಳಿಗೆ ಚಾಚು ತಪ್ಪದೆ ಭಾಗವಹಿಸುತ್ತಿದ್ದರು. ಇಂದೂ ಕೂಡ ತಾಲೂಕಿನ ಹಲವು ಕುಟುಂಬಗಳು ಚೆನ್ನಮ್ಮನವರು ಆಗಮಿಸಿದ ದಿನಗಳನ್ನು ಸ್ಮರಿಸುತ್ತಾರೆ. ಅವರ ಒಡನಾಟ, ಸರಳತೆ, ಪ್ರೀತಿ ಎಲ್ಲವನ್ನೂ ನೆನೆದು ಹೃದಯತುಂಬಿ ಗುಣಗಾನ ಮಾಡುತ್ತಾರೆ.
ಚೆನ್ನಮ್ಮ ಸರಳತೆ, ಸೌಜನ್ಯದಿಂದ ಕೂಡಿದ ಅವರ ಜೀವನ ಎಲ್ಲರಿಗೂ ಆದರ್ಶಪ್ರಾಯವಾಗಿದೆ.
ಥಾವರಚಂದ್ ಗೆಹಲೋತ್
ರಾಜ್ಯಪಾಲ
ಚೆನ್ನಮ್ಮ ನಿಧನದಿಂದ ತೀವ್ರ ದುಃಖಿತನಾಗಿದ್ದೇನೆ. ಅವರು ಸರಳತೆ, ಶಕ್ತಿ ಮತ್ತು ತಮ್ಮ ಕುಟುಂಬಕ್ಕೆ ಅಚಲ ಬೆಂಬಲದ ಸಂಕೇತವಾಗಿದ್ದರು. ತ್ಯಾಗ, ಮೌಲ್ಯಗಳ ಜೀವನ ಯಾವಾಗಲೂ ಸ್ಮರಣೀಯ
ಡಾ.ರಾಧಾಮೋಹನ್ ದಾಸ್ ಅಗ್ರವಾಲ್, ಬಿಜೆಪಿ ರಾಜ್ಯ ಉಸ್ತುವಾರಿ ಮತ್ತು ರಾಜ್ಯಸಭಾ ಸದಸ್ಯ
ದೇವೇಗೌಡರ ರಾಜಕೀಯ ಮತ್ತು ಹೋರಾಟದ ಬದುಕಿಗೆ ಸದಾ ಬೆನ್ನೆಲುಬಾಗಿ ನಿಂತವರು ಅವರ ಮಡದಿ ಚೆನ್ನಮ್ಮ. ಈ ಆಘಾತದಿಂದ ದೇವೇಗೌಡರ ಕುಟುಂಬ ಆದಷ್ಟು ಬೇಗ ಹೊರಬರಲಿ.
ಡಾ.ಜಿ. ಪರಮೇಶ್ವರ-ಉಪಮುಖ್ಯಮಂತ್ರಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net